ಕನ್ನಡ ಸುದ್ದಿ  /  Sports  /  Virat Kohli 18 Why Virat Kohli Wears Jersey Number 18 Reason Will Make You Teary-eyed

Virat Kohli 18: ಕೊಹ್ಲಿ ಜೆರ್ಸಿ ನಂ.18ರ ಹಿಂದಿದೆ ದೊಡ್ಡ ನೋವು; ವಿರಾಟ್​ ಹೇಳಿದ್ದೇನು?

Virat Kohli 18: ಭಾರತ ತಂಡ, ಇಂಡಿಯನ್​ ಪ್ರೀಮಿಯರ್​ ಲೀಗ್​ ಆಡಿದಾಗ ಜೆರ್ಸಿ 18 ಅನ್ನು ತೊಡುತ್ತಾರೆ. ಆದರೆ ಈ ಸಂಖ್ಯೆಯ ಹಿಂದಿರುವ ನೋವು ಯಾರಿಗೂ ತಿಳಿದಿಲ್ಲ. ಆ ಸಂಖ್ಯೆಯ ಜೆರ್ಸಿಯನ್ನೇ ಧರಿಸಲು ಕಾರಣ ಏನೆಂಬುದನ್ನು ಕೊಹ್ಲಿ ಈಗ ರಿವೀಲ್​ ಮಾಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (Twitter)

ವಿರಾಟ್​ ಕೊಹ್ಲಿ (Virat Kohli) ಧರಿಸುವ ಜೆರ್ಸಿ ಸಂಖ್ಯೆ 18, ಇಡೀ ಪ್ರಪಂಚಕ್ಕೆ ಗೊತ್ತೇ ಇದೆ. ನಂಬರ್​ 18ರ ಜೆರ್ಸಿ ಕಂಡು ಬಂದರೆ ಸಾಕು, ಅದು ಕೊಹ್ಲಿಯದ್ದೇ ಜೆರ್ಸಿ ಥಟ್ಟನೆ ಗುರುತು ಹಿಡಿಯುತ್ತಾರೆ. ಭಾರತ ತಂಡ, ಇಂಡಿಯನ್​ ಪ್ರೀಮಿಯರ್​ ಲೀಗ್​ ಆಡಿದಾಗಲೂ ಇದೇ ಜೆರ್ಸಿಯನ್ನೇ ತೊಡುತ್ತಾರೆ. ಆದರೆ ಈ ಸಂಖ್ಯೆಯ ಹಿಂದಿರುವ ನೋವು ಯಾರಿಗೂ ತಿಳಿದಿಲ್ಲ. ಆ ಸಂಖ್ಯೆಯ ಜೆರ್ಸಿಯನ್ನೇ ಧರಿಸಲು ಕಾರಣ ಏನೆಂಬುದನ್ನು ಕೊಹ್ಲಿ ಈಗ ರಿವೀಲ್​ ಮಾಡಿದ್ದಾರೆ.

ಕಿಂಗ್​ ವಿರಾಟ್ ಕೊಹ್ಲಿ ಈ ನಂಬರ್​ ಜೆರ್ಸಿ ಧರಿಸುವುದರ ಹಿಂದೆ ಒಂದು ಮಹತ್ವದ ಕಾರಣವಿದೆ. ತೀರಾ ಭಾವನಾತ್ಮಕವಾಗಿದೆ. 2008ರಿಂದಲೂ ಇದೇ ಜೆರ್ಸಿ ತೊಡುತ್ತಿದ್ದಾರೆ. 2008ರಲ್ಲಿ ಅಂಡರ್​​-19 ವಿಶ್ವಕಪ್​ ವಿಜೇತ ಕೊಹ್ಲಿ, ಅಂದಿನಿಂದಲೂ 18ನೇ ನಂಬರ್​ ಧರಿಸುತ್ತಾ ಬಂದಿದ್ದಾರೆ. ಅದೇ ವೇಳೆ ಟೀಮ್​ ಇಂಡಿಯಾಗೂ ಹೆಜ್ಜೆ ಇಟ್ಟ ಕೊಹ್ಲಿ, 18ನೇ ಸಂಖ್ಯೆ ಜೆರ್ಸಿ ಖಾಲಿ ಇತ್ತು. ಇದು ಕೊಹ್ಲಿ ಪಾಲಿಗೆ ಅದೃಷ್ಟವೂ ಹೌದು.! ನಾನು ಈ ಜೆರ್ಸಿ ಸಂಖ್ಯೆಯನ್ನು ಕೇಳಿಯೇ ಇರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಕಾರಣ ಏನು.?

ಡಿಸೆಂಬರ್​​ 18, 2006.. ವಿರಾಟ್​ ಕೊಹ್ಲಿ ಪಾಲಿಗೆ ಕರಾಳ ದಿನ. ಏಕೆಂದರೆ ಅವರ ತಂದೆ ನಿಧನರಾದ ದಿನ. ಆಗಿನ್ನೂ ಟೀಮ್​ ಇಂಡಿಯಾ ಸೂಪರ್​ ಸ್ಟಾರ್ ಕ್ರಿಕೆಟಿಗನಿಗೆ 17 ವರ್ಷವಾಗಿತ್ತು. ಹಾಗಾಗಿ, ತಂದೆಯ ಸ್ಮರಣಾರ್ಥ ಮತ್ತು ನೆನಪಿಗಾಗಿ ಆ ದಿನಾಂಕದ ಸಂಖ್ಯೆಯ ಜೆರ್ಸಿ ತೊಟ್ಟು ಕಣಕ್ಕೆ ಇಳಿಯುತ್ತಾರೆ. ಟೀಮ್​ ಇಂಡಿಯಾದಲ್ಲೂ ಆ ಸಂಖ್ಯೆ ಖಾಲಿ ಇದ್ದದ್ದು, ಕೊಹ್ಲಿ ಪಾಲಿಗೆ ಜೆರ್ಸಿ ಪಡೆಯಲು ತೊಂದರೆ ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಮಾತನಾಡಿದ್ದ ಕೊಹ್ಲಿ, ತಂದೆ ತೀರಿಕೊಂಡ ದಿನ ನನಗಿನ್ನೂ ನೆನಪಿದೆ. ಅದು ಜೀವನದ ಅತ್ಯಂತ ಕಠಿಣ ಸಮಯ ಎಂದು ನೋವು ವ್ಯಕ್ತಪಡಿಸಿದ್ದಾರೆ.

