ಬೆಂಗಳೂರು ಬುಲ್ಸ್ ತಂಡದ ಹೊಸ ಕೋಚ್ ಬಿ ಸಿ ರಮೇಶ್ ಯಾರು? ಗೂಳಿಗಳ ಬಳಗಕ್ಕೆ ಇನ್ಮುಂದೆ ಇವರೇ ದ್ರೋಣಾಚಾರ್ಯ
Bengaluru Bulls: ಬೆಂಗಳೂರು ಬುಲ್ಸ್ ತಂಡಕ್ಕೆ ಕನ್ನಡಿಗನೇ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ್ ಅವರನ್ನು ತಂಡದ ನೂತನ ತರಬೇತುದಾರರನ್ನಾಗಿ ನೇಮಿಸಲಾಗಿದೆ.

ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೂ ಮುನ್ನ ಬೆಂಗಳೂರು ಬುಲ್ಸ್ ತಂಡವು ಹೊಸ ಮುಖ್ಯ ಕೋಚ್ ನೇಮಿಸಿದೆ. ತಂಡದೊಂದಿಗೆ ಇದುವರೆಗಿನ ಎಲ್ಲಾ 11 ಸೀಸನ್‌ಗಳಲ್ಲಿ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ರಣಧೀರ್ ಸಿಂಗ್ ಅವರನ್ನು ತಂಡ ರಿಲೀಸ್ ಮಾಡಿದೆ. ಬುಲ್ಸ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ಪಿಕೆಎಲ್ ಸೀಸನ್ 11ರಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆಡಿದ 22 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದು, ಇದುವರೆಗಿನ ಕಳಪೆ ಸೀಸನ್ ಎದುರಿಸಿತು. ಸೀಸನ್ ಮುಕ್ತಾಯವಾದ ಬೆನ್ನಲ್ಲೇ ತಂಡದ ಕೋಚ್ ಅನ್ನು ಬದಲಿಸಲಾಗಿದೆ. ನೂತನ ಕೋಚ್ ಆಗಿ ಕನ್ನಡಿಗನನ್ನೇ ನೇಮಿಸಲಾಗಿದೆ.
ಬುಲ್ಸ್ ತಂಡಕ್ಕೆ ಹೊಸದಾಗಿ ಕೋಚ್ ಆಗಿ ಬಂದವರು ಕನ್ನಡಿಗ ಬಿ.ಸಿ. ರಮೇಶ್. ಈವರೆಗೆ ಬುಲ್ಸ್ ಕೋಚ್ ಆಗಿದ್ದ ರಣಧೀರ್, ತಂಡಕ್ಕೆ ಸತತ 11 ಸೀಸನ್‌ಗಳಿಗೆ ಕೋಚ್ ಆಗಿದ್ದರು. ಪಿಕೆಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಒಂದೇ ತಂಡಕ್ಕೆ ಸೇವೆ ಸಲ್ಲಿಸಿದ ಕೋಚ್ ಕೂಡ ಆಗಿದ್ದಾರೆ. ಪಿಕೆಎಲ್ ಇತಿಹಾಸದಲ್ಲಿ ರಣಧೀರ್ ಅವರ ನಂತರ ಎಲ್ಲಾ 11 ಸೀಸನ್‌ಗಳಲ್ಲೂ ಪಿಕೆಎಲ್‌ನಲ್ಲಿ ಸೇವೆ ಸಲ್ಲಿಸಿದ ಎರಡನೇ ಮುಖ್ಯ ಕೋಚ್ ರಮೇಶ್. ಹೀಗಾಗಿ ಅನುಭವಿ ಕೋಚ್ ಸಲಹೆ ತಂಡಕ್ಕೆ ಸಿಗಲಿದೆ.
ಪಿಕೆಎಲ್ ಸೀಸನ್ 6ರಲ್ಲಿ ಬೆಂಗಳೂರು ಬುಲ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಂಡವು ಚೊಚ್ಚಲ ಪಿಕೆಎಲ್ ಪ್ರಶಸ್ತಿಯನ್ನು ಗೆದ್ದಾಗ ರಮೇಶ್ ಅವರು ಬುಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದರು. ಆಗ ತಂಡದ ಗೆಲುವಿನಲ್ಲಿ ರಣದೀಪ್ ಅವರಷ್ಟೇ ಪಾಲು ರಮೇಶ್ ಅವರದ್ದೂ ಇತ್ತು ಎನ್ನುವುದು ಗಮನಾರ್ಹ.
ಯಶಸ್ವಿ ಕೋಚ್
ಹೊಸ ಕೋಚ್ ನೇಮಕವಾದ ಕುರಿತು ಬೆಂಗಳೂರು ಬುಲ್ಸ್ ತಂಡವು ಮಾಹಿತಿ ನೀಡಿದೆ. ಕರ್ನಾಟಕದ ಹೆಮ್ಮೆ, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ್ ಸರ್, ಈಗ ಬೆಂಗಳೂರು ಬುಲ್ಸ್ ತಂಡದ ದ್ರೋಣ. 2018ರಲ್ಲಿ ಗೂಳಿ ಪಡೆಗೆ ತಮ್ಮ ಮೊದಲ ಟ್ರೋಫಿ ದಕ್ಕಿಸಿದ ರಮೇಶ್ ಸರ್, ಪುಣೆ ಹಾಗೂ ಬೆಂಗಾಲ್ ತಂಡಗಳೊಂದಿಗೂ ವಿಜಯ ಸಾಧಿಸಿದ್ದಾರೆ. ಗೂಳಿ ಪಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯೊಂದಿಗೆ, ಬಿ.ಸಿ. ರಮೇಶ್ ಅವರನ್ನು ಸ್ವಾಗತಿಸುತ್ತಿದ್ದೇವೆ" ಎಂದು ಪೋಸ್ಟ್ ಮಾಡಿದೆ.
ಅರ್ಜುನ ಪ್ರಶಸ್ತಿ
ತರಬೇತುದಾರನಾಗಿ ಮಾತ್ರವಲ್ಲದೆ ಒಬ್ಬ ಆಟಗಾರನಾಗಿಯೂ ಅನೇಕ ಪ್ರಶಸ್ತಿಗಳನ್ನು ಗೆದ್ದಿರುವ ರಮೇಶ್, ಹಲವು ಯುವ ಪ್ರತಿಭೆಗಳನ್ನು ಬೆಳೆಸಿದ್ದಾರೆ. ಕರ್ನಾಟಕ ಕಬಡ್ಡಿಯ ಜನಪ್ರಿಯ ಹೆಸರುಗಳಲ್ಲಿ ಇವರೂ ಒಬ್ಬರು. ಕಬಡ್ಡಿ ಕ್ಷೇತ್ರದಲ್ಲಿ ಇವರ ಸೇವೆಯನ್ನು ಗುರುತಿಸಿ ರಮೇಶ್ ಅವರಿಗೆ 2001ರಲ್ಲಿ ಅರ್ಜುನ ಪ್ರಶಸ್ತಿ ಗೌರವ ನೀಡಲಾಗಿದೆ.
ಅರ್ಜೆಂಟೀನಾ ಕಬಡ್ಡಿ ತಂಡದ ಕೋಚ್ ಆಗಿ ಸೇವೆ
ಕಬಡ್ಡಿ ವಿಶ್ವಕಪ್ ಸಮಯದಲ್ಲಿ ಅರ್ಜೆಂಟೀನಾದ ಕಬಡ್ಡಿ ತಂಡಕ್ಕೂ ರಮೇಶ್ ತರಬೇತಿ ನೀಡಿದ್ದಾರೆ. ಹೀಗಾಗಿ ಇವರ ಅನುಭವ ದೊಡ್ಡದು. ಪಿಕೆಎಲ್ ಸೀಸನ್ 10ರಲ್ಲಿ ಪುಣೇರಿ ಪಲ್ಟನ್ ತಂಡವನ್ನು ಮೊದಲ ಪಿಕೆಎಲ್ ಟ್ರೋಫಿಯತ್ತ ಮುನ್ನಡೆಸಿದ ಹಿರಿಮೆ ಕನ್ನಡಿಗನದ್ದು. ಪಿಕೆಎಲ್ 11ರ ಆವೃತ್ತಿಯಲ್ಲೂ ರಮೇಶ್ ಅವರು ಪುಣೇರಿ ಪಲ್ಟನ್ಸ್ ತಂಡದ ತರಬೇತುದಾರರಾಗಿದ್ದರು. ಆದರೆ ಟೂರ್ನಿಯ ಮಧ್ಯದಲ್ಲಿಯೇ ಅವರು ರಾಜೀನಾಮೆ ನೀಡಿದರು. ತಂಡ ಕೂಡಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ಅತ್ಯಂತ ಜನಪ್ರಿಯ ತಂಡವಾಗಿದೆ. ಪಿಕೆಎಲ್ ಎರಡನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ತಂಡವು, ಆ ನಂತರ ಆರನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಿಕೆಎಲ್ 11ರ ಆವೃತ್ತಿಯಲ್ಲಿ ತಂಡವು ತೀರಾ ಕಳಪೆ ಪ್ರದರ್ಶನ ನೀಡಿತು.
