ವಿರುಷ್ಕಾ ದಂಪತಿಗೆ ಗಂಡು ಮಗು ಜನನ; ಜೂನಿಯರ್ ವಿರಾಟ್‌ಗೆ ಅಕಾಯ್ ಹೆಸರಿಟ್ಟ ಕೊಹ್ಲಿ-ಅನುಷ್ಕಾ -Virat Kohi Son Akaay
Virat Kohi Son Akaay: ಟೀಂ ಇಂಡಿಯಾದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಗಂಡು ಮಗುವಿನ ತಂದೆಯಾಗಿದ್ದಾರೆ. ವಿರಾಟ್-ಅನುಷ್ಕಾ ದಂಪತಿ ತಮ್ಮ 2ನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.
ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಹಾಲಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಿಂಗ್ ಕೊಹ್ಲಿ ಗುಂಡು ಮಗುವಿನ ತಂದೆಯಾಗಿದ್ದಾರೆ. ಕೊಹ್ಲಿ-ಅನುಷ್ಕಾ (Virat Kohli-Anushka Sharma) ದಂಪತಿಯೇ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ತಮ್ಮ ಪುತ್ರನಿಗೆ ಅಕಾಯ್ (Virat Kohli Son Akaay) ಎಂದು ಹೆಸರಿಟ್ಟಿದ್ದಾರೆ. ವಿರುಷ್ಕಾ ದಂಪತಿಗೆ ಈಗಾಗಲೇ ಮೊದಲ ಮಗು ವಮಿಕಾ ಎಂಬ ಹೆಣ್ಣುಗುವಿದೆ.
ಫೆಬ್ರವರಿ 15ರ ಗುರುವಾರ ಅನುಷ್ಕಾ ಶರ್ಮಾ ಅವರು ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ 6 ದಿನಗಳ ಬಳಿಕ ದಂಪತಿ ಈ ಖುಷಿಯ ಮಾಹಿತಿಯನ್ನು ಹಂಚಿಕೊಂಡಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಈ ಸಂತಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತುಂಬಾ ಸಂತೋಷ ಮತ್ತು ನಮ್ಮ ಹೃದಯ ಪ್ರೀತಿಯಿಂದ ತುಂಬಿದೆ. ಫೆಬ್ರವರಿ 15 ರಂದು ನಾವು ನಮ್ಮ ಗಂಡು ಮಗು ಅಕಾಯ್, ವಮಿಕಾಳ ಪುಟ್ಟ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ! ಎಂದು ವಿರಾಟ್ ಕೊಹ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇವೆ. ಈ ಸಮಯದಲ್ಲಿ ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ. ಇಂತಿ ವಿರಾಟ್ ಮತ್ತು ಅನುಷ್ಕಾ ಎಂದು ಪತ್ರದ ಮೂಲಕ ವಿರಾಟ್ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಿನ 2 ಟೆಸ್ಟ್ ಪಂದ್ಯಗಳಿಗೆ ಸ್ಥಾನ ಪಡೆದಿದ್ದರೂ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯ ಆರಂಭವಾಗುವುದಕ್ಕೂ ಮೂರು ದಿನಗಳ ಮೊದಲು ಸರಣಿಯಿಂದ ಹಿಂದೆ ಸರಿದ್ದರು.
ಕೊಹ್ಲಿ ತಮ್ಮ ನಿರ್ಧಾರದ ಬಗ್ಗೆ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್ಮೆಂಟ್‌ನೊಂದಿಗೆ ಮಾತನಾಡಿದ್ದರು. ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಆದ್ಯತೆಯಾಗಿದ್ದರೂ, ಕೆಲವು ವೈಯಕ್ತಿಕ ಸಂದರ್ಭಗಳು ಅವರು ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿತ್ತು. ವಿರಾಟ್ ಕೊಹ್ಲಿ ಅವರ ಬದಲಿಗೆ ರಜತ್ ಪಾಟಿದಾರ್ ತಂಡದಲ್ಲಿ ಸ್ಥಾನ ಪಡೆದಿದ್ದರು.
ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರು. ಇದು ದಿನದಿಂದ ದಿನಕ್ಕೆ ಭಾರಿ ಕುತೂಹವನ್ನು ಹುಟ್ಟುಹಾಕಿತ್ತು. ಇದೇ ಸಂದರ್ಭದಲ್ಲಿ ಕೊಹ್ಲಿ ಅವರ ಆಪ್ತ ಸ್ನೇಹಿತ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಬಿವಿ ಡಿವಿಲಿಯರ್ಸ್ ಕೊಹ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂದು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಬಹಿರಂಗಪಡಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ನಂತರ ವಿರಾಟ್ ಅವರು ತಂಡದಿಂದ ವಿರಾಮ ಪಡೆದಿದ್ದ ಸುದ್ದಿ ಮತ್ತಷ್ಟು ಕುತೂಹಲ ಹೆಚ್ಚಿಸಿತ್ತು.
ಸದ್ಯ ಎಬಿ ಡಿವಿಲಿಯರ್ಸ್ ಅವರ ಅಂದಿನ ಮಾತು ಇದೀಗ ಸತ್ಯವಾಗಿದೆ. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಮುನ್ನಡೆ ಪಡೆದಿದೆ. ನಾಲ್ಕು ಮತ್ತು ಐದನೇ ಟೆಸ್ಟ್ ಪಂದ್ಯಗಳಿಗಾಗಿ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
2021ರ ಜನವರಿ 1 ರಂದು ವಿರುಷ್ಕಾ ದಂಪತಿ ವಮಿಕಾಳನ್ನು ಸ್ವಾಗತಿಸಿದ್ದರು. 2023ರ ಫೆಬ್ರವರಿ 15 ರಂದು ಎರಡನೇ ಮಗು ಅಕಾಯ್ ಆಗಮನವಾಗಿದೆ. ಕೊಹ್ಲಿ ಮತ್ತು ಅನುಷ್ಕಾ 2017 ರಲ್ಲಿ ವಿವಾಹವಾಗಿದ್ದರು. ಕಳೆದ ತಿಂಗಳು ಈ ಸ್ಟಾರ್ ದಂಪತಿ ತಮ್ಮ ಮಗಳು ವಮಿಕಾ ಅವರ ಮೂರನೇ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಇದೀಗ ಇವರ ಖುಷಿ ಡಬಲ್ ಆಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )