RCB vs GG: 1 ರನ್ನಿಂದ ಶತಕ ಮಿಸ್.. ಡೇಂಜರಸ್ ಡಿವೈನ್ ಆಟಕ್ಕೆ ಬೆಚ್ಚಿದ ಗುಜರಾತ್.. RCBಗೆ ಸತತ 2ನೇ ಗೆಲುವು
RCB vs GG: ಗುಜರಾತ್ ಜೈಂಟ್ಸ್ ವಿರುದ್ಧ ಆರ್ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಗುಜರಾತ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದೆ. ಸತತ ಎರಡನೇ ಗೆಲುವಿಗೆ ಮುತ್ತಿಕ್ಕಿದ್ದು, ಟೂರ್ನಿಯಲ್ಲಿ ಪ್ಲೇ ಆಫ್ ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಶತಕವೊಂದು 1 ರನ್ ಅಂತರದಲ್ಲಿ ಮಿಸ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಚೊಚ್ಚಲ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸುವ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆಯುವ ಅವಕಾಶವನ್ನು ಕಳೆದುಕೊಂಡರು. ಆದರೆ ನೆರೆದಿದ್ದ ಅಭಿಮಾನಿಗಳಿಗೆ ರನ್ ಹಬ್ಬದೂಟ ಉಣ ಬಡಿಸಿದರು.
ಟ್ರೆಂಡಿಂಗ್ ಸುದ್ದಿ
ಸೋಫಿ ಡಿವೈನ್ ಅವರ ಆರ್ಭಟಕ್ಕೆ ಗುಜರಾತ್ ಜೈಂಟ್ಸ್ ಅಕ್ಷರಶಃ ಬೆಚ್ಚಿ ಬಿದ್ದಿತು. ಲೇಡಿ ಗೇಲ್ರ ಬೆಂಕಿ - ಬಿರುಗಾಳಿ ಆಟಕ್ಕೆ ಗುಜರಾತ್ಗೆ ದಿಕ್ಕೇ ತೋಚದಂತಾಯಿತು. ಈ ಸ್ಪೋಟಕ ಆಟದ ಮೂಲಕ ಆರ್ಸಿಬಿಗೆ ಸತತ 2ನೇ ಗೆಲುವು ತಂದುಕೊಟ್ಟಿದ್ದಾರೆ. 99 ರನ್ ಗಳಿಸಿದ ಸೋಫಿ ಡಿವೈನ್ ಕೇವಲ 1 ರನ್ ಅಂತರದಿಂದ ಶತಕ ತಪ್ಪಿಸಿಕೊಂಡರು.
ಗುಜರಾತ್ ಜೈಂಟ್ಸ್ ವಿರುದ್ಧ ಆರ್ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಗುಜರಾತ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದೆ. ಸತತ ಎರಡನೇ ಗೆಲುವಿಗೆ ಮುತ್ತಿಕ್ಕಿದ್ದು, ಟೂರ್ನಿಯಲ್ಲಿ ಪ್ಲೇ ಆಫ್ ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಆರ್ಸಿಬಿಗೆ ಟೂರ್ನಿಯಲ್ಲಿ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದ್ದು, ಆ ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸಲೇಬೇಕು.
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಜೈಂಟ್ಸ್ ಲಾರಾ ವೋಲ್ವಾರ್ಡ್ಸ್ಟ್ ಮತ್ತು ಆ್ಯಶ್ಲೆ ಗಾರ್ಡ್ನರ್ ಅವರ ಅಮೋಘ ಆಟದಿಂದ ಬೃಹತ್ ಮೊತ್ತ ಪೇರಿಸಿತು. ವೋಲ್ವಾರ್ಡ್ಸ್ಟ್ 68 ಸಿಡಿಸಿದರೆ, ಗಾರ್ಡ್ನರ್ 41 ರನ್ ಚಚ್ಚಿದರು. ಸಬ್ಬಿನೇನಿ ಮೇಘನಾ 31 ರನ್, ಹೇಮಲತಾ ಅಜೇಯ 16 ರನ್, ಹರ್ಲೀನ್ ಡಿಯೋಲ್ ಅಜೇಯ 12 ರನ್ ಗಳಿಸಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.
