ಪ್ಯಾರಿಸ್ ಒಲಿಂಪಿಕ್ಸ್: ಕುಸ್ತಿಪಟು ಅಂತಿಮ್ ಪಂಘಲ್‌ಗೆ ನಿಷೇಧ ವರದಿ ತಳ್ಳಿಹಾಕಿದ ಐಒಎ
ಒಲಿಂಪಿಕ್ ಕ್ರೀಡಾಕೂಟದ ವೇಳೆ ಅಶಿಸ್ತಿನ ವರ್ತನೆ ತೋರಿದ ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್‌ಗೆ 3 ವರ್ಷ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಕುರಿತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸುವ ಸಾಧ್ಯತೆ ಕುರಿತ ವರದಿಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ತಳ್ಳಿ ಹಾಕಿದೆ. ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಅಂತಿಮ್, ಅಥ್ಲೀಟ್‌ಗಳಿಗಾಗಿ ನಿರ್ಮಿಸಲಾದ ಕ್ರೀಡಾ ಗ್ರಾಮಕ್ಕೆ ತಮ್ಮ ಸಹೋದರಿಯನ್ನು ಕರೆತರುವ ಪ್ರಯತ್ನ ಮಾಡಿದ್ದರು. ಇದಕ್ಕಾಗಿ ತಮಗಾಗಿ ನೀಡಿದ ಮಾನ್ಯತೆ ಕಾರ್ಡ್ ದುರ್ಬಳಕೆ ಮಾಡಿದ್ದರು. ಇದು ಭಾರತೀಯ ಒಲಿಂಪಿಕ್ ತಂಡಕ್ಕೆ ಮುಜುಗರವನ್ನುಂಟು ಮಾಡಿದೆ ಎಂದು ಕುಸ್ತಿಪಟುವನ್ನು ಐಒಎ ಮೂರು ವರ್ಷಗಳ ಕಾಲ ನಿಷೇಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದವು. ಈ ಕುರಿತು ಐಒಎ ಸ್ಪಷ್ಟನೆ ನೀಡಿದೆ.
ಬುಧವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ಆರಂಭಿಕ ಪಂದ್ಯದಲ್ಲಿ ಪಂಘಲ್ ಸೋತಿದ್ದಾರೆ. ಈಗಾಗಲೇ ಒಲಿಂಪಿಕ್ಸ್‌ನಿಂದ ಹೊರಬಿದ್ದಿರುವ ಪಂಘಲ್, ಸದ್ಯ ಭಾರತಕ್ಕೆ ಮರಳುತ್ತಿದ್ದಾರೆ. ಅವರ ಮೇಲೆ ಮೂರು ವರ್ಷಗಳ ನಿಷೇಧ ಹೇರಲಾಗುತ್ತಿದೆ ಎಂಬ ಕುರಿತು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿತ್ತು. ಆದರೆ, ಈ ವರದಿಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ತಳ್ಳಿ ಹಾಕಿದೆ.
ಪಂಘಲ್ ಅವರಿಗೆ ನೀಡಿದ ಮಾನ್ಯತೆ ಕಾರ್ಡ್ ಬಳಸಿ ತಮ್ಮ ಸಹೋದರಿಯನ್ನು ಕ್ರೀಡಾಪಟುಗಳ ಗ್ರಾಮಕ್ಕೆ ಕರೆತರಲು ಪ್ರಯತ್ನಿಸಿದ್ದಾರೆ. “ಅವರು ಭಾರತವನ್ನು ತಲುಪಿದ ನಂತರ ನಿರ್ಧಾರವನ್ನು ಔಪಚಾರಿಕವಾಗಿ ಪ್ರಕಟಿಸಲಾಗುವುದು” ಎಂದು ತಂಡದ ಮೂಲಗಳು ತಿಳಿಸಿವೆ.
ಶಿಸ್ತು ನಿಯಮಗಳ ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಗಮನಕ್ಕೆ ತಂದಿದ್ದಾರೆ. ಅದಾದ ಬೆನ್ನಲ್ಲೇ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪಂಘಲ್ ಹಾಗೂ ಅವರ ಸಹಾಯಕ ಸಿಬ್ಬಂದಿಯನ್ನು ತವರಿಗೆ ವಾಪಸ್ ಕರೆತರುವ ನಿರ್ಧಾರ ಮಾಡಿದೆ. ಪಂಘಲ್ ಇಂದು ಸಂಜೆ ದೆಹಲಿಗೆ ಬರಲಿದ್ದಾರೆ.
ಭಾರತಕ್ಕೆ ಹಿಂದಿರುಗುವ ಮೊದಲು ಮಾತನಾಡಿರುವ 19 ವರ್ಷದ ಆಟಗಾರ್ತಿ, “ನಾನು ಯಾವುದೇ ತಪ್ಪು ಮಾಡುವ ಉದ್ದೇಶ ಹೊಂದಿರಲಿಲ್ಲ. ನನಗೆ ಆರೋಗ್ಯ ಸರಿಯಿರಲಿಲ್ಲ. ಇದೆಲ್ಲವೂ ಗೊಂದಲದಿಂದಾಗಿ ಆಗಿದೆ. ನನ್ನ ಬಗ್ಗೆ ಸಾಕಷ್ಟು ತಪ್ಪು ಸುದ್ದಿ ಹರಡಲಾಗುತ್ತಿದೆ. ಅದು ನಿಜವಲ್ಲ. ನನಗೆ ತೀವ್ರ ಜ್ವರವಿತ್ತು. ನನ್ನ ಸಹೋದರಿಯೊಂದಿಗೆ ಹೋಟೆಲ್‌ಗೆ ಹೋಗಲು ನನ್ನ ತರಬೇತುದಾರರಿಂದ ಅನುಮತಿ ಪಡೆದಿದ್ದೆ,” ಎಂದು ಅವರು ಹೇಳಿದರು.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ 2024ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ ಚಿನ್ನದ ಪದಕ ಪಂದ್ಯ, ಕಂಚಿಗಾಗಿ ಹಾಕಿ ತಂಡ ಕಣಕ್ಕೆ; ಆಗಸ್ಟ್ 8ರಂದು ಭಾರತದ ವೇಳಾಪಟ್ಟಿ