ಕನ್ನಡ ಸುದ್ದಿ  /  Sports  /  Up Warriors Qualify For The Playoffs In Wpl 2023

WPL 2023: ರೋಚಕ ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಯುಪಿ; ಆರ್‌ಸಿಬಿ ಮತ್ತು ಗುಜರಾತ್‌ ಟೂರ್ನಿಯಿಂದ ಹೊರಕ್ಕೆ

ಗುಜರಾತ್‌ ಹಾಗೂ ಆರ್‌ಸಿಬಿ ತಂಡಗಳು ಆವೃತ್ತಿಯ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿವೆ.

ಯುಪಿ ವಾರಿಯರ್ಸ್
ಯುಪಿ ವಾರಿಯರ್ಸ್

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಜ್ ರೋಚಕ ಜಯ ಗಳಿಸಿದೆ. ಆ ಮೂಲಕ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಚೊಚ್ಚಲ ಆವೃತ್ತಿಯ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಿದೆ. ಇದೇ ವೇಳೆ ಗುಜರಾತ್‌ ಹಾಗೂ ಆರ್‌ಸಿಬಿ ತಂಡಗಳು ಆವೃತ್ತಿಯ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿವೆ.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತಂಡವು 6 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತು. ತಂಡದ ಪರ ಹೇಮಲತಾ ಹಾಗೂ ಗಾರ್ಡನರ್‌ ಉತ್ತಮ ಪ್ರದರ್ಶನ ನೀಡಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯುಪಿ, ಗ್ರೇಸ್‌ ಹ್ಯಾರಿಸ್‌ ಹಾಗೂ ಮೆಕ್‌ಗ್ರಾತ್‌ ಅಮೋಘ ಆಟದ ನೆರವಿನಿಂದ 19.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಆ ಮೂಲಕ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಪ್ಲೇ ಆಫ್‌ ಪ್ರವೇಶಿಸಿತು. ಯುಪಿ ಈ ಆವೃತ್ತಿಯ ಪ್ಲೇ ಆಫ್‌ ಪ್ರವೇಶಿಸಿದ ಮೂರನೇ ತಂಡವಾಯ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌, ಉತ್ತಮ ಪ್ರದರ್ಶನ ನೀಡಿತು. ಆರಂಭ ವೇಗವಾಗಿದ್ದರೂ, ನಡುವೆ ಕೆಲ ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆದರೆ, ಹೇಮಲತಾ ಹಾಗೂ ಗಾರ್ಡನರ್‌ ಉತ್ತಮ ಪ್ರದರ್ಶನ ನೀಡಿ, ತಂಡದ ಮೊತ್ತ ಹೆಚ್ಚಿಸಿದರು. ಹೇಮಲತಾ 57 ರನ್‌ ಗಳಿಸಿದರೆ, ಗಾರ್ಡನರ್‌ 60 ರನ್‌ ಗಳಿಸಿ ಮಿಂಚಿದರು.

ಯುಪಿ ಪರ ಅಮೋಘ ಆಟವಾಡಿದ ಗ್ರೇಸ್‌ ಹ್ಯಾರಿಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 41 ಎಸೆತಗಳಲ್ಲಿ 7‌ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ ಸಹಿತ ಅವರು 72 ರನ್‌ ಗಳಿಸಿದರು. ಇದೇ ವೇಳೆ ಇವರಿಗೆ ಉತ್ತಮ ಸಾಥ್‌ ನೀಡಿದ ತಹ್ಲಿಯಾ ಮೆಕ್‌ಗ್ರಾತ್‌, 38 ಎಸೆತಗಳಿಂದ 57 ರನ್‌ ಸಿಡಿಸಿದರು.ಅಂತಿಮವಾಗಿ ಸೋಫಿ ಎಕ್ಲೆಸ್ಟನ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈಗಾಗಲೇ ಡೆಲ್ಲಿ ಹಾಗೂ ಮುಂಬೈ ತಂಡಗಳು ಪ್ಲೇ ಆಫ್‌ ಟಿಕೆಟ್‌ ಗಿಟ್ಟಿಸಿಕೊಂಡಿವೆ. ಮೂರನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಗುಜರಾತ್‌ ಮಣಿಸಿದ ಯುಪಿ ಆ ಸ್ಥಾನವನ್ನು ಭರ್ತಿ ಮಾಡಿದೆ.