ಕನ್ನಡ ಸುದ್ದಿ  /  Sports  /  Wpl 2023 Experienced Mumbai Indians Take On Spirited Up Warriorz In Eliminator

WPL 2023: ಇಂದು ಮುಂಬೈ ​-ಯುಪಿ​​​ ನಡುವೆ ಎಲಿಮಿನೇಟರ್​​​ ಪಂದ್ಯ, ಗೆದ್ದವರಿಗೆ ಫೈನಲ್​ ಟಿಕೆಟ್​

WPL ಸೆಮಿಫೈನಲ್​ ಮಾದರಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಯುಪಿ ವಾರಿಯರ್ಸ್​ ತಂಡಗಳು ಇಂದು ಸೆಣಸಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡವು, ಈಗಾಗಲೇ ಫೈನಲ್​ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಎದುರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಅಲೀಸಾ ಹೀಲಿ ಮತ್ತು ಹರ್ಮನ್​ ಪ್ರೀತ್​ ಕೌರ್​​​
ಅಲೀಸಾ ಹೀಲಿ ಮತ್ತು ಹರ್ಮನ್​ ಪ್ರೀತ್​ ಕೌರ್​​​ (Twitter)

ಉದ್ಘಾಟನಾ ಆವೃತ್ತಿಯ ಮಹಿಳಾ ಪ್ರೀಮಿಯರ್​​​ ಲೀಗ್ (Women's Premier League)​​​ ಅಂತಿಮ ಹಂತ ತಲುಪಿದೆ. ಚೊಚ್ಚಲ ಪ್ರಶಸ್ತಿಗಾಗಿ ಮೂರು ತಂಡಗಳು ರೇಸ್​​​​ನಲ್ಲಿ ಉಳಿದುಕೊಂಡಿವೆ. ಇಂದು ಸಂಜೆ ಡಿವೈ ಪಾಟೀಲ್​​​ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್​ ಪಂದ್ಯದಲ್ಲಿ ಹರ್ಮನ್​ ನೇತೃತ್ವದ ಮುಂಬೈ ಇಂಡಿಯನ್ಸ್​ (Mumbai Indians) ಮತ್ತು ಅಲೀಸಾ ಹೀಲಿ ಮುಂದಾಳತ್ವದ ಯುಪಿ ವಾರಿಯರ್ಸ್ (UP Warriorz)​​​​ ತಂಡಗಳು, ಫೈನಲ್​ ಟಿಕೆಟ್​ಗಾಗಿ ಕಾದಾಟ ನಡೆಸಲಿವೆ.

ಈ ಸೆಮಿಫೈನಲ್​ ಮಾದರಿ ಎಲಿಮಿನೇಟರ್ ಪಂದ್ಯದಲ್ಲಿ ವಿಜೇತರ ತಂಡ, ಭಾನುವಾರ (ಮಾರ್ಚ್​​ 26) ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​ ತಂಡದ ಎದುರು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಸದ್ಯ ಉಭಯ ತಂಡಗಳು ಪ್ರಶಸ್ತಿ ಗೆಲ್ಲುವ ಫೇವರಿಟ್​ ಆಗಿದ್ದು, ಇಂದಿನ ಜಿದ್ದಾಜಿದ್ದಿನ ಕಾಳಗದಲ್ಲಿ ಗೆಲುವು ಯಾರಾದಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಲೀಗ್​​ನಲ್ಲಿ ಮುಂಬೈ ಸಾಧನೆ.!

ಮುಂಬೈ ಇಂಡಿಯನ್ಸ್​​ WPLನಲ್ಲಿ ಪ್ಲೇ ಆಫ್​ಗೇರಿದ ಮೊದಲ ತಂಡ ಎಂಬ ದಾಖಲೆ ಬರೆಯಿತು. ಆರಂಭಿಕ ಐದು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಬಲಿಷ್ಠ ತಂಡ ಎನಿಸಿದ್ದ ಮುಂಬೈ, ಅಂತಿಮ ಮೂರು ಪಂದ್ಯಗಳಲ್ಲಿ 2ರಲ್ಲಿ ಸೋಲು ಕಂಡಿತು. ಆದರೆ ಕೊನೆಯ ಲೀಗ್​ ಪಂದ್ಯದಲ್ಲಿ ಆರ್​​ಸಿಬಿ ತಂಡವನ್ನು ಲೀಗ್​​​ನಲ್ಲಿ ಎರಡನೇ ಬಾರಿಗೆ ಸೋಲಿಸಿ ಗೆಲುವಿನ ಹಳಿಗೆ ಮರಳಿದೆ. ಬ್ಯಾಟಿಂಗ್​ - ಬೌಲಿಂಗ್​ನಲ್ಲಿ ಅನುಭವಿ ಆಟಗಾರ್ತಿಯರೇ ತುಂಬಿದ್ದು, ಯುಪಿ ವಾರಿಯರ್ಸ್​ಗೆ ಸವಾಲಾಗುವ ಸಾಧ್ಯತೆ ಇದೆ.

