WPL 2023: ಇಂದು ಡಬಲ್ ಮನರಂಜನೆ; ಯುಪಿ-ಗುಜರಾತ್ ಪಂದ್ಯದ ಮೇಲೆ ಆರ್‌ಸಿಬಿ ಭವಿಷ್ಯ; ಅಗ್ರಸ್ಥಾನಕ್ಕೆ ಡೆಲ್ಲಿ-ಮುಂಬೈ ಕಾದಾಟ
ಈಗಾಗಲೇ ಡೆಲ್ಲಿ ಹಾಗೂ ಮುಂಬೈ ತಂಡಗಳು ಪ್ಲೇ-ಆಫ್ ಟಿಕೆಟ್ ಗಿಟ್ಟಿಸಿಕೊಂಡಿವೆ. ಹೀಗಾಗಿ ಮೂರನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ನಡೆದಿದೆ. ಯುಪಿ ಹಾಗೂ ಗುಜರಾತ್ ಪಂದ್ಯದ ಫಲಿತಾಂಶವು ಆರ್‌ಸಿಬಿ ತಂಡದ ಭವಿಷ್ಯವನ್ನು ಕೂಡಾ ನಿರ್ಧರಿಸಲಿದೆ. ಹೀಗಾಗಿ ಇಂದಿನ ಪಂದ್ಯಗಳು ಮೂರು ತಂಡಗಳು ಹಾಗೂ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಮುಂಬೈ: ವಿಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಕೂಡಾ ಡಬಲ್ ಧಮಾಕ. ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಇದ್ದುದರಿಂದ ಡಬ್ಲ್ಯೂಪಿಎಲ್ ಪಂದ್ಯಗಳು ನಡೆದಿರಲಿಲ್ಲ. ವೀಕೆಂಡ್‌ನಲ್ಲಿ ನಡೆಯಬೇಕಿದ್ದ ಎರಡು ಪಂದ್ಯಗಳನ್ನು ಇಂದು ಆಯೋಜಿಸಲಾಗಿದೆ. ಹೀಗಾಗಿ ಇಂದು ಅಭಿಮಾನಿಗಳಿಗೆ ಎರಡೆರಡು ಪಂದ್ಯಗಳನ್ನು ಸವಿಯುವ ಅವಕಾಶ ಸಿಕ್ಕಿದೆ. ವಿಶೇಷವೆಂದರೆ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿದ್ದು ಇಂದಿನ ಪಂದ್ಯ ರೋಚಕವಾಗಿರಲಿದೆ.
ಸೋಮವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಡಬ್ಲ್ಯುಪಿಎಲ್ 2023ರ 17ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ಯುಪಿ ವಾರಿಯರ್ಜ್ ಅನ್ನು ಎದುರಿಸುತ್ತಾರೆ. ಯುಪಿ ತಂಡವು ಪ್ರಸ್ತುತ ಆರು ಪಂದ್ಯಗಳಲ್ಲಿ ಮೂರನ್ನು ಗೆದ್ದು ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಗುಜರಾತ್ ತಂಡವು ಏಳು ಪಂದ್ಯಗಳಿಂದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಪ್ಲೇ ಆಫ್ ಹಂತವನ್ನು ತಲುಪುವ ಅವಕಾಶಗಳಿವೆ. ಹೀಗಾಗಿ ಇಂದಿನ ಪಂದ್ಯ ರೋಚಕವಾಗಿರಲಿದೆ. ಒಂದು ವೇಳೆ ಇಂದಿನ ಪಂದ್ಯವನ್ನು ಯುಪಿ ತಂಡ ಗೆದ್ದರೆ ಮೂರನೇ ತಂಡವಾಗಿ ಪ್ಲೇ ಆಫ್ ಹಂತವನ್ನು ಇಂದೇ ಪ್ರವೇಶಿಸಲಿದೆ. ಅಲ್ಲಿಗೆ ಗುಜರಾತ್ ಜೊತೆಗೆ ಆರ್‌ಸಿಬಿ ತಂಡ ಕೂಡಾ ಟೂರ್ನಿಯಿಂದ ಹೊರನಡೆಯಲಿದೆ.
ಇದೇ ವೇಳೆ ಇಂದಿನ ಪಂದ್ಯವನ್ನು ಗುಜರಾತ್ ತಂಡವು ಗೆದ್ದರೆ, ಟೂರ್ನಿ ಮತ್ತಷ್ಟು ರೋಚಕವಾಗಲಿದೆ. ಗುಜರಾತ್ ತಂಡದ ಗೆಲುವಿನ ಅಂತರ ಕೂಡಾ ಇಲ್ಲಿ ಲೆಕ್ಕ ಹಾಕಬೇಕಾಗುತ್ತದೆ. ಏಕೆಂದರೆ ಗುಜರಾತ್ ತಂಡದ ಗೆಲುವು ಅದರ ಪ್ಲೇ-ಆಫ್ ಪ್ರವೇಶದ ಅವಕಾಶದೊಂದಿಗೆ ಆರ್‌ಸಿಬಿ ತಂಡಕ್ಕೂ ಮುಂದಿನ ಹಂತಕ್ಕೇರುವ ಅವಕಾಶವನ್ನು ಹೆಚ್ಚಿಸಲಿದೆ. ಆ ಬಳಿಕ ಯುಪಿ ತಂಡದ ಮುಂದಿನ ಪಂದ್ಯ ಹಾಗೂ ಆರ್‌ಸಿಬಿ ತಂಡದ ಮುಂದಿನ ಪಂದ್ಯ ಕೂಡಾ ಹೆಚ್ಚು ಕುತೂಹಲ ಕೆರಳಿಸಲಿದೆ.
