ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಕ್ರೀಡಾ ನ್ಯಾಯ ಮಂಡಳಿ; ಕಮರಿತು ಒಲಿಂಪಿಕ್ ಪದಕದ ಕನಸು
ಕನ್ನಡ ಸುದ್ದಿ  /  ಕ್ರೀಡೆ  /  ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಕ್ರೀಡಾ ನ್ಯಾಯ ಮಂಡಳಿ; ಕಮರಿತು ಒಲಿಂಪಿಕ್ ಪದಕದ ಕನಸು

ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಕ್ರೀಡಾ ನ್ಯಾಯ ಮಂಡಳಿ; ಕಮರಿತು ಒಲಿಂಪಿಕ್ ಪದಕದ ಕನಸು

ಒಲಿಂಪಿಕ್ಸ್‌ ಕುಸ್ತಿ ಫೈನಲ್‌ ಅನರ್ಹತೆಯ ವಿರುದ್ಧ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ನ್ಯಾಯ ಮಂಡಳಿ ತಿರಸ್ಕರಿಸಿದೆ. ಇದರೊಂದಿಗೆ ಬೆಳ್ಳಿ ಪದಕದ ಭರವಸೆ ಕಮರಿದೆ.

ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತ
ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತ (PTI)

ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಪಂದ್ಯದ ಫೈನಲ್‌ನಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ‌, ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ನ್ಯಾಯ ಮಂಡಳಿ (CAS) ವಜಾಗೊಳಿಸಿದೆ. ನ್ಯಾಯಯುತವಾಗಿ ತನಗೆ ಬೆಳ್ಳಿ ಪದಕ ಬರಬೇಕೆಂದು ವಿನೇಶ್‌ ಮನವಿ ಸಲಿಸಿದ್ದರು. ತೀರ್ಪನ್ನು ಪ್ರಕಟಿಸಲು ಸುದೀರ್ಘ ಸಮಯ ತೆಗೆದುಕೊಂಡ ನ್ಯಾಯಾಲಯ, ಅರ್ಜಿ ವಜಾಗೊಳಿಸಿದೆ. ಬೆಳ್ಳಿ ಪದಕಕ್ಕಾಗಿ ಭಾರತೀಯ ಕುಸ್ತಿಪಟು ಸಲ್ಲಿಸಿದ ಮೇಲ್ಮನವಿಯ ನಿರ್ಧಾರವನ್ನು ಈ ಹಿಂದೆಯೇ ಪ್ರಕಟಿಸಬೇಕಿತ್ತು. ಮಂಗಳವಾರ ತೀರ್ಪು ಪ್ರಕಟಿಸಬಹುದಾದ ನಿರೀಕ್ಷೆ ಇತ್ತಾದರೂ. ಸತತ ಎರಡನೇ ಬಾರಿಗೆ ಮುಂದೂಡಲಾಗಿತ್ತು.

ಒಲಿಂಪಿಕ್ ಕ್ರೀಡಾಕೂಟದಿಂದ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ನ್ಯಾಯಾ ಮಂಡಳಿಯ ತಾತ್ಕಾಲಿಕ ವಿಭಾಗ ತಿರಸ್ಕರಿಸಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬುಧವಾರ ದೃಢಪಡಿಸಿದೆ. ಇದರೊಂದಿಗೆ, ವಿನೇಶ್‌ ಮಾತ್ರವಲ್ಲದೆ ಭಾರತೀಯರೆಲ್ಲರ ಬೆಳ್ಳಿ ಪದಕದ ನಿರೀಕ್ಷೆ ಕಮರಿದೆ. ಪ್ಯಾರಿಸ್‌ನಲ್ಲಿ ಭಾರತ ಪಡೆದ ಒಟ್ಟು ಪದಕಗಳ ಸಂಖ್ಯೆ 6ರಲ್ಲೇ ಉಳಿದಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ಕುಸ್ತಿಪಟು ಸೇರಿದಂತೆ ಬಲಿಷ್ಠರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಹಾಕಿದ್ದ ಫೋಗಟ್‌, ಫೈನಲ್‌ಗೂ ಮುನ್ನ ಹೆಚ್ಚುವರಿ ತೂಕವಿದ್ದ ಕಾರಣದಿಂದ ಅನರ್ಹಗೊಂಡಿದ್ದರು. ಮಹಿಳೆಯರ 50 ಕೆಜಿ ಕುಸ್ತಿಯಲ್ಲಿ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಟ್ ವಿರುದ್ಧದ ಐತಿಹಾಸಿಕ ಚಿನ್ನದ ಪದಕದ ಪಂದ್ಯದ ದಿನ, ಆಗಸ್ಟ್ 7ರಂದು ನಡೆದ ತೂಕ ಪರೀಕ್ಷೆ ವೇಳೆ ನಿಗದಿತ ಮಿತಿಗಿಂತ ಫೋಗಟ್‌ 100 ಗ್ರಾಂ ಹೆಚ್ಚು ತೂಕವಿದ್ದರು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿತ್ತು.‌ ಹೀಗಾಗಿ ಯಾವುದೇ ಪದಕ ವಿನೇಶ್‌ಗೆ ಸಿಕ್ಕಿರಲಿಲ್ಲ. ಇದು ದೇಶಾದ್ಯಂತ ವ್ಯಾಪಕ ಬೇಸರಕ್ಕೆ ಕಾರಣವಾಗಿತ್ತು.

