ಕನ್ನಡ ಸುದ್ದಿ  /  Sports  /  Who Is Mallika Sagar The Auctioneer Of Wpl Auction 2023

Who is Mallika Sagar: ಡಬ್ಲ್ಯೂಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಈ ಚೆಲುವೆ ಯಾರು?

ಈ ಬಾರಿ ಹರಾಜು ಪ್ರಕ್ರಿಯೆ ನಡೆಸಿ ಕೊಡಲು ಬಿಸಿಸಿಐಯು ಮಲ್ಲಿಕಾ ಸಾಗರ್ ಅವರನ್ನು ನೇಮಿಸಿದೆ. ಮೊದಲ ಬಾರಿಗೆ ನಡೆಯುತ್ತಿರುವ ಡಬ್ಲ್ಯೂಪಿಎಲ್‌ಗೆ ಮಹಿಳೆಯರಿಗೆ ಬಿಸಿಸಿಐ ಆದ್ಯತೆ ನೀಡಿದ್ದು, ಹರಾಜು ನಡೆಸಿ ಕೊಡುವುದಕ್ಕೂ ವನಿತೆಯನ್ನೇ ಆಯ್ಕೆ ಮಾಡಿಕೊಂಡಿದೆ.

ಮಹಿಳಾ ಪ್ರೀಮಿಯರ್ ಲೀಗ್ ಹರಾಜುಗಾರ್ತಿ ಮಲ್ಲಿಕಾ ಸಾಗರ್
ಮಹಿಳಾ ಪ್ರೀಮಿಯರ್ ಲೀಗ್ ಹರಾಜುಗಾರ್ತಿ ಮಲ್ಲಿಕಾ ಸಾಗರ್ (Twitter)

ವಿಮೆನ್ಸ್‌ ಪ್ರೀಮಿಯರ್ ಲೀಗ್ (WPL)ನ ಉದ್ಘಾಟನಾ ಆವೃತ್ತಿಯ ಆಟಗಾರರ ಹರಾಜು ಮುಂಬೈನಲ್ಲಿ ನಡೆಯುತ್ತಿದೆ. ಹಲವು ಆಟಗಾರ್ತಿಯರು ಭಾರಿ ಬೆಲೆಗೆ ಖರೀದಿಯಾಗಿದ್ದು, ಸ್ಮೃತಿ ಮಂಧನ ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದಾರೆ.

ಗರಿಷ್ಠ ಮೂಲ ಬೆಲೆ 50 ಲಕ್ಷ ರೂಪಾಯಿ ಆಗಿದ್ದು, ಸ್ಮೃತಿ ಮಂಧನ, ಹರ್ಮನ್‌ಪ್ರೀತ್ ಕೌರ್ ಸೇರಿದಂತೆ 24 ಅಗ್ರ ಕ್ರಿಕೆಟಿಗರು ಈ ಪಟ್ಟಿಯಲ್ಲಿದ್ದಾರೆ. ಇದರ ನಂತರ ಮೂಲ ಬೆಲೆ ರೂ 40 ಲಕ್ಷ. ಈ ಪಟ್ಟಿಯಲ್ಲಿ 30 ಆಟಗಾರ್ತಿಯರನ್ನು ಹೆಸರಿಸಲಾಗಿದೆ. ಹರಾಜು ಪ್ರಕ್ರಿಯೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.

ಈ ಬಾರಿ ಹರಾಜು ಪ್ರಕ್ರಿಯೆ ನಡೆಸಿ ಕೊಡಲು ಬಿಸಿಸಿಐಯು ಮಲ್ಲಿಕಾ ಸಾಗರ್ ಅವರನ್ನು ನೇಮಿಸಿದೆ. ಮೊದಲ ಬಾರಿಗೆ ನಡೆಯುತ್ತಿರುವ ಡಬ್ಲ್ಯೂಪಿಎಲ್‌ಗೆ ಮಹಿಳೆಯರಿಗೆ ಬಿಸಿಸಿಐ ಆದ್ಯತೆ ನೀಡಿದ್ದು, ಹರಾಜು ನಡೆಸಿ ಕೊಡುವುದಕ್ಕೂ ವನಿತೆಯನ್ನೇ ಆಯ್ಕೆ ಮಾಡಿಕೊಂಡಿದೆ.

ಮಲ್ಲಿಕಾ ಸಾಗರ್ ಯಾರು?

ಮಲ್ಲಿಕಾ ಸಾಗರ್ ಅವರು ಮುಂಬೈ ಮೂಲದ ಆರ್ಟ್‌ ಕಲೆಕ್ಟರ್‌ ಆಗಿದ್ದಾರೆ. ಅಲ್ಲದೆ ಭಾರತೀಯ ಕಲಾ ಕ್ಷೇತ್ರದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ಈ ಹಿಂದೆ 2021ರಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಹರಾಜು ಪ್ರಕ್ರಿಯೆಯನ್ನು ಇವರು ನಡೆಸಿಕೊಟ್ಟಿದ್ದರು. ಹೀಗಾಗಿ ಮಲ್ಲಿಕಾ ಅವರು ಉನ್ನತ ಮಟ್ಟದ ಕ್ರೀಡಾಕೂಟದ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುವುದು ಹೊಸದೇನಲ್ಲ. ಈ ವೃತ್ತಿಯಲ್ಲಿ ಅವರು ಅಪಾರ ಅನುಭವ ಪಡೆದಿದ್ದಾರೆ.