ತಮ್ಮ ತಂದೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ರಣಜಿ ಟೂರ್ನಿಯಲ್ಲಿ ದೆಹಲಿ ತಂಡದ ಪರ ಕೊಹ್ಲಿ ಕಣಕ್ಕಿಳಿದ್ದರು. ಕೊಹ್ಲಿ ಭವಿಷ್ಯವನ್ನು ನಿರ್ಧರಿಸುವ ಪಂದ್ಯವೂ ಅದಾಗಿತ್ತು. ಕರ್ನಾಟಕ ವಿರುದ್ಧದ ಪಂದ್ಯ ಅದಾಗಿತ್ತು. ತಂದೆ ನಿಧನ ನಡುವೆಯೂ ವೃತ್ತಿ ಧರ್ಮ ತೋರಿದ ವಿರಾಟ್​, ಮುಂದಿನ ದಿನವೂ ರಣಜಿ ಪಂದ್ಯ ಆಡಲು ನಿರ್ಧರಿಸಿದ್ದರು. ತನ್ನ ಕುಟುಂಬ ಸದಸ್ಯರು ಮತ್ತು ತಂಡದ ಕೋಚ್ ಜೊತೆ ಚರ್ಚೆ ನಡೆಸಿದ ಕೊಹ್ಲಿ, ಆ ಪಂದ್ಯದಲ್ಲಿ 90 ರನ್ ಸಿಡಿಸಿದ್ದರು. ಇದು ಡೆಲ್ಲಿಗೆ ಫಾಲೋ-ಆನ್ ತಪ್ಪಿಸಲು ನೆರವಾಯಿತು.

ಟೀಮ್​ ಇಂಡಿಯಾಗೆ ನಾನು ಆಡಬೇಕು ಎಂಬುದು ನನ್ನ ಅಪ್ಪನ ಆಸೆ. ನಿಜ, ತಂದೆಯ ಸಾವು ಆಘಾತ ನೀಡಿದ್ದಂತು ಸುಳ್ಳಲ್ಲ. ಆದರೆ, ಅಪ್ಪನ ಆಸೆಯಂತೆ ಮುನ್ನಡೆಯಲು ಯೋಚಿಸಿದ್ದೆ. ಆ ಕಷ್ಟದ ಸಮಯವೇ ನನ್ನ ಮೇಲೆ ಪರಿಣಾಮ ಬೀರಿತು. ಅಂದು ನನ್ನ ಸಹೋದರನಿಗೂ ಮಾತು ಕೊಟ್ಟಿದ್ದೆ, ಟೀಮ್​ ಇಂಡಿಯಾಗೆ ಆಡುತ್ತೇನೆ ಎಂದು. ನನಗೆ ಕ್ರಿಕೆಟ್​​ ಅಂದರೆ, ಯಾವುದೇ ಕಾರಣಕ್ಕೂ ಕ್ರಿಕೆಟ್​ ತ್ಯಜಿಸಲ್ಲ. ನನ್ನ ತಂದೆಯ ಸಾವು ನನಗೆ ಹೋರಾಡುವುದನ್ನು ಕಲಿಸಿದೆ ಎಂದು ಈ ಹಿಂದೆ ಕೊಹ್ಲಿ ಹೇಳಿದ್ದರು. ಅಂದಿನಿಂದ ದಾಖಲೆಗಳ ಒಡೆಯನಾಗಿ ಮುನ್ನುಗ್ಗುತ್ತಿದ್ದಾರೆ. ನಾಯಕನಾಗಿಯೂ ಮಹತ್ತರ ಸಾಧನೆಗಳನ್ನೂ ಮಾಡಿದ್ದಾರೆ ಕೊಹ್ಲಿ.

ಸದ್ಯ ಐಪಿಎಲ್​ ತಯಾರಿ ನಡೆಸುತ್ತಿರುವ ವಿರಾಟ್​ ಕೊಹ್ಲಿ, ಈ ಬಾರಿ ಅಬ್ಬರಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಭರ್ಜರಿ ಫಾರ್ಮ್​​ನಲ್ಲಿರುವ ರನ್​ಮಷೀನ್​, ಐಪಿಎಲ್​ನಲ್ಲೂ ರನ್​ ಮಳೆ ಹರಿಸುವ ಭರವಸೆ ಹುಟ್ಟು ಹಾಕಿದ್ದಾರೆ. ಆರ್​​ಸಿಬಿ ತನ್ನ ಮೊದಲ ಪಂದ್ಯವನ್ನು ಏಪ್ರಿಲ್​ 2ರಂದು ಮುಂಬೈ ಇಂಡಿಯನ್ಸ್​ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಮಾನ ಆರಂಭಿಸಲಿದೆ.