WPL playing conditions: ಡಬ್ಲ್ಯೂಪಿಎಲ್‌ ನಿಯಮಗಳು ಹೇಗಿವೆ? ಐಪಿಎಲ್‌ಗಿಂತ ಇದು ಹೇಗೆ ಭಿನ್ನ?
ಕನ್ನಡ ಸುದ್ದಿ  /  ಕ್ರೀಡೆ  /  Wpl Playing Conditions: ಡಬ್ಲ್ಯೂಪಿಎಲ್‌ ನಿಯಮಗಳು ಹೇಗಿವೆ? ಐಪಿಎಲ್‌ಗಿಂತ ಇದು ಹೇಗೆ ಭಿನ್ನ?

WPL playing conditions: ಡಬ್ಲ್ಯೂಪಿಎಲ್‌ ನಿಯಮಗಳು ಹೇಗಿವೆ? ಐಪಿಎಲ್‌ಗಿಂತ ಇದು ಹೇಗೆ ಭಿನ್ನ?

ಒಟ್ಟು ಐದು ತಂಡಗಳಲ್ಲಿ ಅಂಕಪಟ್ಟಿಯಲ್ಲಿರುವ ಅಗ್ರ ಮೂರು ತಂಡಗಳು ನಾಕ್‌ಔಟ್‌ ಹಂತಕ್ಕೆ ಎಂಟ್ರಿ ಕೊಡಲಿವೆ. ಅದರಲ್ಲೂ ಅಗ್ರಸ್ಥಾನಿ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯ ಆಡುತ್ತವೆ. ಅದರಲ್ಲಿ ಗೆದ್ದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

 ಡಬ್ಲ್ಯೂಪಿಎಲ್‌ ಟೂರ್ನಿಗೆ ಚಾಲನೆ
ಡಬ್ಲ್ಯೂಪಿಎಲ್‌ ಟೂರ್ನಿಗೆ ಚಾಲನೆ

ಜಾಗತಿಕ ವನಿತೆಯರ ಕ್ರಿಕೆಟ್‌ ಹಬ್ಬ ಮಹಿಳಾ ಪ್ರೀಮಿಯರ್ ಲೀಗ್ (WPL)ಗೆ ಇಂದು (ಶನಿವಾರ ಮಾರ್ಚ್ 4) ಅದ್ಧೂರಿ ಚಾಲನೆ ಸಿಕ್ಕಿದೆ. ಬಾಲಿವುಡ್‌ ಸೆಲೆಬ್ರಿಟಿಗಳು ಸೇರಿದಂತೆ ಖ್ಯಾತ‌ ಗಾಯಕರು ಕ್ರೆಕೆಟ್‌ನ ಸಂಭ್ರಮದ ಲೀಗ್‌ನ ಉದ್ಘಾಟನೆಗೆ ಸಾಕ್ಷಿಯಾಗಿದ್ದಾರೆ. ಇದೇ ವೇಳೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ಗೆ ನಿಯಮಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವುದು ಮುಖ್ಯ. ಬಹುತೇಕ ಐಪಿಎಲ್‌ನಂತೆಯೇ ಸಾಗಲಿರುವ ಟೂರ್ನಿಯಲ್ಲಿ ಕೆಲವೊಂದು ಭಿನ್ನ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಈ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಡಬ್ಲ್ಯೂಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್(Impact Player) ಆಯ್ಕೆಯನ್ನು ಬಳಸಿಕೊಳ್ಳಲು ಅವಕಾಶವಿಲ್ಲ. ಈ ಕಲ್ಪನೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ಈ ತಿಂಗಳ ಅಂತ್ಯದಿಂದ ಆರಂಭವಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL)ನಲ್ಲಿ ಪರಿಚಯಿಸುತ್ತಿದೆ. ಇದೇ ವೇಳೆ ಐಪಿಎಲ್‌ಗೆ ಹೋಲುವ ಕೆಲವು ಇತರ ನಿಯಮ ಅಥವಾ ನಿಬಂಧನೆಗಳನ್ನು ಇಲ್ಲಿಯೂ ಯಥಾವತ್ತಾಗಿ ಹೆಣೆಯಲಾಗಿದೆ. ಐಪಿಎಲ್‌ನಲ್ಲಿ ಇರುವಂತೆಯೇ ಇಲ್ಲಿಯೂ ಸೂಪರ್ ಓವರ್‌ಗಳು ಇರಲಿದೆ. ಆಟದ ಪ್ರತಿ ಸೆಷನ್‌ನಲ್ಲಿ ಎರಡು ಸ್ಟ್ರೆಟಜಿಕ್‌ ಟೈಮ್‌ಔಟ್‌ಗಳು ಮತ್ತು ಪ್ರತಿ ಇನ್ನಿಂಗ್ಸ್‌ನಲ್ಲಿ ಪ್ರತಿ ತಂಡಕ್ಕೆ ಎರಡು ರೆಫರಲ್‌(ರಿವ್ಯೂ) ಕೇಳುವ ಅವಕಾಶ ನೀಡಲಾಗಿದೆ.

