ರಾಷ್ಟ್ರಮಟ್ಟದಲ್ಲಿ 3 ಬೆಳ್ಳಿ, 1 ಕಂಚು ಗೆದ್ದರೂ ಆರ್ಥಿಕ ಬಿಕ್ಕಟ್ಟು; ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆಡಲು ವಿಮಾನ ಟಿಕೆಟ್‌ಗೂ ಹಣವಿಲ್ಲ!
ಕನ್ನಡ ಸುದ್ದಿ  /  ಕ್ರೀಡೆ  /  ರಾಷ್ಟ್ರಮಟ್ಟದಲ್ಲಿ 3 ಬೆಳ್ಳಿ, 1 ಕಂಚು ಗೆದ್ದರೂ ಆರ್ಥಿಕ ಬಿಕ್ಕಟ್ಟು; ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆಡಲು ವಿಮಾನ ಟಿಕೆಟ್‌ಗೂ ಹಣವಿಲ್ಲ!

ರಾಷ್ಟ್ರಮಟ್ಟದಲ್ಲಿ 3 ಬೆಳ್ಳಿ, 1 ಕಂಚು ಗೆದ್ದರೂ ಆರ್ಥಿಕ ಬಿಕ್ಕಟ್ಟು; ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆಡಲು ವಿಮಾನ ಟಿಕೆಟ್‌ಗೂ ಹಣವಿಲ್ಲ!

ನೂರು ಮೀಟರ್ ಓಟದಲ್ಲಿ ರಾಷ್ಟ್ರಮಟ್ಟದಲ್ಲಿ ರಜತ, ಕಂಚು ಪದಕ ಗೆದ್ದಿರುವ ಉಡುಪಿಯ ಆಲೂರಿನ ಸಚ್ಚಿದಾನಂದ ದೇವಾಡಿಗ ಅವರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಲು ವಿಮಾನ ಟಿಕೆಟ್​ಗೂ ಹಣಕಾಸಿನ ಕೊರತೆ ಎದುರಾಗಿದೆ. (ವರದಿ - ಹರೀಶ ಮಾಂಬಾಡಿ)

ಸಚ್ಚಿದಾನಂದ ದೇವಾಡಿಗ
ಸಚ್ಚಿದಾನಂದ ದೇವಾಡಿಗ

ಉಡುಪಿ: ನೂರು ಮೀಟರ್ ಓಟದಲ್ಲಿ ರಾಷ್ಟ್ರಮಟ್ಟದಲ್ಲಿ ರಜತ, ಕಂಚು ಪದಕ ಪಡೆದ ಸೆಲೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಸಚ್ಚಿದಾನಂದ ದೇವಾಡಿಗ ಅವರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಲು ವಿಮಾನ ಟಿಕೆಟ್​ಗೆ ಹಣಕಾಸಿನ ಕೊರತೆ ಎದುರಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆಯುವ ಗ್ರಾಂಡ್ ಪಿಕ್ಸ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಇದ್ದರೂ ಭಾಗವಹಿಸುವುದು ಹೇಗೆ ಎಂಬ ಚಿಂತೆ ತಲೆದೋರಿದೆ. ಆಲೂರಿನ 5 ಸೆಂಟ್ಸ್ ನಿವಾಸಿ ಶ್ರೀನಿವಾಸ ದೇವಾಡಿಗ-ಶರಾವತಿ ದೇವಾಡಿಗ ಅವರ ಪುತ್ರ ಸಚ್ಚಿದಾನಂದ. ಶ್ರೀನಿವಾಸ ಅವರ ಇನ್ನೊಬ್ಬ ಪುತ್ರ ಆಲೂರು ಶಾಲೆ 7ನೆ ತರಗತಿಯ ಸೌರವ್ ದೇವಾಡಿಗ ಜಿಲ್ಲಾಮಟ್ಟದ ಚೆಸ್ ಪಂದ್ಯ ವಿಜೇತ.

ಸಚ್ಚಿದಾನಂದ ದೇವಾಡಿಗ ಅವರಿಗೆ ಜೀವನಪೂರ್ತಿ ಔಷಧ ಬೇಕು. ಒಂದು ದಿನ ತಪ್ಪಿದರೂ ಸಮಸ್ಯೆ ಆಗುತ್ತದೆ. ಮಗುವಾಗಿದ್ದಾಗ ಬಿದ್ದು ತಲೆ, ಮೆದುಳಿಗೆ ಸಂಬಂಧಪಟ್ಟ ನರಕ್ಕೆ ಪೆಟ್ಟಾಗಿತ್ತು. ಆಗ ಶ್ರೀನಿವಾಸ ದೇವಾಡಿಗರಿಗೆ ಹೋಟೆಲ್ ಉದ್ಯಮ ಕೈ ಹಿಡಿದಿತ್ತು. ಅಲ್ಲೋ ಇಲ್ಲೋ ಹಣ ಒಟ್ಟು ಮಾಡಿ ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸಿದರೂ ನಿತ್ಯೌಷಧ ತಪ್ಪಲಿಲ್ಲ. 6ನೆ ತರಗತಿವರೆಗೆ ಬೆಂಗಳೂರಿನ ಹಿರಿಯೂರು, 7ನೆ ತರಗತಿಗೆ ಆಲೂರಿಗೆ ಬಂದರು. ಇಲ್ಲಿ ಶಿಕ್ಷಕರಾಗಿದ್ದ ವೀರೇಂದ್ರ ಜೋಗಿ ಅವರ ಮೂಲಕ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಜಿಲ್ಲಾಮಟ್ಟದಲ್ಲಿ ಜಾವೆಲಿನ್ ಎಸೆತ ಹಾಗೂ ಶಾಟ್‌ಪುಟ್‌ನಲ್ಲಿ ಪದಕಗಳ ಸರಮಾಲೆ ಪಡೆದರು. ಅನಂತರ ಶಾಟ್‌ಪುಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದರು. ಕೊರೊನಾ ನಂತರ ಬದುಕು ಬದಲಾಯಿತು.

