ಕನ್ನಡ ಸುದ್ದಿ  /  Sports  /  Watch As Spectators Chant Jai Shree Ram To Mohammed Shami During Ind Vs Aus 4th Test Match At Narendra Modi Stadium

VIDEO: ‘ಜೈ ಶ್ರೀರಾಮ್​’​ ಎಂದು ಮೊಹಮ್ಮದ್​ ಶಮಿ ಹೆಸರು ಕೂಗಿಯೇ ನಿಂದಿಸಿದ ಅಭಿಮಾನಿಗಳು!

Mohammed Shami: ಅಂತಿಮ ಟೆಸ್ಟ್​ ಆರಂಭಕ್ಕೂ ಮುನ್ನ ಡಗೌಟ್​​ನಲ್ಲಿ ಆಟಗಾರರು ನಿಂತಿದ್ದರು. ಕ್ಯಾಮೆರಾ ಆ ಕಡೆಯೇ ತೋರಿಸಲಾಗಿತ್ತು ಕೂಡ. ಆದರೆ ಈ ವೇಳೆ ಜೈ ಶ್ರೀರಾಮ್​ ಎಂದು ಕೂಗಲು ಪ್ರಾರಂಭಿಸಿದರು. ಅಲ್ಲಿಗೆ ಸುಮ್ಮನಾಗದ ಅಭಿಮಾನಿಗಳು ಶಮಿ ಅವರನ್ನು ಕಂಡು.. ಹೆಸರು ಕೂಗಿಯೇ ನಿಂದಿಸಿದರು.

ಡಗೌಟ್​ನಲ್ಲಿದ್ದ ಮೊಹಮ್ಮದ್​ ಶಮಿ
ಡಗೌಟ್​ನಲ್ಲಿದ್ದ ಮೊಹಮ್ಮದ್​ ಶಮಿ

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಕೆಲವು ಅಭಿಮಾನಿಗಳು ಕೆಟ್ಟದಾಗಿ ವರ್ತಿಸಿದ್ದಾರೆ. ಅಹ್ಮದಾಬಾದ್ ಟೆಸ್ಟ್ ಆರಂಭಕ್ಕೂ ಮುನ್ನ ಬೌಂಡರಿ ಬಳಿ ಕಾಣಿಸಿಕೊಂಡಿದ್ದ ಭಾರತೀಯ ಆಟಗಾರನನ್ನು ನಿಂದಿಸಿದ್ದಾರೆ. ಬೌಂಡರಿ ಬಳಿಯಿದ್ದ ಆಟಗಾರರ ಪೈಕಿ ಮೊಹಮ್ಮದ್ ಶಮಿ (Mohammed Shami) ಅವರನ್ನೇ ಗುರಿಯಾಗಿಸಿಕೊಂಡು ನಿಂದಿಸಿದ್ದಾರೆ. ಅದರ ವಿಡಿಯೋ ಈಗ ವೈರಲ್​ ಆಗುತ್ತಿದ್ದು, ಇದು ಕ್ರಿಕೆಟ್​​ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಶಮಿ... ಜೈ ಶ್ರೀರಾಮ್​ ಎಂದ ಫ್ಯಾನ್ಸ್​.!

ಡಗೌಟ್​​ನಲ್ಲಿ ಆಟಗಾರರು ನಿಂತಿದ್ದರು. ಕ್ಯಾಮೆರಾ ಆ ಕಡೆಯೇ ತೋರಿಸಲಾಗಿತ್ತು ಕೂಡ. ಮೊದಲೂ ಸೂರ್ಯಕುಮಾರ್​ ಎಂದು ಕೂಗಲು ಆರಂಭಿಸಿದರು. ಬಳಿಕ ಸೂರ್ಯ ಅದಕ್ಕೆ ಪ್ರತಿಕ್ರಿಯೆ ನೀಡಿದ ಬಳಿಕ ಜೈ ಶ್ರೀರಾಮ್​ ಎಂದು ಕೂಗಲು ಪ್ರಾರಂಭಿಸಿದರು. ಅಲ್ಲಿಗೆ ಸುಮ್ಮನಾಗದ ಅಭಿಮಾನಿಗಳು ಶಮಿ ಅವರನ್ನು ಕಂಡು.. ಹೆಸರು ಕೂಗಿಯೇ ನಿಂದಿಸಿದರು. ‘ಶಮಿ... ಜೈ ಶ್ರೀರಾಮ್​‘, ‘ಶಮಿ... ಜೈ ಶ್ರೀರಾಮ್​‘ ಎಂದು ಹೇಳಲು ಪ್ರಾರಂಭಿಸಿದರು. ಆದರೆ ಭಾರತದ ವೇಗಿ ಅಭಿಮಾನಿಗಳ ಕೂಗುವಿಕೆಯನ್ನು ನಿರ್ಲಕ್ಷಿಸಿದರು.

