ಲಾಟಿ ಏಟಿನ ಕಣ್ಣೀರಿಗೂ, ಬೀದಿ ಹೋರಾಟಕ್ಕೂ ಬೆಲೆ ಕೊಡದವರು ಈಗ ದೇಶದ ಹೆಮ್ಮೆ ಎನ್ನುತ್ತಿದ್ದಾರೆ! - Vinesh Phogat
ಕನ್ನಡ ಸುದ್ದಿ  /  ಕ್ರೀಡೆ  /  ಲಾಟಿ ಏಟಿನ ಕಣ್ಣೀರಿಗೂ, ಬೀದಿ ಹೋರಾಟಕ್ಕೂ ಬೆಲೆ ಕೊಡದವರು ಈಗ ದೇಶದ ಹೆಮ್ಮೆ ಎನ್ನುತ್ತಿದ್ದಾರೆ! - Vinesh Phogat

ಲಾಟಿ ಏಟಿನ ಕಣ್ಣೀರಿಗೂ, ಬೀದಿ ಹೋರಾಟಕ್ಕೂ ಬೆಲೆ ಕೊಡದವರು ಈಗ ದೇಶದ ಹೆಮ್ಮೆ ಎನ್ನುತ್ತಿದ್ದಾರೆ! - Vinesh Phogat

Vinesh Phogat: ಅಂದು ಬೀದಿಯಲ್ಲಿ ಹೋರಾಡಿದ್ರು, ಕಣ್ಣೀರು ಹಾಕಿದ್ರು, ಆಕ್ರೋಶ ವ್ಯಕ್ತಪಡಿಸಿದರೂ ಕ್ಯಾರೆ ಎನ್ನದವರು ವಿನೇಶ್ ಫೋಗಾಟ್ ಪದಕ ಗೆಲ್ಲುತ್ತಿದ್ದಂತೆ ಇಂದು ಭಾರತದ ಹೆಮ್ಮೆ ಎನ್ನುತ್ತಿದ್ದಾರೆ. ನಿಜವಾಗಲೂ ಹೆಡ್​ಲೈನ್ ಬದಲಿಸಿದ್ದಾರೆ ವಿನೇಶ್ ಫೋಗಾಟ್.

ಬೀದೀಲಿ ಹೋರಾಡಿ ಲಾಠಿ ಏಟಿಗೆ ಕಣ್ಣೀರು ಹಾಕಿದಾಗ ಕ್ಯಾರೆ ಎನ್ನದವರು ಇಂದು ಭಾರತದ ಹೆಮ್ಮೆ ಎನ್ನುತ್ತಿದ್ದಾರೆ!
ಬೀದೀಲಿ ಹೋರಾಡಿ ಲಾಠಿ ಏಟಿಗೆ ಕಣ್ಣೀರು ಹಾಕಿದಾಗ ಕ್ಯಾರೆ ಎನ್ನದವರು ಇಂದು ಭಾರತದ ಹೆಮ್ಮೆ ಎನ್ನುತ್ತಿದ್ದಾರೆ!

2023.. ಕುಸ್ತಿ ಕ್ರೀಡಾಪಟುಗಳ ಪಾಲಿಗೆ ಕರಾಳ ವರ್ಷ. ತನಗೆ ಅನ್ನ ಕೊಡುತ್ತಿದ್ದ ಭಾರತ ಕುಸ್ತಿ ಫೆಡರೇಷನ್ ವಿರುದ್ಧವೇ ಖ್ಯಾತನಾಮ ಕುಸ್ತಿಪಟುಗಳು ತಿರುಗಿಬಿದ್ದಿದ್ದರು! ಫೆಡರೇಷನ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್​ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಕುಸ್ತಿಪಟುಗಳ ಆರೋಪವಾಗಿತ್ತು. ರಾಷ್ಟ್ರಕ್ಕೆ ಹಲವು ಪದಕಗಳನ್ನು ಗೆದ್ದುಕೊಟ್ಟವರು ನ್ಯಾಯಕ್ಕಾಗಿ ದೆಹಲಿಯ ಬೀದಿಗಳಲ್ಲಿ ತಿಂಗಳುಗಟ್ಟಲೆ ಪ್ರತಿಭಟಿದ್ದರು. ಆದರೆ ಅಂತಹವರನ್ನು ಪೊಲೀಸರು ಎಳೆದಾಡಿದ್ದರು. ಅವರ ಮೇಲೆ ಲಾಠಿ ಬೀಸಿದ್ದರು. ಅವರನ್ನು ಬಂಧಿಸಿದ್ದರು.