ಕ್ರೀಡೆ ನಿಂತ ನೀರಾಯಿತು. ಕ್ರೀಡೆಗೆ ತಿಲಾಂಜಲಿ ಇಡುವ ಯೋಚನೆ ಬಂತು. ಆಗ ಬೆಂಬಲ ಕೊಟ್ಟದ್ದು ತಾಯಿಯ ಸಹೋದರ, ಬೆಂಗಳೂರಿನಲ್ಲಿ ಸ್ಪೆಷಲ್ ಒಲಿಂಪಿಕ್ಸ್‌ ಆಥ್ಲೀಟ್​ಗಳಿಗೆ ಕೋಚ್ ಆಗಿರುವ ಮಂಜುನಾಥ ದೇವಾಡಿಗ. ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿ ಸಂಧ್ಯಾ ನಾಯಕ ಅವರು ಪ್ರೋತ್ಸಾಹ ನೀಡಿದರು. ಆದರೆ ಕೋಚ್ ಇರಲಿಲ್ಲ. ರಾಷ್ಟ್ರಮಟ್ಟದಲ್ಲಿ ಆಡಿದರೂ ಪೌಷ್ಟಿಕ ಆಹಾರದ ಸೇವನೆಗೆ ಆರ್ಥಿಕ ಬಲ ಇಲ್ಲದ ಕಾರಣ, ಮಾಹಿತಿಯ ಕೊರತೆಯಿದ್ದ ಕಾರಣ ಪದಕ ಸ್ವಲ್ಪದರಲ್ಲಿ ಕೈ ತಪ್ಪಿತು. ಆಗ ಸಂಧ್ಯಾ ನಾಯಕ ಅವರು ಉಡುಪಿಯ ಅಜ್ಜರಕಾಡಿನ ಸಮರ್ ಅವರ ಮೂಲಕ ಉಚಿತ ತರಬೇತಿಗೆ ಏರ್ಪಾಟು ಮಾಡಿದರು. ಸಚ್ಚಿದಾನಂದ ಪ್ರಸ್ತುತ ಉಡುಪಿ ಎಂಜಿಎಂ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದಾರೆ.

ಗುಜರಾತ್, ದೆಹಲಿ, ಗೋವಾದಲ್ಲಿ ಸಿಪಿಎಸ್‌ಎಫ್‌ಐ (ಸೆಲೆಬ್ರಲ್ ಪಾಲ್ಸಿ ಸ್ಪೋರ್ಟ್ಸ್ ಇಂಡಿಯಾ) ನಡೆಸಿದ ರಾಷ್ಟ್ರಮಟ್ಟದ ಸೆಲೆಬ್ರಲ್ ಪಾಲ್ಸಿ ಅಥ್ಲೇಟಿಕ್ಸ್ ಚಾಂಪಿಯನ್​ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ 19ರ ಒಳಗಿನ ವಯೋಮಾನದ ಒಳಗಿನ 100 ಮೀ. ಹಾಗೂ 20೦ ಮೀ. ಓಟದ ಸ್ಪರ್ಧೆಯಲ್ಲಿ 3 ರಜತ, 1 ಕಂಚಿನ ಪದಕ ಪಡೆದಿದ್ದಾರೆ. ಸರಿಯಾದ ಮಾರ್ಗದರ್ಶನ, ತರಬೇತಿ ದೊರೆತ ಬಳಿಕ ಪದಕ ಗಳಿಸುತ್ತಿದ್ದು ಅದಕ್ಕೂ ಮೊದಲು ಆಡುತ್ತಿದ್ದ ಶಾಟ್‌ಪುಟ್ ಬದಲಾಗಿ ಪೂರ್ಣ ಪ್ರಮಾಣದಲ್ಲಿ ಓಟಕ್ಕಾಗೇ ತರಬೇತಿಯಲ್ಲಿದ್ದಾರೆ. 100 ಮೀ. ಓಟವನ್ನು 13.37 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ವಿಶ್ವದಾಖಲೆ ಇರುವುದು 10.82 ಸೆಕೆಂಡ್.

ಹಣಕಾಸಿನ ಮುಗ್ಗಟ್ಟು; ನೆರವಿಗೆ ಧಾವಿಸಿ

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಶ್ರೀನಿವಾಸ ದೇವಾಡಿಗ ಅವರು ಕಾಲಾಂತರದಲ್ಲಿ ಈಗ ಆಲೂರಿನಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಪತ್ನಿಗೆ ಮನೆವಾರ್ತೆ ಕಾಯಕ. ಮಗನ ಓದಿಗೆ ತೊಂದರೆ ಮಾಡದೇ ಇದ್ದರೂ ದುಬೈಗೆ ಹೋಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಗ ಓಡಲು ವಿಮಾನ ಟಿಕೆಟ್ ಮಾಡಲೂ ಹಣ ಇಲ್ಲ. ಕೋಚ್ ಉಚಿತವಾಗಿದ್ದರೂ ಪೌಷ್ಟಿಕ ಆಹಾರ ಕಣ್ಣಿನಲ್ಲಿ ಕಾಣುವುದೇ ಅಪರೂಪ. 2025ರ ಫೆಬ್ರವರಿಯ ಗ್ರಾಂಡ್ ಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸಿಗೆ ಗರಿ ಮೂಡಿಸುವ ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಂಪರ್ಕ ಸಂಖ್ಯೆ: 7619420649.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.