ಕನ್ನಡ ಸುದ್ದಿ  /  Sports  /  Unusual Update By Axar Patel On Virat Kohli Sickness

Axar on Virat Kohli sickness: 'ಅವರು ರನ್ ಗಳಿಸಿದ ರೀತಿ ನೋಡಿದ್ರೆ ಹಾಗೆ ಅನಿಸಲಿಲ್ಲ'; ಕೊಹ್ಲಿ ಅನಾರೋಗ್ಯ ಕುರಿತು ಅಕ್ಷರ್ ಪ್ರತಿಕ್ರಿಯೆ

“ಅಂತಹ ಬಿಸಿ ವಾತಾವರಣದಲ್ಲಿಯೂ ಅವರು ಉತ್ತಮ ಜೊತೆಯಾಟವನ್ನು ರೂಪಿಸಿದರು. ವಿಕೆಟ್‌ಗಳ ನಡುವೆ ಚೆನ್ನಾಗಿ ಓಡಿ ರನ್‌ ಗಳಿಸಿದರು. ಅವರೊಂದಿಗೆ ಬ್ಯಾಟಿಂಗ್ ಮಾಡಿದ್ದು ಖುಷಿ ಕೊಟ್ಟಿದೆ” ಎಂದು ಅಕ್ಷರ್ ಪಂದ್ಯದ ಬಳಿಕ ಹೇಳಿದ್ದಾರೆ.

ವಿರಾಟ್‌-ಅಕ್ಷರ್‌
ವಿರಾಟ್‌-ಅಕ್ಷರ್‌

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಅಂತಿಮ ಟೆಸ್ಟ್‌ನ ನಾಲ್ಕನೇ ದಿನದಂದು ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತು. ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 570 ರನ್‌ ಗಳಿಸಿತು. ಆರಂಭಿಕ ಆಟಗಾರ ಶುಬ್ಮನ್ ಗಿಲ್ ಟೆಸ್ಟ್‌ನ 3ನೇ ದಿನದಂದು ಅದ್ಭುತ ಶತಕ ಸಿಡಿಸಿದ ನಂತರ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಾಲ್ಕನೇ ದಿನ ಮೂರಂಕಿ ಮೊತ್ತ ದಾಖಲಿಸಿದರು. ಆ ಮೂಲಕ ಮೂರು ವರ್ಷಗಳ ತಮ್ಮ ಟೆಸ್ಟ್ ಶತಕದ ಬರ ನೀಗಿಸಿದರು.

ಅಮೋಘ 186 ರನ್ ಗಳಿಸಿದ ಕೋಹ್ಲಿ ದ್ವಿಶತಕದ ಸಮೀಪದಲ್ಲಿ ಎಡವಿ ಔಟಾದರು. ಆರಂಭದಿಂದಲೂ ನಿಧಾನವಾಗಿ ಬ್ಯಾಟ್‌ ಬೀಸುತ್ತಾ ಬಂದ ಅವರು, ಕೆಳ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್‌ ಪತನವಾದಾಗ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡರು. ಆದರೆ ಟಾಡ್ ಮರ್ಫಿ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿದಾಗ ಡೀಪ್ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು.

ಅವರ ಇನ್ನಿಂಗ್ಸ್‌ನ ನಂತರ, ಕೊಹ್ಲಿಯನ್ನು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ವೇಳೆ ಅವರ ಪತ್ನಿ ಕೂಡಾ ತಮ್ಮ ಪತಿಯನ್ನು ಶ್ಲಾಘಿಸಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ವಿರಾಟ್ ಶತಕ ಸಿಡಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನುಷ್ಕಾ, “ಅನಾರೋಗ್ಯವಿದ್ದರೂ ಶಾಂತವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಆಡುವುದು ನನಗೆ ಯಾವಾಗಲೂ ಸ್ಫೂರ್ತಿ ತುಂಬುತ್ತದೆ,” ಎಂದು ಬರೆದುಕೊಂಡಿದ್ದಾರೆ.

ಇಂದಿನ ದಿನದಾಟದಲ್ಲಿ ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡಾ ತಂಡಕ್ಕೆ ಬಹುಮೂಲ್ಯ ಕೊಡುಗೆ ನೀಡಿದರು. ಸ್ಫೋಟಕ ಆಟವಾಡಿದ ಅವರು, 79 ರನ್ ಗಳಿಸಿದರು. ಅಷ್ಟೇ ಅಲ್ಲದೆ ಕೊಹ್ಲಿ ಜೊತೆಗೂಡಿ 162 ರನ್‌ಗಳ ಜೊತೆಯಾಟವನ್ನು ನಿರ್ಮಿಸಿದರು.

