ಕನ್ನಡ ಸುದ್ದಿ  /  Sports  /  Wasim Akram After Mitchell Starc Shreds Top Order Of India

Wasim Akram : 'ಕೊಹ್ಲಿ, ರೋಹಿತ್ ಮತ್ತು ರಾಹುಲ್; ಇವರೆಲ್ಲರೂ...': ಭಾರತದ ಅಗ್ರಕ್ರಮಾಂಕ ಕುಸಿತ ಕುರಿತು ವಾಸಿಂ ಅಕ್ರಮ್ ಪ್ರತಿಕ್ರಿಯೆ

ಭಾರತದ ಬ್ಯಾಟಿಂಗ್‌ ಲೈನಪ್‌ ಕುಸಿಯುತ್ತಿದ್ದಂತೆ, ಸಾರ್ವಕಾಲಿಕ ಶ್ರೇಷ್ಠ ಎಡಗೈ ವೇಗಿ ವಾಸೀಮ್ ಅಕ್ರಮ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂಡೋ-ಆಸೀಸ್‌ ಪಂದ್ಯದ ಬಗ್ಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆ
ಇಂಡೋ-ಆಸೀಸ್‌ ಪಂದ್ಯದ ಬಗ್ಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆ (Getty Images)

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಹತ್ತು ವಿಕೆಟ್‌ಗಳಿಂದ ಜಯ ಗಳಿಸಿತು. 9ನೇ ಬಾರಿಗೆ ಐದು ವಿಕೆಟ್‌ಗಳ ಗೊಂಚಲನ್ನು ಕಬಳಿಸುವ ಮೂಲಕ ವೇಗಿ ಮಿಚೆಲ್ ಸ್ಟಾರ್ಕ್ ಭಾರತದ ಅಗ್ರ ಕ್ರಮಾಂಕಕ್ಕೆ ಪೆಟ್ಟು ಕೊಟ್ಟರು. ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದ ಸ್ಟಾರ್ಕ್, ಭಾರತವನ್ನು 117 ರನ್‌ಗಳಿಗೆ ಕಟ್ಟಿಹಾಕಿದರು. ಇದು ತವರಿನಲ್ಲಿ ಭಾರತದ ನಾಲ್ಕನೇ ಕಡಿಮೆ ಏಕದಿನ ಮೊತ್ತ.

ಎಡಗೈ ವೇಗಿಗಳ ವಿರುದ್ಧ ರನ್‌ ಗಳಿಸಲು ಭಾರತ ಪರದಾಡುತ್ತಿರುವುದು ಇದೇ ಮೊದಲಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಯೂ, ಮೊಹಮ್ಮದ್ ಅಮೀರ್ ಭಾರತವನ್ನು ಕಾಡಿದ್ದರು. ಮತ್ತೊಂದೆಡೆ 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟ್ರೆಂಟ್ ಬೌಲ್ಟ್ ಭಾರತದ ಅಗ್ರ ಕ್ರಮಾಂಕವನ್ನು ಹೊಡೆದುರುಳಿಸಿದ್ದರು.

ಭಾರತದ ಬ್ಯಾಟಿಂಗ್‌ ಲೈನಪ್‌ ಕುಸಿಯುತ್ತಿದ್ದಂತೆ, ಸಾರ್ವಕಾಲಿಕ ಶ್ರೇಷ್ಠ ಎಡಗೈ ವೇಗಿ ವಾಸೀಮ್ ಅಕ್ರಮ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಡಗೈ ವೇಗಿಗಳು ಚೆಂಡನ್ನು ಬ್ಯಾಟರ್‌ಗಳತ್ತ ತಲುಪಿಸುವ ಕೋನವು ಬ್ಯಾಟರ್‌ಗಳಿಗೆ ಕಷ್ಟಕರವಾಗಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ. ಇದು ವಿರಾಟ್ ಕೊಹ್ಲಿ, ರೋಹಿತ್ ಅಥವಾ ರಾಹುಲ್ ಮಾತ್ರವಲ್ಲ, ವಿಶ್ವದ ಕೆಲವು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೂ ಅಂತಹ ಬೌಲರ್‌ಗಳನ್ನು ಎದುರಿಸುವುದು ಕಷ್ಟಕರ. ಸ್ವಲ್ಪ ಪ್ರಮಾಣದ ಮಳೆಯ ನಂತರ ಟಾಸ್ ಗೆದ್ದ ಆಸ್ಟ್ರೇಲಿಯಾ, ಮೋಡ ಕವಿದ ವಾತಾವರಣವನ್ನು ಉತ್ತಮವಾಗಿ ಬಳಸಿಕೊಂಡಿತು. ಇದಕ್ಕೆ ಭಾರತೀಯ ಬ್ಯಾಟರ್‌ಗಳಿಂದ ಉತ್ತರ ಸಿಗಲಿಲ್ಲ," ಎಂದು ಅವರು ಹೇಳಿದರು.

“ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್; ಇವರೆಲ್ಲರೂ ಶ್ರೇಷ್ಠ ಆಟಗಾರರು. ರಾಹುಲ್ ಭಾರತಕ್ಕೆ ಕೊನೆಯ ಪಂದ್ಯವನ್ನು ಗೆಲ್ಲಿಸಿ ಕೊಟ್ಟರು. ಎಡಗೈ ಆಟಗಾರನ ಎಸೆತಕ್ಕೆ ಇವರು ಮಾತ್ರ ಬಲಿಯಾಗುತ್ತಾರೆ ಎಂಬುದು ವಿಷಯವಲ್ಲ. ಇತರರು ಕೂಡಾ ಔಟಾಗುತ್ತಾರೆ. ವಿಶೇಷವಾಗಿ ಈ ಪಿಚ್‌ನಲ್ಲಿ ಆಟವನ್ನು ವೀಕ್ಷಿಸುವಾಗ ನಾನು ಆಸ್ಟ್ರೇಲಿಯಾದಲ್ಲಿ ಆಟವನ್ನು ನೋಡುತ್ತಿರುವಂತೆ ಭಾಸವಾಯಿತು” ಎಂದು ಅಕ್ರಂ ಸ್ಪೋರ್ಟ್ಸ್ ತಕ್‌ಗೆ ತಿಳಿಸಿದರು.

“ಮಳೆಯೂ ಸುರಿದಿತ್ತು, ಮೈದಾನವೂ ಹಚ್ಚ ಹಸಿರಾಗಿತ್ತು. ನ್ಯೂಜಿಲೆಂಡ್‌ನಲ್ಲಿ ಪಂದ್ಯ ನಡೆಯುತ್ತಿದ್ದಂತೆ ನನಗೆ ಭಾಸವಾಯಿತು. ಮೈದಾನ ಚೆನ್ನಾಗಿತ್ತು. ಆಸ್ಟ್ರೇಲಿಯಾ ಚೆನ್ನಾಗಿ ಆಡಿತು. ಚೆಂಡು ಆ ವಿಕೆಟ್‌ನಲ್ಲಿ ಸೀಮಿಂಗ್ ಆಗುತ್ತಿದೆ ಎಂದು ನಾನು ಭಾವಿಸಿದೆ. ಆಸ್ಟ್ರೇಲಿಯಾ ಕಡಿಮೆ ಮೊತ್ತವನ್ನು ತ್ವರಿತವಾಗಿ ಚೇಸ್‌ ಮಾಡಿತು. ಆದರೂ, ಸಿರಾಜ್‌ ಎಸೆದ ಒಂದೆರಡು ಓವರ್‌ಗಳನ್ನು ನಾನು ನೋಡಿದೆ. ಚೆಂಡು ಎರಡೂ ಕಡೆಗಳಲ್ಲಿ ಸೀಮ್ ಆಗುತ್ತಿತ್ತು,” ಎಂದು ಅವರು ವಿವರಿಸಿದರು.

ಸ್ಟಾರ್ಕ್ ವಿಶ್ವದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂದು ಅಕ್ರಂ ಶ್ಲಾಘಿಸಿದರು. “ನಾನು ಪಂದ್ಯವನ್ನು ನಿಯಮಿತವಾಗಿ ವೀಕ್ಷಿಸಿಲ್ಲ. ಮಿಚೆಲ್ ಸ್ಟಾರ್ಕ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದಕ್ಕಾಗಿ ಅಭಿನಂದನೆಗಳು. ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಪಡೆದು ನಂತರ ಇನ್ನೂ ಎರಡು ವಿಕೆಟ್‌ಗಳನ್ನು ಪಡೆದರು. ಅವರು ಶ್ರೇಷ್ಠ ಬೌಲರ್. ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ,” ಎಂದು ಅಕ್ರಂ ಹೇಳಿದರು.