ಆದರೆ ಈ ಘಟನೆಯು ಮತ್ತೊಮ್ಮೆ ಧರ್ಮವನ್ನು ಅನಗತ್ಯವಾಗಿ ಕ್ರೀಡೆಗೆ ಎಳೆದು ತಂದಂತೆ ಎಂದು ಬೆಳಕು ಚೆಲ್ಲುತ್ತದೆ. ಇದರ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದ್ದು, ನೆಟಿಜನ್ಸ್​ ಈ ಕೀಳು ವರ್ತನೆಗೆ ಬೇಸರದ ಜೊತೆಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇದು ಕ್ರಿಕೆಟ್​ ಪ್ರೇಮಿಗಿರುವ ಸಭ್ಯತೆನಾ.? ಮತ್ತು ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ (Gujarat Cricket Association) ಶಮಿ ಘಟನೆಗೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ನಿಂದನೆಗೊಳಗಾಗಿದ್ದು ಇದೇ ಮೊದಲಲ್ಲ!

2021ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು ಹೀನಾಯ ಸೋಲು ಅನುಭವಿಸಿತ್ತು. ಈ ವೇಳೆ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಪ್ರಮುಖವಾಗಿ ಶಮಿ ಧರ್ಮದ ಹೆಸರನ್ನು ಉಲ್ಲೇಖ ಮಾಡಿದ್ದ ನೆಟ್ಟಿಗರು, 'ದೇಶದ್ರೋಹಿ ಶಮಿ ಪಾಕಿಸ್ತಾನಕ್ಕೆ ಹೊರಟು ಹೋಗು' ಎಂದೆಲ್ಲ ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದರು. ಶಮಿ ಹೆಸರನ್ನು ಟ್ಯಾಗ್​ ಮಾಡಿ ಕೆಟ್ಟ ಕೆಟ್ಟ ಕಾಮೆಂಟ್​ ಮಾಡಲಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ನಿಂದನೆ, ಅವಮಾನಗಳು ಬೌನ್ಸರ್​ನಂತೆ ತೂರಿ ಬರುತ್ತಿದ್ದರೆ, ಅದಕ್ಕೆ ಎದೆಯೊಡ್ಡಿ ನಿಂತಿದ್ದು ಮತ್ಯಾರೂ ಅಲ್ಲ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಬಹಿರಂಗವಾಗಿಯೇ ಶಮಿಗೆ ವಿರಾಟ್ ಕೊಹ್ಲಿ ಬೆಂಬಲ ಸೂಚಿಸಿದ್ದರು. ಕಿಡಿಗೇಡಿಗಳ ವಿರುದ್ದ ಕೊಹ್ಲಿ ಹೌಹಾರಿದ್ದರು.

ನೆಟ್ಟಿಗರಿಂದ ಅವಾಚ್ಯ ಶಬ್ದಗಳಿಂದ ನಿಂದನೆಗೆ ಒಳಗಾದ ಮೊಹಮ್ಮದ್ ಶಮಿಗೆ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದರು. ಆ ಪಂದ್ಯದಲ್ಲಿ ಮೊಹಮ್ಮದ್ ಶಮಿ 3.5 ಓವರ್ ಗಳಲ್ಲಿ 43 ರನ್ ನೀಡುವ ಮೂಲಕ ಟೀಮ್​​ ಇಂಡಿಯಾ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದರು.

ದಿಟ್ಟ ತಿರುಗೇಟು ನೀಡುತ್ತಿರುವ ಭಾರತ.!

ಅಂತಿಮ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾಗೆ ದಿಟ್ಟ ತಿರುಗೇಟು ನೀಡುತ್ತಿದೆ. ಮೊದಲ ಇನ್ನಿಂಗ್ಸ್​​ನಲ್ಲಿ 480 ರನ್​ಗಳ ಬೃಹತ್​ ಮೊತ್ತ ಪೇರಿಸಿದ್ದ ಆಸಿಸ್​​ಗೆ, ಭಾರತ ತನ್ನದೇ ದಾಟಿಯಲ್ಲಿ ಉತ್ತರ ನೀಡುತ್ತಿದೆ. 4ನೇ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 289 ರನ್​​ ಗಳಿಗೆ 3 ವಿಕೆಟ್​ ಕಳೆದುಕೊಂಡಿದೆ. ಆದರೆ ಇನ್ನೂ 191 ರನ್​ಗಳ ಹಿನ್ನಡೆಯಲ್ಲಿದೆ. ವಿರಾಟ್​ ಕೊಹ್ಲಿ (59), ರವೀಂದ್ರ ಜಡೇಜಾ (16) ಅಜೇಯರಾಗಿ ಕ್ರೀಸ್​ ಕಾಯ್ದುಕೊಂಡಿದ್ದಾರೆ.