ಗ್ರ್ಯಾಂಡ್ ಟೆನಿಸ್ ವೃತ್ತಿಜೀವನಕ್ಕೆ ಸೋಲಿನ ವಿದಾಯ ಹೇಳಿದ ರಾಫೆಲ್ ನಡಾಲ್; ಅಭಿಮಾನಿಗಳು ಭಾವುಕ
ಕನ್ನಡ ಸುದ್ದಿ  /  ಕ್ರೀಡೆ  /  ಗ್ರ್ಯಾಂಡ್ ಟೆನಿಸ್ ವೃತ್ತಿಜೀವನಕ್ಕೆ ಸೋಲಿನ ವಿದಾಯ ಹೇಳಿದ ರಾಫೆಲ್ ನಡಾಲ್; ಅಭಿಮಾನಿಗಳು ಭಾವುಕ

ಗ್ರ್ಯಾಂಡ್ ಟೆನಿಸ್ ವೃತ್ತಿಜೀವನಕ್ಕೆ ಸೋಲಿನ ವಿದಾಯ ಹೇಳಿದ ರಾಫೆಲ್ ನಡಾಲ್; ಅಭಿಮಾನಿಗಳು ಭಾವುಕ

ನೆದರ್ಲ್ಯಾಂಡ್ಸ್ ಆಟಗಾರ ಆಟಗಾರ ಬೊಟಿಕ್ ವ್ಯಾನ್ ಡಿ ಜಾಂಡ್ಶುಲ್ಪ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರಾಫೆಲ್ ನಡಾಲ್ ಸೋಲು ಕಂಡಿದ್ದಾರೆ. ಡೇವಿಸ್ ಕಪ್ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಟೆನಿಸ್‌ ದಿಗ್ಗಜ ನಡಾಲ್‌ ಈ ಹಿಂದೆಯೇ ಹೇಳಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದ ಅವರ ಭಾವುಕ ವಿದಾಯ ಹೇಳಿದ್ದಾರೆ.

ಗ್ರ್ಯಾಂಡ್ ಟೆನಿಸ್ ವೃತ್ತಿಜೀವನಕ್ಕೆ ಸೋಲಿನ ವಿದಾಯ ಹೇಳಿದ ರಾಫೆಲ್ ನಡಾಲ್; ಅಭಿಮಾನಿಗಳು ಭಾವುಕ
ಗ್ರ್ಯಾಂಡ್ ಟೆನಿಸ್ ವೃತ್ತಿಜೀವನಕ್ಕೆ ಸೋಲಿನ ವಿದಾಯ ಹೇಳಿದ ರಾಫೆಲ್ ನಡಾಲ್; ಅಭಿಮಾನಿಗಳು ಭಾವುಕ (REUTERS)

22 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ದಿಗ್ಗಜ ಟೆನಿಸ್‌ ಆಟಗಾರ, ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ರಾಫೆಲ್ ನಡಾಲ್ (Rafael Nadal), ಟೆನಿಸ್‌ಗೆ ಭಾವುಕ ವಿದಾಯ ಹೇಳಿದ್ದಾರೆ. ಸ್ಪೇನ್ ಲೆಜೆಂಡ್‌ ಆಟಗಾರ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ವಿದಾಯ ಪಂದ್ಯದಲ್ಲಿ ಸೋತು, ವೃತ್ತಿಬದುಕಿಗೆ ಸೋಲಿನ ವಿದಾಯ ಹೇಳಿದ್ದಾರೆ. ನೆದರ್ಲೆಂಡ್ಸ್‌ ಆಟಗಾರ ಬೊಟಿಕ್ ವ್ಯಾನ್ ಡಿ ಜಾಂಡ್ಶುಲ್ಪ್ ವಿರುದ್ಧ 4-6, 4-6 ನೇರ ಸೆಟ್‌ಗಳಲ್ಲಿ ನಡಾಲ್‌ ಸೋಲು ಕಂಡರು.

2024ರ ಅಕ್ಟೋಬರ್ ತಿಂಗಳಲ್ಲಿ ನಡಾಲ್ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದರು. ಮೇಲಿಂದ ಮೇಲೆ ಗಾಯಗಳಿಂದ ಬಳಲುತ್ತಿದ್ದ ಅವರು ಆ ನಿರ್ಧಾರಕ್ಕೆ ದಿಢೀರ್‌ ಬಂದರು. ತಮ್ಮ ವೃತ್ತಿಬದುಕಿನಲ್ಲಿ ಡೇವಿಸ್ ಕಪ್ ಕೊನೆಯ ಪಂದ್ಯವಾಗಲಿದೆ ಎಂದು ಅವರು ಹೇಳಿದ್ದರು. ಡೇವಿಸ್ ಕಪ್ ಪಂದ್ಯಕ್ಕೂ ಮುನ್ನ ನಡಾಲ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಇದೀಗ ಡೇವಿಸ್‌ ಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ ಅವರು, ಸೋಲಿನ ವಿದಾಯ ಹೇಳಿದ್ದಾರೆ.