ಅವರು 2001ರಲ್ಲಿ ಬ್ರಿಟಿಷ್ ಹರಾಜು ಮನೆಯಾದ ಕ್ರಿಸ್ಟೀಸ್‌ನಲ್ಲಿ ಮೊದಲ ಬಾರಿಗೆ ಹರಾಜನ್ನು ನಿಭಾಯಿಸಿದ್ದರು. ಈ ಕೆಲಸ ಮಾಡಿದ ಭಾರತೀಯ ಮೂಲದ ಮೊದಲ ಮಹಿಳೆ ಎನಿಸಿಕೊಂಡರು.

ಹಿಂದಿನ ಐಪಿಎಲ್ ಹರಾಜಿನ ಹಳೆಯ ವಿಡಿಯೋಗಳನ್ನು ನೋಡುವ ಮೂಲಕ ಮಲ್ಲಿಕಾ ಡಬ್ಲ್ಯುಪಿಎಲ್ ಹರಾಜಿಗೆ ತಯಾರಿ ನಡೆಸಿದ್ದರಂತೆ.

ಹರಾಜು ಪ್ರಕ್ರಿಯೆಗೂ ಮೊದಲ ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಿಕಾ, “ಹರಾಜು ಪ್ರಕ್ರಿಯೆ ನಡೆಸಿಕೊಡಲು ನನಗೆ ಹೇಳಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದನ್ನು ಮಾಡಲು ನಾನು ಹೆಮ್ಮೆಪಡುತ್ತೇನೆ,” ಎಂದು ಹೇಳಿದ್ದಾರೆ.

“ಭಾರತೀಯ ಮಹಿಳೆಯರು ಅಂತಿಮವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಅರ್ಹತೆಯನ್ನು ಪಡೆಯುತ್ತಾರೆ. ಅವರು ಉನ್ನತ ಮಟ್ಟದಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ,” ಎಂದು ಅವರು ಮಾತನಾಡಿದ್ದಾರೆ.

ಈ ನಡುವೆ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಪಾಲಾದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತನಾಡಿ WPL ಅನ್ನು "ಗೇಮ್ ಚೇಂಜರ್" ಎಂದು ಕರೆದಿದ್ದಾರೆ. “ಇದು ಭಾರತಕ್ಕೆ ಮಾತ್ರವಲ್ಲದೆ ಜಗತಿಕ ಕ್ರಿಕೆಟ್‌ನಲ್ಲೂ ಬದಲಾವಣೆ ತರಲಿದೆ ಎಂದು ನಾನು ಭಾವಿಸುತ್ತೇನೆ. ನಾವು ಇದರ ಬಗ್ಗೆ ಉತ್ಸುಕರಾಗಿದ್ದೇವೆ” ಎಂದು ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.

ಮತ್ತೊಂದೆಡೆ ಆರ್‌ಸಿಬಿಗೆ ಆಯ್ಕೆಯಾಗಿದ್ದಕ್ಕೆ ಸ್ಮೃತಿ ಮಂಧನ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಬ್ಲ್ಯೂಪಿಎಲ್‌ ನಮಗೊಂದು ಉತ್ತಮ ವೇದಿಕೆ. ಅದರಲ್ಲೂ ಆರ್‌ಸಿಬಿಯಂತಹ ಫ್ರಾಂಚೈಸಿ ಪರ ಆಡಲು ತುಂಬಾ ಸಂತಸವಾಗುತ್ತಿದೆ. ನಮಸ್ಕಾರ ಬೆಂಗಳೂರು ಎಂದು ಹೇಳಲು ಖುಷಿಯಾಗುತ್ತಿದೆ. ನಿಮ್ಮ ಬೆಂಬಲ ನಮಗೆ ತುಂಬಾ ಮುಖ್ಯ ಎಂದು ಸ್ಮೃತಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ವಿಮೆನ್ಸ್‌ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯು ಮುಂದಿನ ತಿಂಗಳು ಮುಂಬೈನಲ್ಲಿ ಪ್ರಾರಂಭವಾಗಲಿದೆ. ಪಂದ್ಯಾವಳಿಯು ಮಾರ್ಚ್ 4ರಿಂದ ಪ್ರಾರಂಭವಾಗಿ 26ರಂದು ಮುಕ್ತಾಯಗೊಳ್ಳಲಿದೆ. ವಾಣಿಜ್ಯ ನಗರಿಯ ಎರಡು ಮೈದಾನಗಳಲ್ಲಿ ಪಂದ್ಯಗಳನ್ನು ಆಡಲಾಗುತ್ತದೆ.

ಒಟ್ಟು ಐದು ಫ್ರಾಂಚೈಸಿಗಳಿದ್ದು, ಇದರಲ್ಲಿ ಮೂರನ್ನು ಐಪಿಎಲ್‌ ತಂಡಗಳ ಮಾಲೀಕರು ಸ್ವಾಧೀನಪಡಿಸಿಕೊಂಡಿದ್ದಾರೆ. ಅವುಗಳೆಂದರೆ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್.