ಚಿನ್ನ ಅಥವಾ ಬೆಳ್ಳಿ ಖಾತ್ರಿ; ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ ವಿನೇಶ್ ಫೋಗಾಟ್
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್ನಲ್ಲಿ 5-0 ಅಂತರದ ಗೆಲುವು ಇದೇ ಮೊದಲ ಬಾರಿಗೆ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿ ಚಿನ್ನ ಅಥವಾ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಗೆದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಫೈನಲ್ಗೆ ಅರ್ಹತೆ ಪಡೆದು ದೇಶಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.
ಆಗಸ್ಟ್ 6ರ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದರು. ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಜಪಾನ್ನ ಯುಯಿ ಸುಸಾಕಿಯನ್ನು ಸೋಲಿಸಿದ್ದರು. ಇವರು ಇದುವರೆಗೂ ಸೋಲೇ ಕಂಡಿರಲಿಲ್ಲ.
ಒಲಿಂಪಿಕ್ಸ್ ಇತಿಹಾಸದಲ್ಲೇ ಫೈನಲ್ ಪ್ರವೇಶಿಸಿದ ಮೊದಲ ಭಾರತದ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದಾರೆ. ಇಂದು (ಆಗಸ್ಟ್ 7ರ) ರಾತ್ರಿ 11.30ಕ್ಕೆ ನಡೆಯುವ ಫೈನಲ್ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಸಾಧನೆ ಮಾಡಲಿದ್ದಾರೆ.
ಫೈನಲ್ನಲ್ಲಿ ಯಾರ ವಿರುದ್ಧ?
ಇಂದು ರಾತ್ರಿ ಫೈನಲ್ನಲ್ಲಿ ಅಮೆರಿಕದ ಆಟಗಾರ್ತಿ ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಸಾರಾ ಅವರು ಸೆಮಿಫೈನಲ್ನಲ್ಲಿ ಮಂಗೋಲಿಯಾದ ಡೊಲ್ಗೊರ್ಜವಿನ್ ಒಟ್ಗೊಂಜಾರ್ಗಲ್ ಅವರನ್ನು 5-0ರಲ್ಲಿ ಮಣಿಸಿದ್ದರು.
ಮತ್ತೊಂದು ವಿಶೇಷ ಅಂದರೆ ವಿನೇಶ್ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದು ಇದೇ ಮೊದಲ ಬಾರಿಗೆ. ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ, ಟೊಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ವಿನೇಶ್ ಅವರಿಗೆ ಇದು 3ನೇ ಒಲಿಂಪಿಕ್ಸ್ ಟೂರ್ನಿಯಾಗಿದೆ.
ಕಳೆದ ವರ್ಷ ಭಾರತದ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೆಹಲಿಯಲ್ಲಿ ವಿನೇಶ್ ಸೇರಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಿದ್ದರು.
ಅಂದು ನಡು ರಸ್ತೆಯಲ್ಲೇ ಪೊಲೀಸರಿಂದ ಲಾಠಿ ಏಟು ತಿಂದು ಬಂಧನಕ್ಕೆ ಒಳಗಾಗಿದ್ದರು ವಿನೇಶ್. ಅಂದು ನ್ಯಾಯಕ್ಕಾಗಿ ಅಂಗಲಾಚಿದರೂ ಬೆಂಬಲ ಕೊಡದವರು ಇಂದು ದೇಶಕ್ಕಾಗಿ ಪದಕ ಗೆಲ್ತಿದ್ದಾರೆ ಎನ್ನುತ್ತಿದ್ದಾರೆ ಎಂಬುದು ವಿಪರ್ಯಾಸವೇ ಸರಿ.
ಹಾಕಿಯಲ್ಲಿ ಭಾರತಕ್ಕೆ ಸೋಲು
ಪ್ಯಾರಿಸ್ ಪಲಿಂಪಿಕ್ಸ್ನಲ್ಲಿ 1980ರ ನಂತರ ಚಿನ್ನದ ಪದಕ ಗೆಲ್ಲುವ ಭಾರತದ ಪುರುಷರ ಹಾಕಿ ತಂಡದ ಕನಸು ಭಗ್ನಗೊಂಡಿದೆ. ಜರ್ಮನಿಯ ವಿರುದ್ಧ 3-2 ಅಂತರದಿಂದ ಪರಾಭವಗೊಂಡ ಭಾರತ 44 ವರ್ಷಗಳ ಬಳಿಕ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.ಇನ್ನು ಸ್ಪೇನ್ ವಿರುದ್ಧ ಕಂಚಿನ ಪದಕಕ್ಕೆ ಹೋರಾಡಲಿದೆ.
ಸೆಮಿಫೈನಲ್ನಲ್ಲಿ ಭಾರತ ತಂಡ ಕೊನೇ ಹಂತದಲ್ಲಿ ಹೋರಾಡಿದ ಹೊರತಾಗಿಯೂ ಅಂತಿಮ ಸುತ್ತಿಗೇರಲು ಸಾಧ್ಯವಾಗಲಿಲ್ಲ. ಹಾಕಿಯಲ್ಲಿ ಅತ್ಯುತ್ತಮ ಜರ್ನಿ ಹೊಂದಿದ್ದ ಭಾರತ ತಂಡದ ಗೆಲ್ಲುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಕೊನೆಗೆ ನಿರಾಸೆ ಎದುರಿಸಬೇಕಾಯಿತು.
ಕ್ರ.ಸಂ | ದೇಶಗಳು (ಆ 6ರ ಅಂತ್ಯಕ್ಕೆ) | ಚಿನ್ನ | ಬೆಳ್ಳಿ | ಕಂಚು | ಒಟ್ಟು |
---|---|---|---|---|---|
1 | ಯುಎಸ್ಎ | 24 | 31 | 31 | 86 |
2 | ಚೀನಾ | 22 | 20 | 16 | 58 |
3 | ಆಸ್ಟ್ರೇಲಿಯಾ | 14 | 12 | 9 | 35 |
4 | ಫ್ರಾನ್ಸ್ | 13 | 16 | 19 | 48 |
5 | ಗ್ರೇಟ್ ಬ್ರಿಟನ್ | 12 | 15 | 19 | 46 |
6 | ರಿಪಬ್ಲಿಕ್ ಆಫ್ ಕೊರಿಯಾ | 11 | 8 | 7 | 26 |
7 | ಜಪಾನ್ | 11 | 6 | 12 | 29 |
8 | ಇಟಲಿ | 9 | 10 | 7 | 26 |
9 | ನೆದರ್ಲ್ಯಾಂಡ್ಸ್ | 8 | 5 | 6 | 19 |
10 | ಜರ್ಮನಿ | 8 | 5 | 4 | 17 |
63 | ಭಾರತ | 0 | 0 | 3 | 3 |