ಅಂದು ತನ್ನವರಿಗಾಗಿ ಹೋರಾಟ ನಡೆಸಿದ್ದ ಕುಸ್ತಿಪಟುಗಳ ಪೈಕಿ ಇಂದು ಭಾರತಕ್ಕೆ ಪದಕ ಗೆದ್ದ ವಿನೇಶ್ ಫೋಗಾಟ್ ಕೂಡ ಒಬ್ಬರು. 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ದೇಶಕ್ಕೆ ಪದಕ ಗೆದ್ದಿದ್ದಾರೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದು, ಚಿನ್ನ ಅಥವಾ ಬೆಳ್ಳಿಯನ್ನು ಗೆಲ್ಲಲಿದ್ದಾರೆ. ಆ ಮೂಲಕ ದೇಶಕ್ಕೆ ಹೆಮ್ಮೆ ತರಲು ತಯಾರಾಗಿದ್ದಾರೆ. ಆದರೆ ಇಂದು ದೇಶದ ಕೀರ್ತಿ ಹೆಚ್ಚಿಸುತ್ತಿರುವ ಇಂತಹ ಹೆಣ್ಣು ಮಗಳ ಕಣ್ಣಲ್ಲಿ ಅಂದು ನೀರು ಹಾಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಆಕೆಯ ಕಣ್ಣೀರು ಒರೆಸಲು ಬರಲಿಲ್ಲ ಎಂಬುದು ವಿಪರ್ಯಾಸವೇ ಸರಿ.

ವಿನೇಶ್ ಫೋಗಾಟ್ ಜತೆಗೆ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿ ಹಿರಿಯ-ಕಿರಿಯ ರೆಸ್ಲರ್ಸ್​ ದೆಹಲಿಯ ಜಂತರ್​ಮಂತರ್​ನ ಬೀದಿಯಲ್ಲಿ ನ್ಯಾಯಕ್ಕೆ ಅಂಗಲಾಚಿದ್ದರು. ಕೈ ಮುಗಿದಿದ್ದರು. ನೋವು ತೋಡಿಕೊಂಡಿದ್ದರು. ಹತಾಶೆ ವ್ಯಕ್ತಪಡಿಸಿದ್ದರು. ಆಕ್ರೋಶ ಹೊರ ಹಾಕಿದ್ದರು. ಒಂದೇ ಮಾತಲ್ಲಿ ಹೇಳುವುದಾದರೆ ನ್ಯಾಯಕ್ಕಾಗಿ ಕಾಲು ಹಿಡಿಯುವುದೊಂದು ಬಾಕಿ ಇತ್ತು. ಅವರನ್ನು ಅಂತಹ ಹೀನಾಯ ಪರಿಸ್ಥಿತಿಗೆ ತಂದೊಡ್ಡಿದ್ದರು ನಮ್ಮ ನಾಯಕರು. ಆದರೆ, ಯಾವೊಬ್ಬ ನಾಯಕನ ಮನಸ್ಸು ಕರಗಲಿಲ್ಲ. ನಮ್ಮ ನಾಯಕರ ಹೃದಯ ಎಷ್ಟು ಗಟ್ಟಿ ಇರಬೇಡ ಎಂಬುದನ್ನು ಸೂಚಿಸುತ್ತದೆ, ಅಲ್ಲವೇ? ಅಂತಹವರು ಇಂದು ಯಾವ ಮುಖ ಇಟ್ಟುಕೊಂಡು ವಿನೇಶ್​ ಫೋಗಾಟ್ ಸಾಧನೆಯನ್ನು ಕೊಂಡಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ.