ಆಟದ ನಿಯಮಗಳ ಬಗ್ಗೆ ಬಿಸಿಸಿಐ ಎಲ್ಲಾ ನಿಯಮಗಳನ್ನು ಈಗಾಗಾಲೇ ಹಂಚಿಕೊಂಡಿದೆ. ನಿಯಮಿತ 40 ಓವರ್‌ಗಳ ಬಳಿಕ ಪಂದ್ಯವೇನಾದರೂ ಟೈ ಆದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಒಂದು ವೇಳೆ ಸೂಪರ್‌ ಓವರ್‌ನಲ್ಲೂ ಟೈ ಆದರೆ, ಮತ್ತೊಂದು ಸೂಪರ್ ಓವರ್ ಇರುತ್ತದೆ. ಇಲ್ಲಿ ಬೌಂಡರಿಗಳ ಲೆಕ್ಕಾಚಾರದಲ್ಲಿ ವಿಜೇತರನ್ನು ನಿರ್ಣಯಿಸುವ ನಿಯಮ ಇಲ್ಲ. (ನ್ಯೂಜಿಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ 2019ರ ವಿಶ್ವಕಪ್ ಪಂದ್ಯವನ್ನು ಇಂಗ್ಲೆಂಡ್ ತಂಡವು ಸೂಪರ್‌ ಓವರ್‌ ಬಳಿಕ ಬೌಂಡರಿಗಳ ಲೆಕ್ಕದಲ್ಲಿ ಗೆದ್ದಿತ್ತು.)

ಒಂದು ಪಂದ್ಯದಲ್ಲಿ ನಾಲ್ಕು ಸ್ಟ್ರಾಟೆಜಿಕ್ ಟೈಮ್‌ಔಟ್‌ಗಳು ಇರುತ್ತವೆ. ಅಂದರೆ ಪ್ರತಿ ಇನ್ನಿಂಗ್ಸ್‌ನಲ್ಲಿ ತಲಾ ಎರಡು. ಪ್ರತಿ ಟೈಮ್‌ಔಟ್‌ ತಲಾ 150 ಸೆಕೆಂಡ್(ಎರಡೂವರೆ ನಿಮಿಷ)ದ ಅವಧಿಯದ್ದಾಗಿರುತ್ತದೆ. ಬೌಲಿಂಗ್ ನಡೆಸುವ ತಂಡಗಳು ಆರು ಮತ್ತು ಒಂಬತ್ತು ಓವರ್‌ಗಳ ನಡುವೆ ಇದನ್ನು ಬಳಸಿಕೊಳ್ಳಬಹುದು. ಬಳಿಕ ಬ್ಯಾಟಿಂಗ್ ನಡೆಸುತ್ತಿರುವ ತಂಡವು 13 ಮತ್ತು 16ನೇ ಓವರ್‌ಗಳ ನಡುವೆ ಈ ಬ್ರೇಕ್‌ ತೆಗೆದುಕೊಳ್ಳಬಹುದು.

ಡಿಆರ್‌ಎಸ್‌ ನಿಯಮ ಕೂಡಾ ಐಪಿಎಲ್‌ನಂತೆಯೇ ಇದೆ. ಪ್ರತಿ ತಂಡವು ಅಂಪೈರ್‌ ತೀರ್ಪಿನ ವಿರುದ್ಧ ಎರಡು ಬಾರಿ ಮೇಲ್ಮನವಿ(ರಿವ್ಯೂ) ತೆಗೆದುಕೊಳ್ಳಬಹುದು.

ಒಬ್ಬರು ಬ್ಯಾಟರ್‌ ಔಟಾದ 90 ಸೆಕೆಂಡುಗಳ ಒಳಗೆ ಹೊಸ ಬ್ಯಾಟರ್‌ ಕ್ರೀಸ್‌ಗೆ ಬರಬೇಕಾಗುತ್ತದೆ. ಒಂದು ವೇಳೆ ಇದರಲ್ಲಿ ವಿಳಂಬವಾದರೆ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಎಚ್ಚರಿಕೆಯ ನಂತರ ಮತ್ತೆ ವಿಳಂಬವಾದರೆ ದಂಡ ವಿಧಿಸುವ ಅವಕಾಶವಿದೆ. ಕನ್ಕ್ಯುಶನ್ ರಿಪ್ಲೇಸ್ಮೆಂಟ್ ನಿಯಮಗಳು ಸಹ ಇವೆ. ಅಂದರೆ, ಆಟದ ಆರಂಭಕ್ಕೂ ಮೊದಲು ತಂಡವು ನಾಮನಿರ್ದೇಶನ ಮಾಡಿದ 15 ಆಟಗಾರರಲ್ಲಿ ಯಾರಾದರೂ ಬದಲಿ ಆಟಗಾರರಾಗಿ ತಂಡ ಸೇರಿಕೊಳ್ಳಬಹುದು.

ಡಬ್ಲ್ಯೂಪಿಎಲ್‌ನ ವಿಶೇಷತೆಯೆಂದರೆ, ಒಟ್ಟು ಐದು ತಂಡಗಳಲ್ಲಿ ಅಂಕಪಟ್ಟಿಯಲ್ಲಿರುವ ಅಗ್ರ ಮೂರು ತಂಡಗಳು ನಾಕ್‌ಔಟ್‌ ಹಂತಕ್ಕೆ ಎಂಟ್ರಿ ಕೊಡಲಿವೆ. ಅದರಲ್ಲೂ ಅಗ್ರಸ್ಥಾನಿ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯ ಆಡುತ್ತವೆ. ಅದರಲ್ಲಿ ಗೆದ್ದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಮಾರ್ಚ್ 24 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯುತ್ತದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.