ನೀರಜ್ ಚೋಪ್ರಾ ಕೋಚ್ ಯಾರು; ಈತ ಹೆಚ್ಚು ದೂರ ಜಾವೆಲಿನ್ ಎಸೆದ ವಿಶ್ವದಾಖಲೆ ಒಡೆಯ, 3 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ!
ಕನ್ನಡ ಸುದ್ದಿ  /  ಕ್ರೀಡೆ  /  ನೀರಜ್ ಚೋಪ್ರಾ ಕೋಚ್ ಯಾರು; ಈತ ಹೆಚ್ಚು ದೂರ ಜಾವೆಲಿನ್ ಎಸೆದ ವಿಶ್ವದಾಖಲೆ ಒಡೆಯ, 3 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ!

ನೀರಜ್ ಚೋಪ್ರಾ ಕೋಚ್ ಯಾರು; ಈತ ಹೆಚ್ಚು ದೂರ ಜಾವೆಲಿನ್ ಎಸೆದ ವಿಶ್ವದಾಖಲೆ ಒಡೆಯ, 3 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ!

Who Is Jan Zelezny: 2024ರ ನವೆಂಬರ್​​ನಲ್ಲಿ ನೀರಜ್ ಚೋಪ್ರಾ ಅವರಿಗೆ ನೂತನ ಕೋಚ್​ ಆಗಿ ನೇಮಕಗೊಂಡಿರುವ ಜೆಕ್ ಗಣರಾಜ್ಯದ ಜಾನ್ ಜೆಲೆಜ್ನಿ ಯಾರು? ಅವರ ಸಾಧನೆ ಹೇಗಿದೆ? ಇಲ್ಲಿದೆ ವಿವರ.

ನೀರಜ್ ಚೋಪ್ರಾ ಕೋಚ್ ಯಾರು; ಈತ ಹೆಚ್ಚು ದೂರ ಜಾವೆಲಿನ್ ಎಸೆದ ವಿಶ್ವದಾಖಲೆ ಒಡೆಯ, 3 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ!
ನೀರಜ್ ಚೋಪ್ರಾ ಕೋಚ್ ಯಾರು; ಈತ ಹೆಚ್ಚು ದೂರ ಜಾವೆಲಿನ್ ಎಸೆದ ವಿಶ್ವದಾಖಲೆ ಒಡೆಯ, 3 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ!