ಆರಂಭಿಕರಾದ ಯಾಸ್ತಿಕಾ ಭಾಟಿಯಾ ಮತ್ತು ಹೀಲಿ ಮ್ಯಾಥ್ಯೂಸ್​​​​ ಭರ್ಜರಿ ಅಡಿಪಾಯ ಹಾಕಿಕೊಟ್ಟರೆ, ನಟಾಲಿ ಸೀವರ್​​, ನಾಯಕಿ ಹರ್ಮನ್​​ ಪ್ರೀತ್​ ಕೌರ್, ಅಮೆಲಿಯಾ ಕೌರ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್​ ಜೊತೆಗೆ ಬೌಲಿಂಗ್​​ನಲ್ಲೂ ಮುಂಬೈ ಸಖತ್​ ಬಲಿಷ್ಠವಾಗಿದೆ. ಟೂರ್ನಿಯಲ್ಲಿ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ ಮುಂಬೈನ ಮೂವರು ಬೌಲರ್​​ಗಳು ಕಾಣಿಸಿಕೊಂಡಿದ್ದಾರೆ. ಸೈಕಾ ಇಶಾ, ಹೀಲಿ ಮ್ಯಾಥ್ಯೂಸ್​, ಅಮೆಲಿಯಾ ಕೇರ್​​​​​​ ಬೌಲಿಂಗ್​​​ ಶಕ್ತಿ ಎನಿಸಿದ್ದಾರೆ.

ಲೀಗ್​​ನಲ್ಲಿ ಯುಪಿ ಸಾಧನೆ.!

ಲೀಗ್​​ ಹಂತದಲ್ಲಿ ಯುಪಿ ವಾರಿಯರ್ಸ್​ ಸಮಾನ ಫಲಿತಾಂಶ ಕಂಡಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿರುವ ಯುಪಿ, ಆಡಿರುವ 8 ಪಂದ್ಯಗಳಲ್ಲಿ 4 ರಲ್ಲಿ ಗೆಲುವು, 4 ರಲ್ಲಿ ಸೋಲು ಕಂಡಿದೆ. ಇನ್ನು ಲೀಗ್​​​​ನ ಉಭಯ ತಂಡಗಳು ಮುಖಾಮುಖಿಯಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿವೆ. ಮುಂಬೈ ಕೊಂಚ ಬಲಿಷ್ಠ ಎನಿಸಿದ್ರೂ, ಯುಪಿ ಸಖತ್​ ಫೈಟ್​ ನೀಡಲಿದೆ. ಲೀಗ್​​​ನ ಅಂತಿಮ ಪಂದ್ಯಗಳಲ್ಲಿ ಯುಪಿ ಕಳಪೆ ಪ್ರದರ್ಶನ ತಂಡದ ಹಿನ್ನಡೆಗೆ ಕಾರಣವಾಗಿದೆ.

ಯುಪಿ ವಾರಿಯರ್ಸ್​​​ ತಂಡದ ಬ್ಯಾಟರ್​ಗಳು ಅಸ್ಥಿರ ಪ್ರದರ್ಶನ ನೀಡಿದ್ದಾರೆ. ಆರಂಭಿಕರಾದ ಅಲೀಸಾ ಹೀಲಿ ಒಂದೆರಡು ಪಂದ್ಯಗಳಲ್ಲಿ ಅಬ್ಬರಿಸಿದ್ದು ಹೊರತುಪಡಿಸಿ, ಉಳಿದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರ ನಡುವೆಯೂ ಪ್ಲೇ ಆಫ್​​​ ಸ್ಥಾನ ಪಡೆದಿರುವುದು ವಿಶೇಷ. ತಹ್ಲಿಯಾ ಮೆಕ್​ಗ್ರಾತ್​​, ಗ್ರೇಸ್​ ಹ್ಯಾರಿಸ್​ ಹೊರತುಪಡಿಸಿ, ಉಳಿದ ಬ್ಯಾಟರ್​​ಗಳು ರನ್​ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಬೌಲಿಂಗ್​​ನಲ್ಲೂ ಸೋಫಿ ಎಕ್ಲೆಸ್ಟೋನ್​​ ಅವರನ್ನೇ ತಂಡ ನೆಚ್ಚಿಕೊಂಡಿದೆ. ದೀಪ್ತಿ ಶರ್ಮಾ ಎರಡೂ ವಿಭಾಗದಲ್ಲೂ ವೈಫಲ್ಯ ಕಂಡಿದ್ದಾರೆ.

ಡೆಲ್ಲಿ ನೇರವಾಗಿ ಫೈನಲ್​ಗೆ!

ಲೀಗ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲ್‌ನಲ್ಲಿ ಸ್ಥಾನ ಪಡೆಯುತ್ತದೆ. ಮತ್ತು ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಆಡುತ್ತವೆ. ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 8 ರಲ್ಲಿ 6 ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ ಕೂಡ ಡೆಲ್ಲಿ ತಂಡದಂತೆ 6 ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿತ್ತು. ಆದರೆ ರನ್​ರೇಟ್​ ಆಧಾರದಲ್ಲಿ ನೇರವಾಗಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಫೈನಲ್ ಪಂದ್ಯವನ್ನು ಮಾರ್ಚ್ 26ಕ್ಕೆ ಆಯೋಜಿಸಲಾಗಿದೆ.

ಮುಂಬೈ ಇಂಡಿಯನ್ಸ್ ತಂಡ

ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೀಲಿ ಮ್ಯಾಥ್ಯೂಸ್, ನಟಾಲಿ ಸಿವರ್ ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವೊಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾ, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್, ಸೋನಮ್ ಯಾದವ್, ನೀಲಂ ಬಿಷ್ಟ್, ಪ್ರಿಯಾಂಕಾ ಬಾಲಾ, ಧಾರಾ ಗುಜ್ಜರ್

ಯುಪಿ ವಾರಿಯರ್ಸ್ ತಂಡ

ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಾರ್ ಬೆಲ್‌ರಿಸ್, ಗ್ರೇಸ್ ಹ್ಯಾರಿಸ್​​​, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ವಿ.