ಪ್ರತಿ ಪಕ್ಷಗಳು ಕ್ರೀಡಾಪಟುಗಳ ಬೆಂಬಲಕ್ಕೆ ನಿಂತಿದ್ದು ಆಗಾಗ್ಗಷ್ಟೆ. ಅಮವಾಸ್ಯೆ-ಹುಣ್ಣಿಮೆಗೊಮ್ಮೆ ಇವರ ಬಗ್ಗೆ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದರು. ವಿರೋಧ ಪಕ್ಷದವರಾದರೂ ಆಗಾಗ್ಗೆ ಮಾತನಾಡಿದರೂ ಆಡಳಿತ ಪಕ್ಷದ ನಾಯಕರಂತೂ ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತಿದ್ದರು. ಪ್ರತಿ ಸಲ ಕ್ರೀಡಾಪಟುಗಳು ಗೆದ್ದಾಗ ಕೊಂಡಾಡುವ ಮತ್ತು ಭೇಟಿ ಮಾಡಿ ಅಭಿನಂದನೆ ತಿಳಿಸುವ ಪ್ರಧಾನಿ ಮೋದಿ, ನ್ಯಾಯ ಕೇಳುತ್ತಿದ್ದಾಗ ಕಿವಿಗೆ ಹೆಡ್​ಫೋನ್ ಹಾಕಿಕೊಂಡಿದ್ದರು. ಇಡೀ ವಿಶ್ವಮಟ್ಟದಲ್ಲೇ ದೊಡ್ಡ ಸುದ್ದಿಯಾಗಿದ್ದರೂ ಹೆಡ್​ಫೋನ್ ಹಾಕಿದ್ದ ಕಾರಣ ಏನೂ ಕೇಳಿಸಿರಲಿಲ್ಲ. ಅಂದರೆ ಕ್ರೀಡಾಪಟುಗಳ ಆರ್ತನಾದ ಕೇಳಿಯೂ ಕೇಳದಂತೆ ಇದ್ದರು.

ಬ್ರಿಜ್​ ಭೂಷಣ್​ ಸಿಂಗ್ ಅವರನ್ನು ಪ್ರಸ್ತುತ ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಅವರು ಬಿಜೆಪಿ ಸಂಸದರೂ ಆಗಿದ್ದರು. ಅಂತಹ ಗೌರವಾನ್ವಿತ ವ್ಯಕ್ತಿ ಉನ್ನತ ಹುದ್ದೆಯಲ್ಲಿದ್ದುಕೊಂಡು ಮಹಿಳಾ ಕುಸ್ತಿಪಟುಗಳ ಮೇಲೆ ಕಣ್ಣು ಹಾಕಿದ್ದ. ಅಚ್ಚರಿ ಏನೆಂದರೆ ಭೇಟಿ ಬಚಾವೋ ಭೇಟಿ ಪಡಾವೋ ಎನ್ನುವ ಮೋದಿ ಸರ್ಕಾರದ ಯೋಜನೆ ಇಲ್ಲಿ ಮಾತ್ರ ಕೆಲಸ ಮಾಡಲೇ ಇಲ್ಲ. ಬಿಜೆಪಿ ಸಂಸದನ ಮೇಲೆ ಕ್ರಮ ಕೈಗೊಂಡರೆ ಎಲ್ಲಿ ಬಿಜೆಪಿ ವೋಟ್ ಬ್ಯಾಟ್​ ಕೈಕೊಡುತ್ತದೋ ಎಂಬ ಕಾರಣಕ್ಕೆ ಬ್ರಿಜ್​ಭೂಷಣ್ ವಿರುದ್ಧ ಕ್ರಮಕ್ಕೆ ಕೇಂದ್ರ ಬರಲೇ ಇಲ್ಲ. ಅಂತಹ ವ್ಯಕ್ತಿಗಳು ಈಗ ನಮ್ಮ ಹೆಣ್ಣುಮಗಳು ಪದಕ ಗೆಲ್ಲುತ್ತಾಳೆಂದು ಸಂಭ್ರಮಿಸಲು ಮನಸ್ಸಾದರೂ ಹೇಗೆ ಒಪ್ಪುತ್ತದೆ?