2025ರ ಕ್ಯಾಲೆಂಡರ್ ವರ್ಷ ಕ್ರೀಡಾಪಟುಗಳ ಪಾಲಿಗೆ ಹೊಸ ಸವಾಲು. ಹಿಂದೆ ಸಾಧಿಸಿದ್ದನ್ನು ಸಾಧಿಸಬೇಕೆಂಬ ಕಾತರ ಅವರದ್ದು. ಈ ಪೈಕಿ ಭಾರತದ ಸ್ಟಾರ್​ ಜಾವೆಲಿನ್ ಪಟು ನೀರಜ್ ಚೋಪ್ರಾ ಒಬ್ಬರು. ಅವರು ಈ ವರ್ಷ ಹೊಸದೊಂದು ಕನಸು ಕಂಡಿದ್ದಾರೆ. ಅದೇನೆಂದರೆ 90 ಮೀಟರ್​ ದೂರ ಜಾವೆಲಿನ್ ಎಸೆಯುವುದು. ಏಕೆಂದರೆ ತನ್ನ ವೃತ್ತಿ ಜೀವನದಲ್ಲಿ ಅವರಿನ್ನೂ 90 ಮೀಟರ್ ಗೆರೆ ಮುಟ್ಟಿಲ್ಲ. 2022ರ ಡೈಮಂಡ್​ ಲೀಗ್​ನಲ್ಲಿ 89.94 ಮೀಟರ್ ದೂರ ಜಾವೆಲಿನ್ ಎಸೆದಿದ್ದೇ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ಈ ಗುರಿ ದಾಟುವುದು ಅವರ ಕನಸೂ ಹೌದು. ಇದೀಗ ನೀರಜ್ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ಏಕೆಂದರೆ ತಾನು ನೇಮಿಸಿಕೊಂಡಿರುವ ಗುರು ಅಂತಹ ಶ್ರೇಷ್ಠ ವ್ಯಕ್ತಿ ಎಂಬ ಕಾರಣಕ್ಕೆ ಹೇಳುತ್ತಿದ್ದೇವೆ. ಸತತ ಎರಡು ಒಲಿಂಪಿಕ್ಸ್​​ಗಳಲ್ಲೂ (ಚಿನ್ನ, ಬೆಳ್ಳಿ) ಪದಕಗಳಿಗೆ ಮುತ್ತಿಕ್ಕಿರುವ ನೀರಜ್ ಚೋಪ್ರಾ, ಕಳೆದ ವರ್ಷದ ಕೊನೆಯಲ್ಲಿ ನೂತನ ಕೋಚ್​ ಆಗಿ ನೇಮಿಸಿಕೊಂಡಿದ್ದು, ಜೆಕ್ ಗಣರಾಜ್ಯದ ಜಾವೆಲಿನ್ ಲೆಜೆಂಡ್ ಜಾನ್ ಜೆಲೆಜ್ನಿ ಅವರನ್ನು. ಈಗಾಗಲೇ ಅವರ ಮಾರ್ಗದರ್ಶನದಲ್ಲಿ ತೀವ್ರ ಕಸರತ್ತು ನಡೆಸುತ್ತಿರುವ ನೀರಜ್, ಈ ವೇಳೆ 90 ಮೀ.​ಗಿಂತ ಹೆಚ್ಚು ದೂರವನ್ನೂ ಎಸೆಯುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಪ್ರಸ್ತುತ ನೀರಜ್ ಮಾನಸಿಕ ಒತ್ತಡ ನಿಭಾಯಿಸಲು ಜಾನ್ ಜೆಲೆಜ್ನಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೂ ಜಾನ್ ಜೆಲೆಜ್ನಿ ಯಾರು? ದಾಖಲೆ ಹೇಗಿದೆ? ಇಲ್ಲಿದೆ ವಿವರ.

ಜಾನ್ ಜೆಲೆಜ್ನಿ ಯಾರು?

