ಅಲೆಕ್ಸಾಂಡರ್ ಝ್ವೆರೆವ್ ಭಾಷಣದ ವೇಳೆ ಸ್ಟೇಡಿಯಂನಲ್ಲಿ ಅಶರೀರವಾಣಿ; ದೌರ್ಜನ್ಯ ಪ್ರಕರಣ ನೆನಪಿಸಿದ ಮಹಿಳೆ -ವಿಡಿಯೋ
ಕನ್ನಡ ಸುದ್ದಿ  /  ಕ್ರೀಡೆ  /  ಅಲೆಕ್ಸಾಂಡರ್ ಝ್ವೆರೆವ್ ಭಾಷಣದ ವೇಳೆ ಸ್ಟೇಡಿಯಂನಲ್ಲಿ ಅಶರೀರವಾಣಿ; ದೌರ್ಜನ್ಯ ಪ್ರಕರಣ ನೆನಪಿಸಿದ ಮಹಿಳೆ -ವಿಡಿಯೋ

ಅಲೆಕ್ಸಾಂಡರ್ ಝ್ವೆರೆವ್ ಭಾಷಣದ ವೇಳೆ ಸ್ಟೇಡಿಯಂನಲ್ಲಿ ಅಶರೀರವಾಣಿ; ದೌರ್ಜನ್ಯ ಪ್ರಕರಣ ನೆನಪಿಸಿದ ಮಹಿಳೆ -ವಿಡಿಯೋ

ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧದ ಎರಡು ದೌರ್ಜನ್ಯ ಪ್ರಕರಣಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬರು ಆಟಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಯದಲ್ಲಿ ಈ ಘಟನೆ ನಡೆದಿದೆ.

ಝ್ವೆರೆವ್ ಭಾಷಣದ ವೇಳೆ ಸ್ಟೇಡಿಯಂನಲ್ಲಿ ಅಶರೀರವಾಣಿ; ದೌರ್ಜನ್ಯ ಪ್ರಕರಣ ನೆನಪಿಸಿದ ಮಹಿಳೆ
ಝ್ವೆರೆವ್ ಭಾಷಣದ ವೇಳೆ ಸ್ಟೇಡಿಯಂನಲ್ಲಿ ಅಶರೀರವಾಣಿ; ದೌರ್ಜನ್ಯ ಪ್ರಕರಣ ನೆನಪಿಸಿದ ಮಹಿಳೆ (REUTERS)

ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದ ಅಲೆಕ್ಸಾಂಡರ್ ಝ್ವೆರೆವ್‌ಗೆ (Alexander Zverev) ನಿರಾಶೆಯಾಗಿದೆ. ಜರ್ಮನ್ ಟೆನಿಸ್‌ ಆಟಗಾರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಯಾನಿಕ್ ಸಿನರ್ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟರು. ಸೋಲಿನ ನೋವಲ್ಲಿದ್ದ ಆಟಗಾರನಿಗೆ, ಮತ್ತೆ ಬೇಸರವಾಗುವಂತಾಗಿದೆ. ಪಂದ್ಯ ಮುಗಿದ ನಂತರ ರನ್ನರ್‌ ಅಪ್‌ ಭಾಷಣ ಮಾಡಲು ಮೈಕ್‌ ಮುಂದೆ ನಿಂತಾಗ ಸ್ಟೇಡಿಯಂನಿಂದ ಕೇಳಿ ಬಂದ ಘೋಷಣೆಗಳು ಝ್ವೆರೆವ್‌ಗೆ ಅಚ್ಚರಿ ಮೂಡಿಸಿತು. ಈ ಹಿಂದೆ ಆಟಗಾರನ ವಿರುದ್ಧ ಕೇಳಿಬಂದಿದ್ದ ದೈಹಿಕ ಕಿರುಕುಳ ಪ್ರಕರಣಗಳನ್ನು ನೆನಪಿಸುವ ಮೂಲಕ, ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆದ ಟ್ರೋಫಿ ಪ್ರದಾನ ಸಮಾರಂಭದಲ್ಲಿ, ಝ್ವೆರೆವ್ ಮಾತನಾಡಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾದ ಪ್ರಕಾರ, ಮಹಿಳೆಯೊಬ್ಬರ ಧ್ವನಿ ಕೇಳಿಬಂದಿದೆ. “ಆಸ್ಟ್ರೇಲಿಯಾವು ಒಲ್ಯಾ ಮತ್ತು ಬ್ರೆಂಡಾರನ್ನು ನಂಬುತ್ತದೆ, ಆಸ್ಟ್ರೇಲಿಯಾ ಒಲ್ಯಾ ಮತ್ತು ಬ್ರೆಂಡಾರನ್ನು ನಂಬುತ್ತದೆ,(Australia believes Olya and Brenda)” ಎಂದು ಮಹಿಳೆಯೊಬ್ಬರು ಜೋರಾದ ಧ್ವನಿಯಲ್ಲಿ ಕೂಗಿದಾಗ ಸ್ಟೇಡಿಯಂನಲ್ಲಿ ಮೌನ ಆವರಿಸಿತು. ಆ ವಾಕ್ಯಗಳನ್ನು ಕೇಳಿಸಿಕೊಂಡ ಝ್ವೆರೆವ್ ಕೆಲಕ್ಷಣ ಆಘಾತಕ್ಕೊಳಗಾಗಿ ಮಾನವಾದರು. ಸ್ಟೇಡಿಯಂ ಒಳಗಡೆ ನಿಜಕ್ಕೂ ಏನಾಗುತ್ತಿದೆ ಎಂದು ಸುತ್ತಲೂ ನೋಡಿದರು. ಸ್ವಲ್ಪ ಸಮಯದ ನಂತರ ತಮ್ಮ ಮಾತು ಆರಂಭಿಸಿದರು.

ಅಷ್ಟಕ್ಕೂ ಈ ಹೇಳಿಕೆ ಬಂದಿದ್ದೇಕೆ? ಒಲ್ಯಾ ಮತ್ತು ಬ್ರೆಂಡಾ ಯಾರು ಎಂಬ ಗೊಂದಲ ಕೆಲವರಿಗಿದೆ. ಝ್ವೆರೆವ್ ಅವರ ಮಾಜಿ ಗೆಳತಿಯರ ಹೆಸರೇ ಬ್ರೆಂಡಾ ಪಾಟಿಯಾ ಮತ್ತು ಒಲ್ಯಾ ಶರಿಪೋವಾ. ಇವರಿಬ್ಬರನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಲಾಗಿದೆ. ಇವರಿಬ್ಬರು ಈ ಹಿಂದೆ ಝ್ವೆರೆವ್ ವಿರುದ್ಧ ಆಂತರಿಕ ದೌರ್ಜನ್ಯದ ಆರೋಪ ಮಾಡಿದ್ದರು. 2024ರಲ್ಲಿ ಈ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಆದರೆ, ಝ್ವೆರೆವ್ ಅಪರಾಧಿಯೋ ಅಥವಾ ನಿರಪರಾಧಿಯೋ ಎಂಬುದು ಅಂತಿಮವಾಗಲಿಲ್ಲ.

ಇಲ್ಲಿದೆ ವಿಡಿಯೋ

ಓಲ್ಯಾ ಮತ್ತು ಬ್ರೆಂಡಾ ಯಾರು?

ಅಲೆಕ್ಸಾಂಡರ್ ಝ್ವೆರೆವ್ ಈ ಹಿಂದೆ ತಮ್ಮ ಮಾಜಿ ಗರ್ಲ್‌ಫ್ರೆಂಡ್‌ ಬ್ರೆಂಡಾ ಪಟಿಯಾ ಅವರನ್ನು ದೈಹಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. 2020ರಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಝ್ವೆರೆವ್ ಮತ್ತು ಪಾಟಿಯಾಗೆ ಒಬ್ಬಳು ಮಗಳು ಕೂಡ ಇದ್ದಾಳೆ.

ಇದೇ ವೇಳೇ ಎಟಿಪಿ ಪಂದ್ಯಾವಳಿಗಳು ನಡೆಯುತ್ತಿರುವ ವಿವಿಧ ನಗರಗಳಲ್ಲಿ ತನ್ನನ್ನು ನಿಂದಿಸಿದ್ದಾರೆ ಎಂದು ಝ್ವೆರೆವ್ ಅವರ ಮತ್ತೊಬ್ಬರು ಮಾಜಿ ಗೆಳತಿ ಹಾಗೂ ಟೆನಿಸ್ ಆಟಗಾರ್ತಿ ಒಲ್ಯಾ ಶರಿಪೋವಾ ಆರೋಪಿಸಿದ್ದರು. ಝ್ವೆರೆವ್ ತನ್ನ ಮುಖಕ್ಕೆ ಗುದ್ದಿದ್ದಾನೆ ಎಂದು ಒಮ್ಮೆ ಹೇಳಿಕೊಂಡರೆ, ಮತ್ತೊಮ್ಮೆ ದಿಂಬಿನಿಂದ ಉಸಿರುಗಟ್ಟಿಸಿದ್ದಾನೆ ಎಂದು ಆರೋಪಿಸಿದ್ದರು.

ಇದೀಗ ಈ ಎರಡು ಪ್ರಕರಣಗಳನ್ನು ನೆನಪಿಸಿ, ಝ್ವೆರೆವ್ ಅವರ ಮುಂದೆ ಘೋಷಣೆ ಕೂಗಿ ದೌರ್ಜನ್ಯವನ್ನು ಮೆಲುಕು ಹಾಕಲಾಗಿದೆ. ಪ್ರತಿಷ್ಠಿತ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯ ನಡುವೆ ಈ ಘೋಷಣೆಗಳು ಝ್ವೆರೆವ್‌ಗೆ ಅಚ್ಚರಿ ಮೂಡಿಸಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.