ಈ ಬೃಹತ್ ಮೊತ್ತ ಬೆನ್ನಟ್ಟಿದ ಬೆಂಗಳೂರು, ಗುಜರಾತ್ ಬೌಲರ್ಗಳ ಮೇಲೆ ಸವಾರಿ ಮಾಡಿತು. ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್, ಚೆಂಡನ್ನು ಅಷ್ಟ ದಿಕ್ಕುಗಳಿಗೂ ದರ್ಶನ ಮಾಡಿದರು. ಸಿಕ್ಸರ್ - ಬೌಂಡರಿಗಳ ಸುರಿಮಳೆಗೈದರು. ಗುಜರಾತ್ ಬೌಲರ್ಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ ಈ ಜೋಡಿ, ಸ್ಟ್ರಾಂಗ್ ಕಂಬ್ಯಾಕ್ ಮಾಡಿತು.
ಮೊದಲ ವಿಕೆಟ್ಗೆ 125 ರನ್
ಮಂಧಾನ ಮತ್ತು ಡಿವೈನ್ ಮೊದಲ ವಿಕೆಟ್ಗೆ ಕಟ್ಟಿದ್ದು 125 ರನ್. ನಾಯಕಿ ರಕ್ಷಣಾತ್ಮಕ ಆಟವಾಡುತ್ತಾ ಸಿಡಿಯುತ್ತಿದ್ದರೆ, ಡೇಂಜರಸ್ ಡಿವೈನ್ ಅಂತೂ ಬೌಲರ್ಗಳನ್ನು ಸಿಕ್ಕಾಪಟ್ಟೆ ಕಾಡಿದರು. ನಿಧಾನವಾಗಿ ಬ್ಯಾಟ್ ಬೀಸುತ್ತಿದ್ದ ಮಂಧಾನ, 37 ಎಸೆತಗಳಲ್ಲಿ ಆಟ ಮುಗಿಸಿದರು. ವಿಕೆಟ್ ಪತನದ ನಡುವೆಯೂ ಕರುಣೆ ಇಲ್ಲದೆ ದಂಡಿಸಿದ ಡಿವೈನ್, ಕ್ರಿಸ್ಗೇಲ್ ಆಟವನ್ನು ನೆನಪಿಸಿದರು.
1 ರನ್ನಿಂದ ಶತಕ ಮಿಸ್..!
ಕೇವಲ 36 ಎಸೆತಗಳಲ್ಲಿ 99 ರನ್ ಗಳಿಸಿ ಔಟಾದ ಸೋಫಿ ಡಿವೈನ್, ಒಂದೇ ಒಂದು ರನ್ ಇಂದ ಚೊಚ್ಚಲ ಶತಕವನ್ನು ಮಿಸ್ ಮಾಡಿಕೊಂಡರು. ಬರೋಬ್ಬರಿ 9 ಬೌಂಡರಿ, 8 ಸಿಕ್ಸರ್ ಸಿಡಿಸಿದ ನ್ಯೂಜಿಲೆಂಡ್ ಆಟಗಾರ್ತಿ, ಬರೋಬ್ಬರಿ 275 ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. 15.3 ಓವರ್ಗಳಲ್ಲೇ ಆರ್ಸಿಬಿ ಗೆಲುವು ದಾಖಲಿಸಿತು. ಎಲಿಸ್ ಪೆರ್ರಿ ಅಜೇಯ 19, ಹೀದರ್ ನೈಟ್ ಅಜೇಯ 22 ರನ್ ಗಳಿಸಿ ಪಂದ್ಯಕ್ಕೆ 8 ವಿಕೆಟ್ಗಳ ಗೆಲುವು ತಂದುಕೊಟ್ಟರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI):
ಸೋಫಿ ಡಿವೈನ್, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI):
ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ್ ರಾಣಾ (ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.