ಮೆಕ್ಸಿಕೊ ಫುಟ್ಬಾಲ್ ತಂಡದ ಕೋಚ್ ಮೇಲೆ ಸ್ಟೇಡಿಯಂನಲ್ಲೇ ಅಭಿಮಾನಿಗಳ ದಾಳಿ; ತಲೆಯಿಂದ ರಕ್ತಸ್ರಾವ -ವಿಡಿಯೋ
ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಮೆಕ್ಸಿಕೊ ತಂಡದ ಮುಖ್ಯ ಕೋಚ್ ಜೇವಿಯರ್ ಅಗುಯಿರೆ ಮೇಲೆ ಕೈಗೆ ಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಈ ವೇಳೆ ಕೋಚ್ ತಲೆಯ ಮೇಲ್ಭಾಗಕ್ಕೆ ಕ್ಯಾನ್ ಒಂದು ಬಿದ್ದಿದೆ. ಇದು ಗಂಭೀರ ಗಾಯಕ್ಕೆ ಕಾರಣವಾಗಿದ್ದು, ಕ್ಷಣಮಾತ್ರದಲ್ಲಿ ಅವರ ತಲೆಯಿಂದ ರಕ್ತ ಹರಿಯಲಾರಂಭಿಸಿದೆ.
ಸ್ಯಾನ್ ಪೆಡ್ರೊ ಸುಲಾದ ಜನರಲ್ ಫ್ರಾನ್ಸಿಸ್ಕೊ ಮೊರಾಜಾನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾನ್ಕಾಕಾಫ್ ನೇಷನ್ಸ್ ಲೀಗ್ (Concacaf Nations League) ಫುಟ್ಬಾಲ್ ಪಂದ್ಯಾವಳಿಯ ಮೊದಲ ಲೆಗ್‌ನಲ್ಲಿ ಮೆಕ್ಸಿಕೊ ತಂಡವು ಸೋಲು ಕಂಡಿತು. ಹೊಂಡುರಾಸ್ ವಿರುದ್ಧ 0-2 ಗೋಲುಗಳ ಅಂತರದಿಂದ ಸೋಲುಂಡ ಬೆನ್ನಲ್ಲೇ, ಮೆಕ್ಸಿಕೊ ತಂಡದ ಮುಖ್ಯ ಕೋಚ್ ಜೇವಿಯರ್ ಅಗುಯಿರೆ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿದ್ದ ಕೋಚ್ ಮೇಲೆ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಈ ವೇಳೆ ಜೇವಿಯರ್ ತಲೆಯಿಂದ ರಕ್ತ ಸೋರುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಂದ್ಯ ಮುಗಿದ ಬೆನ್ನಲ್ಲೇ, ಅಗುಯಿರೆ ಅವರು ಎದುರಾಳಿ ತಂಡದ ಮುಖ್ಯ ಕೋಚ್ ರೀನಾಲ್ಡೊ ರುಯೆಡಾ ಅವರೊಂದಿಗೆ ಕೈಕುಲುಕಲು ಮುನ್ನಡೆದರು. ಟಚ್ ಲೈನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಅವರ ಮೇಲೆ ವಸ್ತುಗಳನ್ನು ಎಸೆಯಲು ಆರಂಭಿಸಿದ್ದಾರೆ. ಈ ವೇಳೆ ಕೋಚ್ ತಲೆಯ ಮೇಲ್ಭಾಗಕ್ಕೆ ಕ್ಯಾನ್ ಬಿದ್ದಿದೆ. ಅದು ಗಂಭೀರ ಗಾಯಕ್ಕೆ ಕಾರಣವಾಗಿದ್ದು, ಕ್ಷಣಮಾತ್ರದಲ್ಲಿ ತಲೆಯಿಂದ ರಕ್ತ ಹರಿಯಲಾರಂಭಿಸಿದೆ.