ಜೆಕ್ ಗಣರಾಜ್ಯದ ಮಾಜಿ ಅಥ್ಲೀಟ್ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಆಗಿರುವ ಜಾನ್ ಜೆಲೆಜ್ನಿ 98.48 ಮೀಟರ್ ಎಸೆಯುವ ಮೂಲಕ ವಿಶ್ವ ದಾಖಲೆ ಹೊಂದಿದ್ದಾರೆ. ಅತಿ ಹೆಚ್ಚು ದೂರ ಜಾವೆಲಿನ್ ಎಸೆದಿರುವ ಈ ವಿಶ್ವ ದಾಖಲೆಯನ್ನು ಯಾರೂ ಟಚ್ ಮಾಡಿಲ್ಲ. 1996ರಲ್ಲಿ ಈ ವಿಶ್ವದಾಖಲೆ ನಿರ್ಮಿಸಿದ್ದರು. ಇಂತಹ ಆಟಗಾರರನ್ನು ಕೋಚ್ ಆಗಿ ನೇಮಿಸಿಕೊಂಡಿರುವ ನೀರಜ್ ಈ ವರ್ಷದ ಟೂರ್ನಿಗಳಲ್ಲಿ 90 ಮೀಟರ್‌ಗಿಂತ ಹೆಚ್ಚು​ ದೂರ ಭರ್ಜಿ ಎಸೆಯಲಿದ್ದಾರೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಜಾನ್ ಜೆಲೆಜ್ನಿ ಅತಿ ದೂರ ಜಾವೆಲಿನ್ ಎಸೆದಿರುವ ಜೊತೆಗೆ ಮೂರು ಒಲಿಂಪಿಕ್ಸ್​​ಗಳಲ್ಲಿ ಚಿನ್ನದ ಪದಕಗಳಿಗೂ ಕೊರಳೊಡ್ಡಿದ್ದಾರೆ. 58 ವರ್ಷದ ಜೆಲೆಜ್ನಿ ಆಧುನಿಕ ಯುಗದ ಶ್ರೇಷ್ಠ ಜಾವೆಲಿನ್ ಎಸೆತಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್, 2024ರ ಪ್ಯಾರಿಸ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ತನ್ನ ಆರಾಧ್ಯ ದೈವ ಜೆಲೆಜ್ನಿ ಅವರನ್ನೇ ಕೋಚ್ ಆಗಿ ನೇಮಿಸಿಕೊಂಡು ಹೊಸ ಸಾಧನೆಗೆ ಸಿದ್ದರಾಗಿದ್ದಾರೆ. ಜೆಲೆಜ್ನಿ ಅವರು ಅತಿ ಹೆಚ್ಚು ದೂರ ಎಸೆಯುವ ವಿಚಾರದಲ್ಲಿ ನಾಲ್ಕು ಬಾರಿ ವಿಶ್ವ ದಾಖಲೆ ಮುರಿದಿದ್ದಾರೆ. ಜೆಕ್ ಗಣರಾಜ್ಯದ ಸೆಂಟ್ರಲ್ ಬೋಹೀಮಿಯನ್ ಪ್ರದೇಶದ ನಗರವಾದ ಮ್ಲಾಡಾ ಬೋಲೆಸ್ಲಾವ್‌ನಲ್ಲಿ ಜನಿಸಿದ ಅವರು, 1988 ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, 1992 ಬಾರ್ಸಿಲೋನಾ ಒಲಿಂಪಿಕ್ಸ್, 1996 ಅಟ್ಲಾಂಟಾ, 2000 ಸಿಡ್ನಿಯಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಒಂದೇ ಟೂರ್ನಿಯಲ್ಲಿ 5 ಸಲ 90ರ ಗಡಿ ದಾಟಿದ ಜಾನ್

ನಾಲ್ಕು ಒಲಂಪಿಕ್ಸ್ ಪದಕಗಳಲ್ಲದೆ, 1993, 1995 ಮತ್ತು 2001 ರಲ್ಲಿ ಜೆಲೆಜ್ನಿ ವಿಶ್ವ ಚಾಂಪಿಯನ್‌ಶಿಪ್‌ಗಳನ್ನೂ ಗೆದ್ದಿದ್ದಾರೆ. ವಿಶ್ವ ದಾಖಲೆಯ ಹೊರತಾಗಿ ಅವರು ಆಲ್ಬರ್ಟಾದಲ್ಲಿ 2001ರ ವಿಶ್ವ ಚಾಂಪಿಯನ್ಸ್ ಆವೃತ್ತಿಯಲ್ಲಿ 92.8 ಮೀಟರ್ ಎಸೆದು ದಾಖಲೆ ನಿರ್ಮಿಸಿದ್ದರು. ಮಾರ್ಚ್ 1997ರಲ್ಲಿ ದಕ್ಷಿಣ ಆಫ್ರಿಕಾದ ಸ್ಟೆಲೆನ್‌ಬೋಷ್‌ನಲ್ಲಿ ಜೆಲೆಜ್ನಿ ಒಂದೇ ಕೂಟದಲ್ಲಿ ಐದು ಬಾರಿ 90 ಮೀಟರ್​ಗಿಂತ ಹೆಚ್ಚು ದೂರ ಎಸೆದ ಸಾಧನೆಯನ್ನೂ ಮಾಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ. 2006ರ ಸೆಪ್ಟೆಂಬರ್ 19ರಂದು ಮ್ಲಾಡಾ ಬೋಲೆಸ್ಲಾವ್​​ನಲ್ಲಿ ನಡೆದ ಟೂರ್ನಿಯ ನಂತರ ನಿವೃತ್ತರಾದರು. ನಂತರ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.