ಒಲಿಂಪಿಕ್ಸ್ ಧ್ವಜದಲ್ಲಿರುವ 5 ರಿಂಗ್ಗಳ ಅರ್ಥವೇನು; ಅದರ ಇತಿಹಾಸ, ವಿನ್ಯಾಸದ ಕುರಿತು ವಿವರ ಇಲ್ಲಿದೆ
Olympic Rings: ಒಲಿಂಪಿಕ್ ಧ್ವಜದಲ್ಲಿ ಇರುವ 5 ರಿಂಗ್ಗಳ ಅರ್ಥವೇನು? ಅದರ ಇತಿಹಾಸ, ಅರ್ಥ, ವಿನ್ಯಾಸದ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಜುಲೈ 26 ರಿಂದ ಆಗಸ್ಟ್ 11ರ ತನಕ 16 ನಗರಗಳಲ್ಲಿ ಜರುಗಲಿರುವ ಪ್ಯಾರಿಸ್ ಒಲಿಂಪಿಕ್ಸ್ಗೆ (Paris Olympics 2024) ಎಲ್ಲಾ ದೇಶಗಳು ಸಿದ್ಧಗೊಂಡಿವೆ. ಪದಕ ಬೇಟೆಗೆ ಸಜ್ಜಾಗಿವೆ. 32 ಕ್ರೀಡೆಗಳ 329 ಈವೆಂಟ್ಗಳಲ್ಲಿ 10,500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ಈವೆಂಟ್ಗೆ ಕಾತರದಿಂದ ಕಾಯುತ್ತಿರುವ ಕ್ರೀಡಾ ಪ್ರೇಮಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಷಯದ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಒಲಿಂಪಿಕ್ ಧ್ವಜದಲ್ಲಿ ಇರುವ 5 ರಿಂಗ್ಗಳ ಅರ್ಥವೇನು ಎಂಬ ಪ್ರಶ್ನೆ ಎದ್ದಿದೆ. ಅದರ ಇತಿಹಾಸ, ಅರ್ಥ, ವಿನ್ಯಾಸದ ಕುರಿತು ವಿವರ ಇಲ್ಲಿದೆ.
ಒಲಿಂಪಿಕ್ ಚಿಹ್ನೆಯು ಐದು ವಿಭಿನ್ನ ಬಣ್ಣಗಳ ಐದು ಉಂಗುರಗಳನ್ನು ಒಳಗೊಂಡಿದೆ. ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು (ಎಡದಿಂದ ಬಲಕ್ಕೆ) ಬಣ್ಣದ ಉಂಗುರಗಳಿವೆ. ಇವು 5 ಖಂಡಗಳ ಒಕ್ಕೂಟವನ್ನು ಸಂಕೇತಿಸುತ್ತವೆ. ಅವುಗಳೆಂದರೆ- ಆಫ್ರಿಕಾ, ಅಮೆರಿಕ, ಏಷ್ಯಾ, ಯುರೋಪ್ ಮತ್ತು ಓಷಿಯಾನಿಯಾ (ಪೆಸಿಫಿಕ್ ಸಾಗರದ ದ್ವೀಪಗಳ ಪ್ರದೇಶಕ್ಕೆ ಸಾಮಾನ್ಯವಾಗಿ ಈ ಹೆಸರಿದೆ). ಯಾವುದೇ ಉಂಗುರದ ಬಣ್ಣವು ನಿರ್ದಿಷ್ಟ ಖಂಡವನ್ನು ಪ್ರತಿನಿಧಿಸುವುದಿಲ್ಲ. ಆದರೆ ಈ ರಿಂಗ್ಗಳಲ್ಲಿರುವ ಬಣ್ಣವು ಪ್ರತಿ ರಾಷ್ಟ್ರದ ರಾಷ್ಟ್ರಧ್ವಜದಲ್ಲಿ ಕಾಣಿಸುತ್ತದೆ.
