ಕನ್ನಡ ಸುದ್ದಿ  /  Sports  /  Up Warriorz Vs Mumbai Indians Women Wpl Match Report

Women's Premier League: ಗೆಲುವಿನ ನಾಗಾಲೋಟ ಮುಂದುವರೆಸಿದ ಮುಂಬೈ; ಕೌರ್ ಪಡೆಗೆ ಸತತ ನಾಲ್ಕನೇ ವಿಜಯ

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಸೋಮವಾರದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಇದುವರೆಗೂ ಟೂರ್ನಿಯಲ್ಲಿ ಗೆಲುವು ಕಾಣದ ಬೆಂಗಳೂರು ಟೂರ್ನಿಯಲ್ಲಿ ಉಳಿಯಲು ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ.

ಹರ್ಮನ್‌ಪ್ರೀತ್‌ ಕೌರ್‌
ಹರ್ಮನ್‌ಪ್ರೀತ್‌ ಕೌರ್‌

ಮುಂಬೈ: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌(Women's Premier League)ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಯುಪಿ ವಾರಿಯರ್ಸ್‌ (UP Warriorz) ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿದೆ. ಆ ಮೂಲಕ ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಸತತ ನಾಲ್ಮನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರೆಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಯುಪಿ, ನಾಯಕಿ ಅಲಿಸಾ ಹೀಲಿ ಮತ್ತು ತಹಿಲಾ ಮೆಕ್‌ಗ್ರಾತ್‌ ತಲಾ ಅರ್ಧಶತಕದಾಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ಆರಂಭಿಸಿದ ಬಲಿಷ್ಠ ಮುಂಬೈ, ತಾಳ್ಮೆಯ ಆಟ ಪ್ರದರ್ಶಿಸಿತು. ಅಂತಿಮವಾಗಿ 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 164 ರನ್ ಗಳಿಸಿ ಗುರಿ ತಲುಪಿತು.

ಮುಂಬೈ ಪರ ಯಾಸ್ತಿಕಾ ಭಾಟಿಯಾ 42 ರನ್‌ ಗಳಿಸಿದರೆ, ನಾಯಕಿಯಾಟವಾಡಿದ ಹರ್ಮನ್‌ಪ್ರೀತ್‌ ಕೌರ್‌ ಅಜೇಯ 53 ರನ್‌ ಗಳಿಸಿದರು. ಇವರಿಗೆ ಸಾಥ್‌ ನೀಡಿದ ನಟಾಲಿ ಸಿವರ್‌ ಬ್ರಂಟ್‌ ಅಜೇಯ 45 ರನ್‌ ಸಿಡಿಸಿದರು. ಇವರ ಶತಕದ ಜೊತೆಯಾಟದ ನೆರವಿನಿಂದ ತಂಡವು 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಯುಪಿ ಪರ ಸ್ಫೋಟಕ ಆಟವಾಡಿದ ನಾಯಕಿ ಹೀಲಿ 58 ರನ್‌ ಗಳಿಸಿದರು. ಮತ್ತೊಂದೆಡೆ ಇವರಿಗೆ ಸಾಥ್‌ ನೀಡಿದ ಮೆಕ್‌ಗ್ರಾತ್‌ 50 ರನ್‌ ಸಿಡಿಸಿ ಔಟಾದರು. ಮುಂಬೈ ಪರ ಮತ್ತೆ ಮಿಂಚಿದ ಪರ್ಪಲ್‌ ಕ್ಯಾಪ್‌ ಹೋಲ್ಡರ್‌ ಸೈಕಾ ಇಶಾಕ್‌ ಮೂರು ವಿಕೆಟ್‌ ಪಡೆದು ಮಿಂಚಿದರು.

ಈ ಸೋಲಿನೊಂದಿಗೆ ಯುಪಿ ವಾರಿಯರ್ಸ್‌ ಟೂರ್ನಿಯಲ್ಲಿ ಎರಡನೇ ಸೋಲು ಕಂಡಂತಾಗಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಭರ್ಜರಿ ಹತ್ತು ವಿಕೆಟ್‌ಗಳಿಂದ ಗೆದ್ದಿದ್ದ ಹೀಲಿ ಪಡೆಯು ಈ ಪಂದ್ಯದಲ್ಲೂ ಅದೇ ಆಟವನ್ನು ಮುಂದುವರೆಸಲು ವಿಫಲವಾಯ್ತು. ತಂಡವು‌ ಮಾರ್ಚ್‌ 15ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಮತ್ತೊಮ್ಮೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎದುರಿಸಲಿದೆ.

ಯುಪಿ ವಾರಿಯರ್ಸ್‌ ಆಡುವ ಬಳಗ: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಮುಂಬೈ ಇಂಡಿಯನ್ಸ್‌ ಆಡುವ ಬಳಗ: ಯಾಸ್ತಿಕಾ ಭಾಟಿಯಾ, ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಸೋಮವಾರದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಇದುವರೆಗೂ ಟೂರ್ನಿಯಲ್ಲಿ ಗೆಲುವು ಕಾಣದ ಬೆಂಗಳೂರು ಟೂರ್ನಿಯಲ್ಲಿ ಉಳಿಯಲು ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ.