ನೀರಜ್ ಚೋಪ್ರಾ ಪತ್ನಿ ಹಿಮಾನಿ ಮೋರ್ ಯಾರು; ಅಮೆರಿಕದಲ್ಲಿ ಓದುತ್ತಿರುವ ಟೆನಿಸ್ ಆಟಗಾರ್ತಿ ಎಲ್ಲಿಯವರು?
ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್ ಹರಿಯಾಣದವರು. ಪಾಣಿಪತ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಸದ್ಯ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ಖ್ಯಾತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆ ಕುರಿತಾಗಿ ಯಾವುದೇ ಸುಳಿವುಗಳನ್ನು ಕೊಡದ 27 ವರ್ಷದ ಭಾರತದ ಆಟಗಾರ, ಹಿಮಾನಿ ಮೋರ್ (Himani Mor) ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ತಮ್ಮ ಜೀವನದ ವಿಶೇಷ ಕ್ಷಣದ ಫೋಟೋಗಳನ್ನು ಅವರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ನೀರಜ್ ಚೋಪ್ರಾ ತಮ್ಮ ಮದುವೆ ಕುರಿತಾಗಿ ಯಾವುದೇ ಸುಳಿವುಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಸೀಮಿತ ಜನರೊಂದಿಗೆ ಮದುವೆ ಕಾರ್ಯಕ್ರಮ ನಡೆದಿದೆ. ಹೀಗಾಗಿ ಅವರು ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.
ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಸ್ಟಾರ್ ಅಥ್ಲೀಟ್ ಮದುವೆಯಾದ ಹುಡುಗಿಯ ಹೆಸರು ಹಿಮಾನಿ. ಇವರು ಹರಿಯಾಣದ ಲಾರ್ಸೌಲಿ ಮೂಲದವರು. ಸದ್ಯ ಅಮೆರಿಕದಲ್ಲಿ ಓದುತ್ತಿದ್ದಾರೆ. ಪಾಣಿಪತ್‌ನ ಲಿಟಲ್ ಏಂಜಲ್ಸ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಹಿಮಾನಿ, ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನಿಂದ ರಾಜ್ಯಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದರು. ಆ ನಂತರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ.
ಮೆಕ್ಕಾರ್ಮಾಕ್ ಐಸೆನ್ಬರ್ಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (McCormack Isenberg School of Management) ಕ್ರೀಡಾ ನಿರ್ವಹಣೆ ವಿಜ್ಞಾನ ಮತ್ತು ಆಡಳಿತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಸೌತ್‌ಈಸ್ಟರ್ನ್ ಲೂಯಿಸಿಯಾನ ವಿಶ್ವವಿದ್ಯಾಲಯದಲ್ಲಿಯೂ ವ್ಯಾಸಂಗ ಮಾಡಿದ್ದಾರೆ. ಇವರು ಟೆನಿಸ್ ಆಟಗಾರ್ತಿಯೂ ಹೌದು. ಹೀಗಾಗಿ ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಅಮ್ಹೆರ್ಸ್ಟ್ ಕಾಲೇಜಿನ ಟೆನಿಸ್ ತಂಡವನ್ನು ನಿರ್ವಹಿಸುತ್ತಿರುವ ಹಿಮಾನಿ, ಅಲ್ಲಿ ಗ್ರಾಜುಯೇಟ್ ಅಸಿಸ್ಟೆಂಟ್ ಆಗಿದ್ದಾರೆ.
ಫೋಟೋ ಹಂಚಿಕೊಂಡ ನೀರಜ್ ಚೋಪ್ರಾ
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆಟಗಾರ, ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮದುವೆ ಕುರಿತು ಹೇಳಿಕೊಂಡರು. “ನಾನು ನನ್ನ ಕುಟುಂಬದ ಉಪಸ್ಥಿತಿಯೊಂದಿಗೆ ನನ್ನ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದೇನೆ. ಪ್ರತಿಯೊಬ್ಬರ ಆಶೀರ್ವಾದಕ್ಕೂ ನಾವು ಕೃತಜ್ಞರಾಗಿರುತ್ತೇವೆ,” ಎಂದು ಚೋಪ್ರಾ ಮದುವೆ ಸಮಾರಂಭದ ಫೋಟೋಗಳನ್ನು ಹಂಚಿಕೊಂಡು ಹೇಳಿಕೊಂಡಿದ್ದಾರೆ.
ಹನಿಮೂನ್ ಹೋಗಿದ್ದಾರೆ ಎಂದ ಚಿಕ್ಕಪ್ಪ
ನೀರಜ್ ಚೋಪ್ರಾ ಮದುವೆ ಬಗ್ಗೆ ಅವರ ಚಿಕ್ಕಪ್ಪ ಮಾತನಾಡಿ, ಮದುವೆ ಭಾರತದಲ್ಲೇ ನಡೆಯಿತು. ದಂಪತಿ ಈಗ ಹನಿಮೂನ್‌ಗೆ ತೆರಳಿದ್ದಾರೆ ಎಂದರು. “ಹೌದು, ಎರಡು ದಿನಗಳ ಹಿಂದೆ ಭಾರತದಲ್ಲಿಯೇ ಮದುವೆ ನಡೆಯಿತು. ಅದು ಎಲ್ಲಿ ನಡೆಯಿತು ಎಂದು ನಾನು ಹೇಳಲು ಸಾಧ್ಯವಿಲ್ಲ” ಎಂದು ಹರಿಯಾಣದ ಪಾಣಿಪತ್ ಬಳಿಯ ಖಾಂಡ್ರಾದಲ್ಲಿರುವ ಹಳ್ಳಿಯಲ್ಲಿ ನೀರಜ್ ಚಿಕ್ಕಪ್ಪ ಹೇಳಿದ್ದಾರೆ.
“ಹುಡುಗಿ ಸೋನಿಪತ್ ಮೂಲದವಳಾಗಿದ್ದು, ಅಮೆರಿಕದಲ್ಲಿ ಓದುತ್ತಿದ್ದಾಳೆ. ಅವರು ಮಧುಚಂದ್ರಕ್ಕಾಗಿ ಈಗ ವಿದೇಶಕ್ಕೆ ಹೋಗಿದ್ದಾರೆ. ಅವರು ಎಲ್ಲಿಗೆ ಹೋಗಿದ್ದಾರೆ ಎಂದು ನನಗೆ ತಿಳಿದಿಲ್ಲ,” ಎಂದು ಅವರು ಹೇಳಿದ್ದಾರೆ.
