ಕನ್ನಡ ಸುದ್ದಿ  /  Sports  /  Virat Kohli S Explosive Century Team India Has Given Huge Target To Win Sri Lanka

India vs Sri Lanka 1st ODI: ವಿರಾಟ್ ಕೊಹ್ಲಿ ಅಬ್ಬರದ ಶತಕ; ಲಂಕಾ ಗೆಲುವಿಗೆ ಬೃಹತ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 373 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ (ಫೋಟೋ-PTI)
ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ (ಫೋಟೋ-PTI)

ಗುವಾಹಟಿ(ಅಸ್ಸಾಂ): ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟ ಹಾಗೂ ಮಾಜಿ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ಟೀಂ ಇಂಡಿಯಾ, ಲಂಕಾ ವಿರುದ್ಧ 7 ವಿಕೆಟ್ ನಷ್ಟಕ್ಕೆ 373 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಗಳನ್ನು ಭಾರತ ತಂಡದ ಆಟಗಾರರು ಮನಬಂದಂತೆ ದಂಡಿಸಿದರು. ಪರಿಣಾಮ ಮೊದಲ ಏಕದಿನ ಪಂದ್ಯದಲ್ಲಿ ದಸುನ್ ಶನಕ ನೇತೃತ್ವದ ಲಂಕಾ ತಂಡದ ಗೆಲುವಿಗೆ 374 ರನ್ ಗಳ ಭಾರಿ ಮೊತ್ತದ ಟಾರ್ಗೆಟ್ ನೀಡಿದ್ದಾರೆ.

ರೋಹಿತ್ ಮತ್ತು ಗಿಲ್ 143 ರನ್ ಗಳ ಉತ್ತಮ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 9 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ 83 ರನ್ ಗಳಿಸಿದ್ದಾಗ ಮಧುಶನಕ ಓವರ್ ನಲ್ಲಿ ಬೌಲ್ಡ್ ಆದರು. ಬಳಿಕ ಬಂದ ವಿರಾಟ್ ತಮ್ಮ ಸೊಗಸಾದ ಆಟದ ಮೂಲಕ ನೆರದಿದ್ದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 87 ಎಸೆತಗಳಲ್ಲಿ 113 ರನ್ ಪೂರೈಸಿದರು. ಇದರಲ್ಲಿ 12 ಬೌಂಡರಿ ಹಾಗೂ 1 ಏಕೈಕ ಸಿಕ್ಸರ್ ಸೇರಿತ್ತು. ಇದರೊಂದಿಗೆ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 73ನೇ ಶತಕವನ್ನು ಪೂರೈಸಿದರು. ಜೊತೆಗೆ ಸ್ವದೇಶಿ ನೆಲದಲ್ಲಿ 20ನೇ ಶತಕ ಪೂರೈಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದರು.

ಶುಭಮನ್ ಗಿಲ್ 70, ಶ್ರೇಯಸ್ ಅಯ್ಯರ್ 28, ಕೆ.ಎಲ್.ರಾಹುಲ್ 39, ಹಾರ್ದಿಕ್ ಪಾಂಡ್ಯ 14, ಅಕ್ಷರ್ ಪಟೇಲ್ 9 ರನ್, ಮೊಹಮ್ಮದ್ ಶಮಿ ಔಟಾಗದೆ 4 ರನ್ ಗಳಿಸಿದರೆ, ಮೊಹಮ್ಮದ್ ಸಿರಾಜ್ ಔಟಾಗದೆ 7 ರನ್ ಗಳಿಸಿದರು. ಶ್ರೀಲಂಕಾ ಪರ ಕಸುನ್ ರಜಿತ 3 ವಿಕೆಟ್ ಪಡೆದರು.

ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ಶ್ರೀಲಂಕಾ ತಂಡ:

ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶಾನ್ ಮಧುಶಂಕ