ಮೇಲಿಂದ ಮೇಲೆ ಆಘಾತ, ಕುಸ್ತಿಗೆ ವಿದಾಯ

ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿ, ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದಾರೆ. ಆದರೆ 29 ವರ್ಷದ ಆಟಗಾರ್ತಿಗೆ ಅನರ್ಹತೆ ಭಾರಿ ಆಘಾತ ಕೊಟ್ಟಿದೆ. ಇದರೊಂದಿಗೆ ಅವರು ಚಿನ್ನದ ಪದಕ ಗೆಲ್ಲುವ ಅವಕಾಶ ಕೈತಪ್ಪಿತು. ನಿಯಮಗಳ ಪ್ರಕಾರ, ಕುಸ್ತಿ ಸ್ಪರ್ಧೆಯ ಸಮಯದಲ್ಲಿ ತೂಕ ಪರೀಕ್ಷೆಯಲ್ಲಿ ವಿಫಲವಾದರೆ, ಆ ಕುಸ್ತಿಪಟು ತಕ್ಷಣ ಅನರ್ಹಗೊಳ್ಳುತ್ತಾರೆ. ಅನರ್ಹತೆಯ ಬೆನ್ನಲ್ಲೇ ಮರುದಿನ ಬೆಳಗ್ಗೆ ವಿನೇಶ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಭಾವನಾತ್ಮಕ ಟ್ವೀಟ್ ಮಾಡಿದ್ದ ಅವರು, "ಕುಸ್ತಿ ಗೆದ್ದಿತು, ಅದರ ಮುಂದೆ ನಾನು ಸೋತು ಹೋದೆ" ಎಂದು ಬೇಸರದಿಂದ ಬರೆದಿದ್ದರು.

ವಿನೇಶ್ ಫೋಗಟ್ ಅವರು, ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡಬೇಕೆಂದು ಮೇಲ್ಮನವಿಯಲ್ಲಿ ಒತ್ತಾಯಿಸಿದರು. ವಿನೇಶ್ ಪರ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ವಾದ ಮಂಡಿಸಿದ್ದರು. ಸಿಎಎಸ್ ಆ ಮನವಿಯನ್ನು ಪರಿಶೀಲಿಸಿತ್ತು. ಆಗಸ್ಟ್ 9ರ ಶುಕ್ರವಾರ ವಿಚಾರಣೆ ನಡೆಸಿದ ಸಿಎಎಸ್ ಶನಿವಾರ ರಾತ್ರಿಗೆ ತೀರ್ಪು ನೀಡುವ ಭರವಸೆ ನೀಡಿತು. ಆ ಬಳಿಕ ಅದನ್ನು ಆಗಸ್ಟ್ 13ಕ್ಕೆ ಮುಂದೂಡಲಾಗಿತು. ಅಂತಿಮವಾಗಿ ಬುಧವಾರ ತೀರ್ಪು ಪ್ರಕಟಿಸಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.