ನಾಲ್ಕನೇ ದಿನದಾಟ ಮುಗಿದ ಬಳಿಕ, ಅನುಷ್ಕಾ ಶರ್ಮಾ ಅವರ ಪೋಸ್ಟ್‌ ವೈರಲ್‌ ಆಯ್ತು. ವಿರಾಟ್‌ ಅನಾರೋಗ್ಯದ ನಡುವೆ ಬ್ಯಾಟ್‌ ಬೀಸಿ ಸೆಂಚುರಿ ಸಿಡಿಸಿದ್ದು ಖಚಿತವಾಯ್ತು. ಈ ಬಗ್ಗೆ ದಿನದಾಟ ಮುಗಿದ ಬಳಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕ್ಷರ್‌ ಪಟೇಲ್‌ ಅವರೊಂದಿಗೆ ಮಾತನಾಡಲಾಯ್ತು. ಇನ್ನಿಂಗ್ಸ್‌ ಆಡುವ ವೇಳೆಗ ಕೊಹ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂದು ಅಕ್ಷರ್‌ಗೆ ಕೇಳಲಾಯಿತು.

“ನನಗೆ ಗೊತ್ತಿಲ್ಲ. ಅವರು ವಿಕೆಟ್‌ಗಳ ನಡುವೆ ರನ್‌ ಗಳಿಸಲು ಓಡುತ್ತಿದ್ದ ರೀತಿ ನೋಡಿದ್ರೆ, ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ತೋರುತ್ತಿರಲಿಲ್ಲ" ಎಂದು ಅಕ್ಷರ್‌ ನಗುತ್ತಾ ಹೇಳಿದ್ದಾರೆ.

“ಅಂತಹ ಬಿಸಿ ವಾತಾವರಣದಲ್ಲಿಯೂ ಅವರು ಉತ್ತಮ ಜೊತೆಯಾಟವನ್ನು ರೂಪಿಸಿದರು. ವಿಕೆಟ್‌ಗಳ ನಡುವೆ ಚೆನ್ನಾಗಿ ಓಡಿ ರನ್‌ ಗಳಿಸಿದರು. ಅವರೊಂದಿಗೆ ಬ್ಯಾಟಿಂಗ್ ಮಾಡಿದ್ದು ಖುಷಿ ಕೊಟ್ಟಿದೆ” ಎಂದು ಅಕ್ಷರ್ ಪಂದ್ಯದ ಬಳಿಕ ಹೇಳಿದ್ದಾರೆ.

ಕೊಹ್ಲಿ ತಮ್ಮ 28ನೇ ಟೆಸ್ಟ್ ಶತಕ ಗಳಿಸುವ ವೇಳೆ ಕೇವಲ ಐದು ಬೌಂಡರಿಗಳನ್ನು ಮಾತ್ರ ಬಾರಿಸಿದ್ದಾರೆ. ಹೀಗಾಗಿ, ಅವರು ಸೂಕ್ಷ್ಮ ಮತ್ತು ತಾಳ್ಮೆಯ ಆಟವಾಡಿದ್ದಾರೆ ಎಂಬುದು ಖಚಿತವಾಗುತ್ತದೆ. ಅವರು ಕ್ರೀಸ್‌ನಲ್ಲಿರುವಾಗ ಮುಖ್ಯವಾಗಿ ಒಂದು ಮತ್ತು ಎರಡು ರನ್‌ ಗಳಿಸುವತ್ತ ಹೆಚ್ಚು ಅವಲಂಬಿತರಾಗಿದ್ದರು ಎಂಬುದು ಇದರಿಂದಲೇ ತಿಳಿಯುತ್ತದೆ.

ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75ನೇ ಶತಕ ಸಿಡಿಸಿದ ವಿರಾಟ್‌, ಆಸ್ಟ್ರೇಲಿಯಾ ವಿರುದ್ಧ ತಮ್ಮ ಅತ್ಯಧಿಕ ಟೆಸ್ಟ್ ಸ್ಕೋರ್ ದಾಖಲಿಸಿದರು. ಆದರೆ ಕೇವಲ 14 ರನ್‌ಗಳ ಕೊರತೆಯಿಂದ ದ್ವಿಶತಕ ವಂಚಿತರಾದರು. ಒಂದು ವೇಳೆ ಕೊಹ್ಲಿ ದ್ವಿಶತಕ ಸಿಡಿಸಿದ್ದರೆ, ಎಲ್ಲಾ 'ಸೇನಾ'(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳ ವಿರುದ್ಧವೂ 200+ ಸ್ಕೋರ್‌ಗಳನ್ನು ದಾಖಲಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗುತ್ತಿದ್ದರು.