ಬೇರೆ ಮಹಿಳೆಯರನ್ನು ಮುಟ್ಟಲ್ಲ; ವೈಶಾಲಿಗೆ ಶೇಕ್‌ ಹ್ಯಾಂಡ್ ಮಾಡದಿರಲು ಕಾರಣ ವಿವರಿಸಿದ ಉಜ್ಬೇಕಿಸ್ತಾನ ಚೆಸ್ ಗ್ರ್ಯಾಂಡ್‌ಮಾಸ್ಟರ್
ಕನ್ನಡ ಸುದ್ದಿ  /  ಕ್ರೀಡೆ  /  ಬೇರೆ ಮಹಿಳೆಯರನ್ನು ಮುಟ್ಟಲ್ಲ; ವೈಶಾಲಿಗೆ ಶೇಕ್‌ ಹ್ಯಾಂಡ್ ಮಾಡದಿರಲು ಕಾರಣ ವಿವರಿಸಿದ ಉಜ್ಬೇಕಿಸ್ತಾನ ಚೆಸ್ ಗ್ರ್ಯಾಂಡ್‌ಮಾಸ್ಟರ್

ಬೇರೆ ಮಹಿಳೆಯರನ್ನು ಮುಟ್ಟಲ್ಲ; ವೈಶಾಲಿಗೆ ಶೇಕ್‌ ಹ್ಯಾಂಡ್ ಮಾಡದಿರಲು ಕಾರಣ ವಿವರಿಸಿದ ಉಜ್ಬೇಕಿಸ್ತಾನ ಚೆಸ್ ಗ್ರ್ಯಾಂಡ್‌ಮಾಸ್ಟರ್

ಭಾರತದ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವೈಶಾಲಿಗೆ ಶೇಕ್‌ ಹ್ಯಾಂಡ್ ಮಾಡದಿರಲು ಕಾರಣವೇನು ಎಂಬುದನ್ನು ಉಜ್ಬೇಕಿಸ್ತಾನದ ಚೆಸ್ ಗ್ರ್ಯಾಂಡ್‌ಮಾಸ್ಟರ್ ನೋಡಿರ್ಬೆಕ್ ಯಾಕುಬೊವ್ ವಿವರಿಸಿದ್ದಾರೆ. ಧಾರ್ಮಿಕ ಕಾರಣಗಳಿಂದಾಗಿ ತಾನು ಬೇರೆ ಮಹಿಳೆಯರನ್ನು ಮುಟ್ಟಲ್ಲ ಎಂದು ಅವರು ಹೇಳಿದ್ದಾರೆ.

ವೈಶಾಲಿಗೆ ಶೇಕ್‌ ಹ್ಯಾಂಡ್ ಮಾಡದಿರಲು ಕಾರಣ ವಿವರಿಸಿದ ಉಜ್ಬೇಕಿಸ್ತಾನ ಚೆಸ್ ಗ್ರ್ಯಾಂಡ್‌ಮಾಸ್ಟರ್ ನೋಡಿರ್ಬೆಕ್ ಯಾಕುಬೊವ್
ವೈಶಾಲಿಗೆ ಶೇಕ್‌ ಹ್ಯಾಂಡ್ ಮಾಡದಿರಲು ಕಾರಣ ವಿವರಿಸಿದ ಉಜ್ಬೇಕಿಸ್ತಾನ ಚೆಸ್ ಗ್ರ್ಯಾಂಡ್‌ಮಾಸ್ಟರ್ ನೋಡಿರ್ಬೆಕ್ ಯಾಕುಬೊವ್ (X)

ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ಭಾಗಿಯಾಗಿದ್ದ ಉಜ್ಬೇಕಿಸ್ತಾನದ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ನೋಡಿರ್ಬೆಕ್ ಯಾಕುಬೊವ್, ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆರ್ ವೈಶಾಲಿ ಅವರೊಂದಿಗೆ ಕೈಕುಲುಕಲು ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಆಟಗಾರನ ನಡೆ ಬಗ್ಗೆ ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲೆಡೆ ಸುದ್ದಿ ಹಬ್ಬಿತು. ಅದಾದ ಬೆನ್ನ್ಲೇ ಉಜ್ಬೇಕಿಸ್ತಾನದ ಆಟಗಾರ‌ ತಮ್ಮ ನಡೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ವೈಶಾಲಿ ಅವರ ಕ್ಷಮೆಯಾಚಿಸಿದ್ದಾರೆ. ಶೇಕ್‌ ಹ್ಯಾಂಡ್‌ ಕೊಡದೆ ಇರುವುದರ ಹಿಂದೆ ಬೇರೆ ಯಾವ ಉದ್ದೇಶಗಳೂ ಇಲ್ಲ. ಕೆಲವು “ಧಾರ್ಮಿಕ ಕಾರಣಗಳಿಗಾಗಿ” ನಾನು ಶೇಕ್ ಹ್ಯಾಂಡ್‌ ಮಾಡಲು ಮುಂದಾಗಿಲ್ಲ. ಆಟಗಾರ್ತಿಗೆ ಅವಮಾನಿಸುವ ಉದ್ದೇಶ ತನಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಚೆಸ್‌ಬೇಸ್ ಇಂಡಿಯಾ ಹಂಚಿಕೊಂಡ ವಿಡಿಯೊದಲ್ಲಿ, ಈ ದೃಶ್ಯವನ್ನು ನೋಡಬಹುದು. ನಾಲ್ಕನೇ ಸುತ್ತಿನ ಸ್ಪರ್ಧೆ ಆರಂಭವಾಗುವ ಮೊದಲು ಭಾರತದ ವೈಶಾಲಿ ಅವರು ಯಾಕುಬೊವ್‌ಗೆ ಶೇಕ್‌ ಹ್ಯಾಂಡ್‌ ಮಾಡಲು ಕೈ ಚಾಚುತ್ತಿರುವುದನ್ನು ಕಾಣಬಹುದು. ಆದರೆ, ಯಾಕುಬೊವ್ ಇದಕ್ಕೆ ಪ್ರತಿಕ್ರಿಯಿಸದೆ ನೇರವಾಗಿ ಬಂದು ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಭಾರತೀಯ ಆಟಗಾರ್ತಿ ಆ ಸಮಯದಲ್ಲಿ ತುಸು ಮುಜುಗರಕ್ಕೊಳಗಾದರು.