ಆಧುನಿಕ ಒಲಿಂಪಿಕ್ಸ್ ಪಿತಾಮಹ ಫ್ರಾನ್ಸ್ನ ಪಿಯರ್ ಡಿ ಕೂಬರ್ಟಿನ್ ಅವರು ಮೊದಲ ಬಾರಿಗೆ ವಿನ್ಯಾಸ ಮಾಡಿದರು. ಆ ಐದು ಬಣ್ಣಗಳಿಗೆ ಹಣ್ಣ ಹಚ್ಚಿದ್ದು 1913ರಲ್ಲೇ. ಅದೇ ವರ್ಷ ಸಾರ್ವಜನಿಕವಾಗಿ ಅನಾವರಣ ಮಾಡಲಾಗಿತ್ತು. ಉಂಗುರಗಳನ್ನು ಒಳಗೊಂಡಿರುವ ಒಲಿಂಪಿಕ್ ಧ್ವಜವನ್ನು 1914ರಲ್ಲಿ ಅಧಿಕೃತವಾಗಿ ಅಂಗೀಕರಿಸಲಾಯಿತು. ಇಂದು, ಒಲಿಂಪಿಕ್ ಉಂಗುರಗಳು ಜಾಗತಿಕ ಏಕತೆ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೌಹಾರ್ದ ಸ್ಪರ್ಧೆಯ ಉತ್ಸಾಹದ ಪ್ರಬಲ ಸಂಕೇತವಾಗಿದೆ.
ಉಂಗುರಗಳ ಬಣ್ಣಗಳನ್ನು ಕೂಬರ್ಟಿನ್ ಅವರು ಎಚ್ಚರಿಕೆಯಿಂದ ಆರಿಸಿಕೊಂಡಿದ್ದು, ಒಲಂಪಿಕ್ಸ್ ಚಳುವಳಿಯ ಒಳಗೊಳ್ಳುವಿಕೆ, ಭಾಷೆ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಒತ್ತಿಹೇಳಲು ಉದ್ದೇಶಪೂರ್ವಕ ವಿನ್ಯಾಸದ ಆಯ್ಕೆಯಾಗಿದೆ. 1908ರಲ್ಲಿ ನಡೆದಿದ್ದ ಲಂಡನ್ ಒಲಿಂಪಿಕ್ಸ್ನಲ್ಲಿ ಉದ್ಘಾಟನಾ ಸಮಾರಂಭವನ್ನು ಮೊದಲ ಬಾರಿಗೆ ಆಯೋಜಿಸಲಾಗಿತ್ತು. 1896ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗ್ರೀಕ್ ಆಯೋಜಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ
ಪ್ಯಾರಿಸ್ ಒಲಿಂಪಿಕ್ಸ್ ವರ್ಣರಂಜಿತ ಉದ್ಘಾಟನಾ ಸಮಾರಂಭ ಜುಲೈ 26ರ ಸಂಜೆ 7.30ಕ್ಕೆ ಸೀನ್ ನದಿಯಲ್ಲಿ ನೆರವೇರಲಿದೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 8ರವರೆಗೆ ಜರುಗಲಿದೆ. ಮಹೋನ್ನತ ಕ್ರೀಡಾಕೂಟಕ್ಕೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ಸಂಘಟಕರು ಮಾಡಿದ್ದಾರೆ. ಕ್ರೀಡಾಕೂಟಕ್ಕಾಗಿಯೇ ಸೀನ್ ನದಿಯನ್ನು ಸಾರ್ವಜನಿಕ ನಿಧಿಯಿಂದ ಹೂಡಿಕೆ ಮಾಡಿ ಸ್ನಾನಮಾಡಲು ಯೋಗ್ಯ ಎನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.
ಬೋಟ್‌ಗಳಲ್ಲೇ ಕ್ರೀಡಾಪಟುಗಳ ಪರೇಡ್
ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆಯುವ ಉದ್ಘಾಟನಾ ಸಮಾರಂಭವಾಗಿದೆ. 10,500 ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ 6 ಕಿಲೋಮೀಟರ್ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. ಕಳೆದ ಒಲಿಂಪಿಕ್ಸ್ 2020ರಲ್ಲಿ ಟೊಕಿಯೋದಲ್ಲಿ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಭಾರತ 7 ಪದಕ ಗೆದ್ದು ಗೆದ್ದಿತ್ತು.