14 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ನಡಾಲ್‌, ತಮ್ಮ 38ರ ಹರೆಯದಲ್ಲಿ ಮೈದಾನದಲ್ಲಿ ಆಡುವಾಗ ತುಸು ಮಂಕಾದಂತೆ ಕಂಡರು. ಪಂದ್ಯ ಆರಂಭಕ್ಕೂ ಮುನ್ನವೇ ಭಾವುಕರಾಗಿ ಕಂಡಿದ್ದ ಆಟಗಾರ, ಸಿಂಗಲ್ಸ್ ಪಂದ್ಯವನ್ನು ನೇರ ಸೆಟ್‌ಗಳಲ್ಲಿ ಬಿಟ್ಟುಕೊಟ್ಟಿದ್ದರಲ್ಲಿ ಆಶ್ಚರ್ಯವೇನಿಲ್ಲ. ತಮ್ಮ ತವರು ನೆಲ ಮಲಗಾದ ಅಭಿಮಾನಿಗಳ ಮುಂದೆ ಆಡಿದ ನಡಾಲ್, ಗೆಲುವಿಗಾಗಿ ತಮ್ಮಿಂದ ಸಾಧ್ಯವಾದ ಅತ್ಯುತ್ತಮ ಪ್ರಯತ್ನ ಮಾಡಿದರು. ಪುನರಾಗಮನಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಿದ ಅವರಿಂದ ಗೆಲ್ಲಲು ಸಾಧ್ಯವಾಗಲಿಲ್ಲ.

ಮೊದಲ ಸೆಟ್‌ನಲ್ಲಿ ನಡಾಲ್ ಡಚ್ ಎದುರಾಳಿ ವಿರುದ್ಧ ಸಾಕಷ್ಟು ಪ್ರತಿರೋಧ ಒಡ್ಡಿದರು. ಆದರೆ, ಎರಡನೇ ಸೆಟ್ ವಿಭಿನ್ನವಾಗಿ ಪ್ರಾರಂಭವಾಯಿತು. ಡಚ್ ಆಟಗಾರ ಪ್ರಾಬಲ್ಯ ಸಾಧಿಸಿದರು. ಕೊನೆಗೂ ತಮ್ಮ ಹಿಡಿತ ಕಾಯ್ದುಕೊಂಡು ಪಂದ್ಯವನ್ನು ನೇರ ಸೆಟ್‌ಗಳಲ್ಲಿ ಗೆದ್ದರು.

ಕೇವಲ ಎರಡನೇ ಸೋಲು

ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ನಡಾಲ್ ತಮ್ಮ ವೃತ್ತಿಜೀವನದಲ್ಲಿ ಕೇವಲ ಎರಡು ಬಾರಿ ಮಾತ್ರ ಡಚ್ ಆಟಗಾರನನ್ನು ಎದುರಿಸಿದ್ದರು. ಆಗ ಒಂದೂ ಸೆಟ್ ಕಳೆದುಕೊಳ್ಳದೆ ಎರಡೂ ಪಂದ್ಯಗಳನ್ನು ಗೆದ್ದಿದ್ದರು. ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ ನಡಾಲ್‌ಗೆ ಇದು ಎರಡನೇ ಸೋಲು. ಟೆನಿಸ್ ಟೂರ್ನಿಯಲ್ಲಿ ಆಡಿರುವ 30 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ 2004ರಲ್ಲಿ ಜೆಕ್ ಗಣರಾಜ್ಯದ ಜಿರಿ ನೊವಾಕ್ ವಿರುದ್ಧ ಸೋಲು ಅನುಭವಿಸಿದ್ದರು.

ರಾಫಾ, ರಾಫಾ ಘೋಷಣೆ

ಸ್ಪ್ಯಾನಿಷ್ ರಾಷ್ಟ್ರಗೀತೆ ಮೊಳಗುವ ಸಮಯದಲ್ಲಿ ನಡಾಲ್ ಭಾವುಕರಾಗಿದ್ದರು. ಮೈದಾನದಲ್ಲಿ ಸೇರಿದ್ದ 10,000ಕ್ಕೂ ಹೆಚ್ಚು ಅಭಿಮಾನಿಗಳು “ರಾಫಾ, ರಾಫಾ” ಎಂಬ ಘೋಷಣೆ ಕೂಗಿದರು. ಪಂದ್ಯದ ಬಳಿಕ ಮಾತನಾಡಿದ ಅವರು, “ನನಗಿದು ಭಾವನಾತ್ಮಕ ದಿನ. ವೃತ್ತಿಪರನಾಗಿ ಕೊನೆಯ ಬಾರಿಗೆ ರಾಷ್ಟ್ರಗೀತೆ ಕೇಳುವ ಭಾವನೆ ತುಂಬಾ ವಿಶೇಷ” ಎಂದರು.‌

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.