ಅಖಾಡದಲ್ಲಿ ಘರ್ಜಿಸಿದ ದಂಗಲ್ ರಾಣಿ

ವಿನೇಶ್​ ಕುಸ್ತಿ ಅಖಾಡದಲ್ಲಿ ಘರ್ಜಿಸುತ್ತಿದ್ದರೆ, ಬಾಲಿವುಡ್​ನ ದಂಗಲ್ ಸಿನಿಮಾದ ಬಿಜಿಎಂ ಕೇಳಿಸಿದಂತಿತ್ತು. ಟೊಕಿಯೊ ಒಲಿಂಪಿಕ್ಸ್​​ನ ಚಿನ್ನದ ಪದಕ ವಿಜೇತೆ ಹಾಗೂ ಈವರೆಗೂ ಒಂದೇ ಒಂದು ಕಾಣದ ಜಪಾನ್​ನ ಯೂಯಿ ಸುಸಾಕಿ ಅವರನ್ನು ಕ್ವಾರ್ಟರ್​​ಫೈನಲ್​ನಲ್ಲಿ ಸೋಲಿಸಿದರು. ಅದು ಹೇಗೆ ಅಂದರೆ ಕೊನೆಯ 10 ಸೆಕೆಂಡ್​ಗಳಲ್ಲಿ. ಅದಕ್ಕೂ ಮುನ್ನ ಯೂಯಿ 2-0ರಲ್ಲಿ ಮುನ್ನಡೆ ಸಾಧಿಸಿದ್ದರು. ಅಂತಿಮ 10 ಸೆಕೆಂಡ್​​ಗಳಲ್ಲಿ 2-3 ಸ್ಕೋರ್​ನೊಂದಿಗೆ ವಿನೇಶ್ ಸೆಮಿಫೈನಲ್ ಪ್ರವೇಶಿಸಿದರು. ನಂತರ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು ಏಕಪಕ್ಷೀಯವಾಗಿ ಮಣಿಸಿ ಫೈನಲ್​ಗೇರಿದರು. ಇದೀಗ ಫೈನಲ್​ನಲ್ಲಿ ಚಿನ್ನ ಅಥವಾ ಬೆಳ್ಳಿ ಯಾವುದೇ ಗೆದ್ದರೂ ಅದು ಇತಿಹಾಸ.

ಪ್ರಶಸ್ತಿ ಕರ್ತವ್ಯ ಪಥದಲ್ಲಿಟ್ಟು ಹೋಗಿದ್ದ ವಿನೇಶ್

ಎಷ್ಟೇ ಪ್ರತಿಭಟಿಸಿದರೂ ತಮಗೆ ನ್ಯಾಯ ನೀಡದ ಕಾರಣ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್​ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಮಗೆ ಲಭಿಸಿದ್ದ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು. ಇಂತಹ ಹೆಣ್ಣುಮಗಳು ಅಪಾರ ಒತ್ತಡದೊಂದಿಗೆ ಒಲಿಂಪಿಕ್ಸ್​ಗೆ ಕಾಲಿಟಟ್ಟರು. ಒಂದು ಈಕೆ ಸೆಮೀಸ್​ನಲ್ಲಿ ಸೋತಿದ್ದರೆ, ಎದುರಿಸಬೇಕಿದ್ದ ಟೀಕೆಗಳು ಎಷ್ಟೋ? ಸೋತರೂ ಗೆದ್ದರೂ ನೀವೇ ನಮ್ಮ ಹೆಮ್ಮೆ. ಆಲ್​ ದಿ ಬೆಸ್ಟ್ ವಿನೇಶ್ ಫೋಗಾಟ್.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.