ಈಗಾಗಲೇ ಡೆಲ್ಲಿ ಹಾಗೂ ಮುಂಬೈ ತಂಡಗಳು ಪ್ಲೇ-ಆಫ್ ಟಿಕೆಟ್ ಗಿಟ್ಟಿಸಿಕೊಂಡಿವೆ. ಹೀಗಾಗಿ ಮೂರನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ನಡೆದಿದೆ. ಯುಪಿ ಹಾಗೂ ಗುಜರಾತ್ ಪಂದ್ಯದ ಫಲಿತಾಂಶವು ಆರ್‌ಸಿಬಿ ತಂಡದ ಭವಿಷ್ಯವನ್ನು ಕೂಡಾ ನಿರ್ಧರಿಸಲಿದೆ. ಹೀಗಾಗಿ ಇಂದಿನ ಪಂದ್ಯಗಳು ಮೂರು ತಂಡಗಳು ಹಾಗೂ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯವೇ?
ಮೊದಲ ಐದು ಪಂದ್ಯಗಳನ್ನು ಹೀನಾಯವಾಗಿ ಸೋತ ಬೆಂಗಳೂರು, ಕೊನೆಯ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದೆ. ಹೀಗಾಗಿ ಪ್ಲೇ ಆಫ್ ಟಿಕೆಟ್ ಖಚಿತಪಡಿಸಿಕೊಳ್ಳಲು ಬಯಸಿದರೆ, ಆರ್‌ಸಿಬಿ ತಮ್ಮ ಮುಂದಿನ ಪಂದ್ಯವನ್ನು ಮುಂಬೈ ವಿರುದ್ಧ ಭಾರಿ ಅಂತರದಲ್ಲಿ ಗೆಲ್ಲಬೇಕು. ಇದೇ ವೇಳೆ ಯುಪಿ ವಾರಿಯರ್ಸ್ ತನ್ನ ಮುಂದಿರುವ ಎರಡೂ ಪಂದ್ಯಗಳಲ್ಲೂ ಸೋಲು ಕಾಣವೇಕು. ಇಂದು ಯುಪಿ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದರೆ ಆರ್‌ಸಿಬಿ ಕತೆ ಮುಗಿಯುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗುಜರಾತ್ ಕಡಿಮೆ ಅಂತರದಲ್ಲಿ ಗೆಲ್ಲಬೇಕು. ಅದಾದ ಬಳಿಕ ಯುಪಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಕೂಡಾ ಸೋತರೆ ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಪ್ರವೇಶಿಸಲಿದೆ. ಈ ವೇಳೆ ಯುಪಿ ತಂಡದ ರನ್ ರೇಟ್ ಆರ್‌ಸಿಬಿಗಿಂತ ಕಡಿಮೆ ಇರಬೇಕು.
ಅಗ್ರ ಸ್ಥಾನದ ಮೇಲೆ ಮುಂಬೈ-ಡೆಲ್ಲಿ ಕಣ್ಣು
ಈಗಾಗಲೇ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂದು ಮತ್ತೆ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇಂದಿನ ಗೆಲುವು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಇಂದು ಮುಂಬೈ ತಂಡವು ಗೆದ್ದರೆ, ನೇರವಾಗಿ ಫೈನಲ್ ಪ್ರವೇಶಿಲಿದೆ. ಒಂದು ವೇಳೆ ಡೆಲ್ಲಿ ತಂಡ ಗೆದ್ದರೆ, ಮುಂದಿನ ಪಂದ್ಯದ ಫಲಿತಾಂಶದ ಮೇಲೆ ಯಾವುದಾದರೂ ಒಂದು ತಂಡ ಅಗ್ರಸ್ಥಾನದಲ್ಲಿ ಉಳಿಯಲಿದೆ. ಎಂಐ ಪ್ರಸ್ತುತ ಆರು ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಏತನ್ಮಧ್ಯೆ, ಡಿಸಿ ಆರು ಪಂದ್ಯಗಳಿಂದ ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇಂದಿನ ಪಂದ್ಯ ಸೇರಿ ಎರಡು ಪಂದ್ಯಗಳು ಉಳಿದಿವೆ.
ವಿಭಾಗ