ಕೋಪಾ ಅಮೆರಿಕ ಪಂದ್ಯಾವಳಿಯಲ್ಲಿ ಮೆಕ್ಸಿಕೋ ತಂಡ ಗ್ರೂಪ್ ಹಂತದಿಂದಲೇ ಹೊರಬಿದ್ದ ಬಳಿಕ, ಕೋಚ್ ಜೈಮ್ ಲೊಜಾನೊ ಅವರನ್ನು ವಜಾಗೊಳಿಸಲಾಗಿತ್ತು. ಆ ಬಳಿಕ ಕೋಚ್ ಸ್ಥಾನಕ್ಕೆ ಅಗುಯಿರೆ ಅವರನ್ನು ಜುಲೈ ತಿಂಗಳಲ್ಲಿ ಮೂರನೇ ಬಾರಿಗೆ ಮೆಕ್ಸಿಕೋ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಆಗಿ ನೇಮಿಸಲಾಯ್ತು.
ಘಟನೆ ವಿಡಿಯೋ
ಅತ್ತ, ಕೋಚ್ ಮೇಲೆ ಅಭಿಮಾನಿಗಳ ವರ್ತನೆ ಕುರಿತು ಹೊಂಡುರಾನ್ ಫುಟ್ಬಾಲ್ ಫೆಡರೇಶನ್ ಪ್ರತಿಕ್ರಿಯೆ ನೀಡಿದೆ. ಅಭಿಮಾನಿಗಳ ವರ್ತನೆಯನ್ನು ಖಂಡಿಸಿದ ಫೆಡರೇಷನ್, ಆದರೆ ಅಗುಯಿರೆ ಅವರ ಪ್ರಚೋದನಾಕಾರಿ ವರ್ತನೆಯ ಬಗ್ಗೆ ಆರೋಪಿಸಿದೆ.
ಕೆಣಕಿದ ಕೋಚ್ ನಡೆಗೆ ಖಂಡನೆ
“ಹೊಂಡುರಾನ್ ಫುಟ್ಬಾಲ್ ಫೆಡರೇಶನ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ. ಅಭಿಮಾನಿಗಳ ಒಂದು ಗುಂಪಿನ ಕ್ರಮಗಳನ್ನು ಬಲವಾಗಿ ಖಂಡಿಸುತ್ತದೆ. ಆದ್ದರಿಂದ ಪಂದ್ಯದ ಕೊನೆಯಲ್ಲಿ ಸಂಭವಿಸಿದ ಮೆಕ್ಸಿಕನ್ ರಾಷ್ಟ್ರೀಯ ತಂಡದ ತರಬೇತುದಾರರ ವಿರುದ್ಧದ ಕೃತ್ಯಗಳನ್ನು ನಾವು ಖಂಡಿಸುತ್ತೇವೆ” ಎಂದು ಅದು ಹೇಳಿದೆ.
“ಪಂದ್ಯದ ಆರಂಭದಿಂದಲೂ ಹೊಂಡುರಾಸ್ ಅಭಿಮಾನಿಗಳನ್ನು ಅವಮಾನಿಸಿದ ಮತ್ತು ಪ್ರಚೋದಿಸಿದ ಮೆಕ್ಸಿಕನ್ ರಾಷ್ಟ್ರೀಯ ತಂಡದ ತರಬೇತುದಾರನ ಪದಗಳು, ಅಸಹ್ಯಕರ ಸನ್ನೆಗಳು ಮತ್ತು ಪ್ರಚೋದನಕಾರಿ ವರ್ತನೆಗಳನ್ನು ಎಫ್ಎಫ್ಎಚ್ ಸ್ಪಷ್ಟವಾಗಿ ಖಂಡಿಸುತ್ತದೆ. ಈ ರೀತಿಯ ನಡವಳಿಕೆಯು ಫುಟ್ಬಾಲ್‌ನಲ್ಲಿ ಸ್ವೀಕಾರಾರ್ಹವಲ್ಲ. ಏಕೆಂದರೆ ಇದು ಹಿಂಸಾಚಾರಕ್ಕೆ ಪ್ರಚೋದನೆಯನ್ನು ಪ್ರತಿನಿಧಿಸುತ್ತದೆ. ಕ್ರೀಡಾಂಗಣದಲ್ಲಿ ಅಥವಾ ಟಿವಿ ಮೂಲಕ ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಅಗೌರವವನ್ನು ಸೂಚಿಸುತ್ತದೆ,” ಎಂದು ಅದು ಹೇಳಿದೆ.
ವಿಭಾಗ