2019ರಲ್ಲಿ ಗ್ರ್ಯಾಂಡ್‌ ಮಾಸ್ಟರ್‌ ಆದ 23 ವರ್ಷದ ಯಾಕುಬೊವ್, ವೈಶಾಲಿ ವಿರುದ್ಧದ ಪಂದ್ಯವನ್ನು ಸೋತರು. ಚಾಲೆಂಜರ್ಸ್ ವಿಭಾಗದಲ್ಲಿ ಎಂಟು ಸುತ್ತುಗಳ ನಂತರ ಪ್ರಸ್ತುತ ಮೂರು ಪಾಯಿಂಟ್‌ ಗಳಿಸಿದ್ದಾರೆ.

ಇತರ ಮಹಿಳೆಯರನ್ನು ಮುಟ್ಟುವುದಿಲ್ಲ

ಸಣ್ಣ ವಿಡಿಯೋ ವೈರಲ್ ಆದ ನಂತರ, ಯಾಕುಬೊವ್ 'ಎಕ್ಸ್' ನಲ್ಲಿ ಸುದೀರ್ಘ ಪ್ರತಿಕ್ರಿಯೆಯ ಪೋಸ್ಟ್ ಮಾಡಿದ್ದಾರೆ. ವೈಶಾಲಿ ಮತ್ತು ಅವರ ಸಹೋದರ ಆರ್. ಪ್ರಜ್ಞಾನಂದ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ಧಾರ್ಮಿಕ ಕಾರಣಗಳಿಂದಾಗಿ ತಾನು ಇತರ ಮಹಿಳೆಯರನ್ನು ಮುಟ್ಟುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

“ವೈಶಾಲಿ ಜೊತೆಗಿನ ಆಟದ ಸಮಯದಲ್ಲಿ ನಡೆದ ಸನ್ನಿವೇಶವನ್ನು ನಾನು ವಿವರಿಸುತ್ತೇನೆ. ಮಹಿಳೆಯರು ಮತ್ತು ಭಾರತೀಯ ಚೆಸ್ ಆಟಗಾರರ ಬಗ್ಗೆ ನನಗೆ ಅತೀವ ಗೌರವವಿದೆ. ಆದರೆ, ಧಾರ್ಮಿಕ ಕಾರಣಗಳಿಗಾಗಿ ನಾನು ಇತರ ಮಹಿಳೆಯರನ್ನು ಮುಟ್ಟುವುದಿಲ್ಲ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ” ಎಂದು ಯಾಕುಬೊವ್ ಬರೆದಿದ್ದಾರೆ.

ಚೆಸ್ ಹರಾಮ್ ಅಲ್ಲ

“ವೈಶಾಲಿ ಮತ್ತು ಅವರ ಸಹೋದರ ಭಾರತದ ಬಲಿಷ್ಠ ಚೆಸ್ ಆಟಗಾರರೆಂದು ಅವರನ್ನು ಗೌರವಿಸುತ್ತೇನೆ. ನನ್ನ ನಡವಳಿಕೆಯಿಂದ ಅವರಿಗೆ ಮನನೊಂದಿದ್ದರೆ, ನಾನು ಅವರ ಕ್ಷಮೆಯಾಚಿಸುತ್ತೇನೆ. ಈ ಬಗ್ಗೆ ನನ್ನ ಹೆಚ್ಚುವರಿ ವಿವರಣೆಗಳಿವೆ. ಮೊದಲನೆಯದಾಗಿ ಚೆಸ್ ಹರಾಮ್ ಅಲ್ಲ,” ಎಂದು ಯಾಕುಬೊವ್ ಬರೆದಿದ್ದಾರೆ.‌

“ನನಗೆ ಏನು ಮಾಡಬೇಕು ಅನಿಸುತ್ತೋ ನಾನು ಅದನ್ನೇ ಮಾಡುತ್ತೇನೆ. ಇತರರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅನ್ಯ ಲಿಂಗದವರೊಂದಿಗೆ ಕೈಕುಲುಕಬಾರದು ಅಥವಾ ಮಹಿಳೆಯರು ಹಿಜಾಬ್ ಅಥವಾ ಬುರ್ಖಾ ಧರಿಸಬೇಕು ಎಂದು ನಾನು ಒತ್ತಾಯಿಸುವುದಿಲ್ಲ. ಅದು ಅವರಿಚ್ಛೆ” ಎಂದು ಆಟಗಾರ ವಿವರಿಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.