ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ಸವಾಲು, ನೇರಪ್ರಸಾರ ವಿವರ ಹೀಗಿದೆ
ಕನ್ನಡ ಸುದ್ದಿ  /  ಕ್ರೀಡೆ  /  ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ಸವಾಲು, ನೇರಪ್ರಸಾರ ವಿವರ ಹೀಗಿದೆ

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ಸವಾಲು, ನೇರಪ್ರಸಾರ ವಿವರ ಹೀಗಿದೆ

ವನಿತೆಯರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ 3-0 ಅಂತರದಿಂದ ಜಪಾನ್‌ ವಿರುದ್ಧ ಗೆದ್ದಿದ್ದ ಭಾರತ ವನಿತೆಯರ ತಂಡವು, ಇದೀಗ ಸೆಮಿಫೈನಲ್‌ ಪಂದ್ಯದಲ್ಲಿ ಮತ್ತೆ ಜಪಾನ್‌ ವಿರುದ್ಧ ಸೆಣಸಲಿದೆ. ಇದೇ ವೇಳೆ ಮತ್ತೊಂದು ಪಂದ್ಯದಲ್ಲಿ ಚೀನಾ ಹಾಗೂ ಮಲೇಷ್ಯಾ ಕಾದಾಡಲಿವೆ.

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ಸವಾಲು
ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ಸವಾಲು

ವನಿತೆಯರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ 2024ರ ಟೂರ್ನಿಯ ಸೆಮಿಕದನದಲ್ಲಿ ಭಾರತ ಮತ್ತು ಜಪಾನ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯಾವಳಿಯಾದ್ಯಂತ ಉಭಯ ತಂಡಗಳು ಪ್ರಭಾವಶಾಲಿ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಮುನ್ನಡೆದಿವೆ. ಕೊನೆಯ ಪಂದ್ಯದಲ್ಲಿ ಇದೇ ಜಪಾನ್‌ ತಂಡವನ್ನು ಬಗ್ಗುಬಡಿದು ಸೆಮಿಫೈನಲ್‌ ಪ್ರವೇಶಿಸಿದ್ದ ಭಾರತ, ಫೈನಲ್‌ ಪ್ರವೇಶಿಸಬೇಕಿದ್ದರೆ ಮತ್ತೊಂದು ಗೆಲುವು ಅನಿವಾರ್ಯವಾಗಿದೆ. ಆದರೆ ಯಾವ ತಂಡ ಪ್ರಶಸ್ತಿ ಸುತ್ತಿಗೆ ಮುನ್ನಡೆಯುತ್ತದೆ ಎಂಬುದನ್ನು ನಿರ್ಧರಿಸಲು ಇಂದಿನ ಪಂದ್ಯ ನಿರ್ಣಾಯಕವಾಗಿದೆ.

ಆತಿಥೇಯ ಭಾರತ ಮಹಿಳೆಯರ ತಂಡವು ಸಂವೇದನಾಶೀಲ ಫಾರ್ಮ್‌ನಲ್ಲಿದೆ. ಈವರೆಗೆ ಆಡಿದ ಐದು ಪಂದ್ಯಗಳಿಂದ 15 ಪಾಯಿಂಟ್‌ ಕಲೆ ಹಾಕಿ, ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದಿದೆ. ವುಮೆನ್ ಇನ್ ಬ್ಲೂ ತಂಡವು ಭರ್ಜರಿ 26 ಗೋಲುಗಳನ್ನು ಹೊಡೆದಿದ್ದು, ಎದುರಾಳಿ ತಂಡಕ್ಕೆ ಕೇವಲ ಎರಡು ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದೆ.

ಅತ್ತ ಜಪಾನ್ ತಂಡವು ಗುಂಪು ಹಂತದಲ್ಲಿ 5 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ತಂಡವು ಟೂರ್ನಿಯಲ್ಲಿ ಈವರೆಗ ಆರು ಗೋಲುಗಳನ್ನು ಗಳಿಸಿ, ಒಂಬತ್ತು ಗೋಲುಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿದೆ. ನವೆಂಬರ್ 17ರಂದು ನಡೆದ ಕೊನೆಯ ಮುಖಾಮುಖಿಯು ಭಾರತವು 3-0 ಅಂತರದಿಂದ ಗೆಲುವು ಸಾಧಿಸಿತ್ತು.

ಭಾರತದ ಪರ ದೀಪಿಕಾ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 10 ಗೋಲು ಬಾರಿಸಿದ್ದಾರೆ. ಜಪಾನ್ ತಂಡವು ತನ್ನ ಹಿಂದಿನ ಮುಖಾಮುಖಿಯಲ್ಲಿ ಭಾರತ ವಿರುದ್ಧ ಸೆಣಸಿದ್ದು, ತಂಡದ ಆಟಗಾರ್ತಿಯರನ್ನು ಅರ್ಥಮಾಡಿಕೊಂಡಿದೆ.

ಪಂದ್ಯದ ಸಮಯ

ಭಾರತ ಮತ್ತು ಜಪಾನ್ ತಂಡಗಳ ನಡುವಿನ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯವು ನವೆಂಬರ್ 19ರ ಮಂಗಳವಾರ ಬಿಹಾರದ ರಾಜ್‌ಗೀರ್ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:45 ಕ್ಕೆ ಆರಂಭವಾಗುತ್ತದೆ. ಇಂದು ಗೆಲ್ಲುವ ತಂಡವು ನವೆಂಬರ್ 20ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಆಡಲಿದೆ.

ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ಸೆಮಿಫೈನಲ್‌ ಪಂದ್ಯದ ಲೈವ್ ಸ್ಟ್ರೀಮಿಂಗ್ ಮಾಹಿತಿ

ಭಾರತ vs ಜಪಾನ್ 2024 ತಂಡಗಳ ನಡುವಿನ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್ ಪಂದ್ಯವು ಸೋನಿ ನೆಟ್‌ವರ್ಕ್ ಮತ್ತು ಡಿಡಿ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ಆಗಲಿದೆ. ಇದೇ ವೇಳೆ ಸೋನಿಲಿವ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ಮೊಬೈಲ್‌ ಮೂಲಕ ಇಲ್ಲಿ ವೀಕ್ಷಿಸಬಹುದು.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಚೀನಾ ಹಾಗೂ ಮಲೇಷ್ಯಾ ತಂಡಗಳು ಮುಖಾಮುಖಿಯಾಗಲಿದೆ. ಇಂದು ಮಧ್ಯಾಹ್ನ 2:30ಕ್ಕೆ ಈ ಪಂದ್ಯ ನಡೆಯಲಿದೆ. ಇಂದು ಗೆಲ್ಲುವ ತಂಡಗಳು ನವೆಂಬರ್ 20ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಆಡಲಿದೆ. ಫೈನಲ್‌ ಪಂದ್ಯ ಸಂಜೆ 4:45 ನಡೆಯಲಿದೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.