ಕನ್ನಡ ಸುದ್ದಿ  /  Sports  /  Virat Kohli Joins Tendulkar And Sehwag With First Fifty After 14 Months

Virat Kohli: ಬರೋಬ್ಬರಿ 14 ತಿಂಗಳ ಬಳಿಕ ಅರ್ಧಶತಕ; ಗವಾಸ್ಕರ್, ದ್ರಾವಿಡ್ ಹಿಂದಿಕ್ಕಿ ಸಚಿನ್‌-ಸೆಹ್ವಾಗ್ ಜೊತೆನಿಂತ ವಿರಾಟ್

ಕೊಹ್ಲಿ ಭಾರತದ ನೆಲದಲ್ಲಿ 58.82 ಸರಾಸರಿಯಲ್ಲಿ 4000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ. ದೇಶದಲ್ಲಿ 4000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟರ್‌ಗಳಲ್ಲಿ ಇದು ಅತ್ಯುತ್ತಮ ಸರಾಸರಿಯಾಗಿದೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (AFP)

ಕಳೆದ 16 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕದ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ, ಅಂತಿಮವಾಗಿ 14 ತಿಂಗಳ ಬಳಿಕ ಅರ್ಧಶತಕ ಗಳಿಸಿದ್ದಾರೆ. ಆ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್‌ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೂರನೇ ದಿನದಂದು ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ ಕೊಹ್ಲಿ ತವರಿನಲ್ಲಿ 4000 ಟೆಸ್ಟ್ ರನ್‌ಗಳನ್ನು ಕೂಡಾ ಪೂರೈಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಈ ದಾಖಲೆ ನಿರ್ಮಿಸಿದ್ದಾರೆ.

ವಿಶೇಷವೆಂದರೆ, ಭಾರತದಲ್ಲಿ ಅತಿ ವೇಗವಾಗಿ 4000 ಟೆಸ್ಟ್ ರನ್ ಪೂರೈಸಿದ ಮೂರನೇ ಆಟಗಾರ ಕೊಹ್ಲಿ. ಸ್ಟೈಲಿಶ್‌ ಬ್ಯಾಟರ್‌ ಭಾರತದಲ್ಲಿ ತಮ್ಮ 77ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಕಿಂಗ್‌ ಕೊಹ್ಲಿ ಪ್ರಸ್ತುತ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (88) ಮತ್ತು ಕ್ರಿಕೆಟ್‌ ದಂತಕಥೆ ಸುನಿಲ್ ಗವಾಸ್ಕರ್ (87) ಅವರನ್ನು ಹಿಂದಿಕ್ಕಿದ್ದಾರೆ. ಈ ಮೈಲಿಗಲ್ಲನ್ನು ತಲುಪಲು ಈ ಪಂದ್ಯಕ್ಕೂ ಮುನ್ನ ಕೊಹ್ಲಿಗೆ 42 ರನ್‌ಗಳ ಅಗತ್ಯವಿತ್ತು. ಶನಿವಾರದ ದಿನದಾಟದ ಅಂತಿಮ ಅವಧಿಯಲ್ಲಿ ಅವರು ನಾಥನ್ ಲಿಯಾನ್ ಅವರ ಎಸೆತದಲ್ಲಿ ಬೌಂಡರಿ ಸಿಡಿಸುವುದರೊಂದಿಗೆ ಈ ಸಾಧನೆ ಮಾಡಿದರು. ಇದಾದ ಕೆಲವೇ ನಿಮಿಷಗಳಲ್ಲಿ ಕೊಹ್ಲಿ ತಮ್ಮ 29ನೇ ಟೆಸ್ಟ್‌ ಅರ್ಧಶತಕ ಪೂರೈಸಿದರು. ಇದು 14 ತಿಂಗಳ ನಂತರ ಅವರ ಮೊದಲ ಟೆಸ್ಟ್ ಅರ್ಧಶತಕವಾಗಿದೆ. 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಕೊನೆಯ ಬಾರಿ ಫಿಫ್ಟಿ ದಾಖಲಿಸಿದ್ದರು.

ಕೊಹ್ಲಿ, ಭಾರತದ ನೆಲದಲ್ಲಿ 58.82 ಸರಾಸರಿಯಲ್ಲಿ 4000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ. ದೇಶದಲ್ಲಿ 4000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟರ್‌ಗಳಲ್ಲಿ ಇದು ಅತ್ಯುತ್ತಮ ಸರಾಸರಿಯಾಗಿದೆ.

ಸೆಹ್ವಾಗ್ ಕೇವಲ 71 ಇನ್ನಿಂಗ್ಸ್‌ಗಳಲ್ಲಿ ಭಾರತದಲ್ಲಿ 4000 ರನ್‌ಗಳನ್ನು ವೇಗವಾಗಿ ತಲುಪಿದ್ದರು. 78 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಲಿಟಲ್ ಮಾಸ್ಟರ್ 153 ಇನ್ನಿಂಗ್ಸ್‌ಗಳಲ್ಲಿ 7,216 ರನ್‌ಗಳೊಂದಿಗೆ ಭಾರತದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ದ್ರಾವಿಡ್ (5598), ಗವಾಸ್ಕರ್ (5067) ಮತ್ತು ಸೆಹ್ವಾಗ್ (4656) ಇದ್ದಾರೆ.

ಮೂರನೇ ದಿನದಂದು ಭಾರತವು ಚೇತೇಶ್ವರ ಪೂಜಾರ ಅವರ ವಿಕೆಟ್‌ ಕಳೆದುಕೊಂಡ ನಂತರ ಕೊಹ್ಲಿ ಕ್ರೀಸ್‌ಗೆ ಬಂದರು. ಉತ್ತಮ ಸ್ಥಿತಿಯಲ್ಲಿದ್ದ ಭಾರತಕ್ಕೆ ಮತ್ತಷ್ಟು ರನ್‌ಗಳ ಅಗತ್ಯವಿತ್ತು. ಅದಾಗಲೇ ಶತಕ ತಲುಪಿದ್ದ ಶುಬ್ಮನ್ ಗಿಲ್ ಅವರೊಂದಿಗೆ ವಿರಾಟ್‌ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು. ಗಿಲ್‌ ಔಟಾದ ಬೆನ್ನಲ್ಲೇ ಜಡೇಜಾ ಜೊತೆಗೂಡಿದ ಕಿಂಗ್‌ ಅಜೇಯ 44 ರನ್‌ಗಳ ಜೊತೆಯಾಟವಾಡಿದ್ದಾರೆ. ಅಲ್ಲದೆ ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿ ಆಟವಾಡುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಪೇರಿಸಿದ್ದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಭಾರತ ಕೂಡಾ ಉತ್ತಮ ಮೊತ್ತ ಕಲೆ ಹಾಕುವತ್ತ ಮುನ್ನುಗ್ಗಿದೆ. ಸದ್ಯ ಮೂರನೇ ದಿನದಾಟದ ಅಂತ್ಯದ ವೇಳೆಗೆ ಭಾರತವು ಮೂರು ವಿಕೆಟ್ ಕಳೆದುಕೊಂಡು 289 ರನ್‌ ಗಳಿಸಿದೆ. ಅಲ್ಲದೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.