ತಪ್ಪಾದ ರಾಷ್ಟ್ರಗೀತೆ ಪ್ಲೇ ಮಾಡಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಮಾದ; ಕ್ಷಮೆ ಯಾಚಿಸಿದ ಸಂಘಟಕರು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಾಸ್ಕೆಟ್‌ಬಾಲ್ ಪಂದ್ಯಕ್ಕೂ ಮುನ್ನ ದಕ್ಷಿಣ ಸುಡಾನ್ ಬದಲಿಗೆ ಸುಡಾನ್ ದೇಶದ ರಾಷ್ಟ್ರಗೀತೆಯನ್ನು ನುಡಿಸಲಾಗಿದೆ. ಪ್ರೇಕ್ಷಕರ ಆಕ್ರೋಶದ ಬಳಿಕ ಸಣ್ಣ ವಿರಾಮದ ನಂತರ ಸರಿಯಾದ ರಾಷ್ಟ್ರಗೀತೆಯನ್ನು ಪ್ಲೇ ಮಾಡಲಾಗಿದೆ.
ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟವು ಹಲವು ಕಾರಣಗಳಿಂದ ವಿವಾದಗಳಿಗೆ ಕಾರಣವಾಗುತ್ತಿದೆ. ಉದ್ಘಾಟನಾ ದಿನದಂದು ದಕ್ಷಿಣ ಕೊರಿಯಾ ದೇಶವನ್ನು ಉತ್ತರ ಕೊರಿಯಾ ಎಂಬುದಾಗಿ ತಪ್ಪಾಗಿ ಪರಿಚಯಿಸಿದ್ದು ಒಂದೆಡೆಯಾದರೆ, ಸೆಕ್ಸಿಸ್ಟ್ ಹೇಳಿಕೆ ನೀಡಿದ ವೀಕ್ಷಕ ವಿವರಣೆಕಾರನನ್ನು ಕರ್ತವ್ಯದಿಂದ ವಜಾಗೊಳಿಸಿರುವುದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಈ ನಡುವೆ ದಕ್ಷಿಣ ಸುಡಾನ್ ದೇಶದ ರಾಷ್ಟ್ರಗೀತೆ ಹಾಕುವ ಬದಲಿಗೆ ಬೇರೆ ದೇಶದ ರಾಷ್ಟ್ರಗೀತೆ ಮೊಳಗಿದ್ದು ಮತ್ತೊಂದು ಎಡವಟ್ಟು ನಡೆದಿದೆ.
ಪೋರ್ಟೊ ರಿಕೊ ವಿರುದ್ಧ ದಕ್ಷಿಣ ಸುಡಾನ್ ದೇಶದ ಪುರುಷರ ಮೊದಲ ಬ್ಯಾಸ್ಕೆಟ್‌ಬಾಲ್ ಪಂದ್ಯಕ್ಕೂ ಮೊದಲು ಉಭಯ ದೇಶಗಳ ರಾಷ್ಟ್ರಗೀತೆಯನ್ನು ಹಿನ್ನೆಲೆಯಲ್ಲಿ ಹಾಕಲಾಯ್ತು. ಆದರೆ, ಆತಿಥೇಯ ದೇಶ ಫ್ರಾನ್ಸ್‌ನ ಒಲಿಂಪಿಕ್ ಸಂಘಟಕರು ದಕ್ಷಿಣ ಸುಡಾನ್ ದೇಶದ ಬದಲಿಗೆ ಬೇರೆ ದೇಶದ ರಾಷ್ಟ್ರಗೀತೆಯನ್ನು ತಪ್ಪಾಗಿ ಪ್ಲೇ ಮಾಡಿದ್ದಾರೆ.
ಭಾನುವಾರದಂದು ಪಿಯರೆ ಮೌರಾಯ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ದಕ್ಷಿಣ ಸುಡಾನ್ ಬದಲಿಗೆ ಸುಡಾನ್ ದೇಶದ ರಾಷ್ಟ್ರಗೀತೆಯನ್ನು ನುಡಿಸಿದಾಗ ಪ್ರೇಕ್ಷಕರು ಜೋರಾಗಿ ಬೊಬ್ಬೆ ಹಾಕಿದರು. ಈ ವೇಳೆ ಸಣ್ಣ ವಿರಾಮದ ನಂತರ ಸರಿಯಾದ ರಾಷ್ಟ್ರಗೀತೆಯನ್ನು ಪ್ಲೇ ಮಾಡಲಾಯಿತು. ಈ ವೇಳೆ ಮೈದಾನದಲ್ಲಿ ಸೇರಿದ ಪ್ರೇಕ್ಷಕರು ಹರ್ಷೋದ್ಘಾರ ಮೊಳಗಿಸಿದರು.
ಪಂದ್ಯದ ಬಳಿಕ ಒಲಿಂಪಿಕ್ ಕ್ರೀಡಾಕೂಟದ ಸಂಘಟಕರು ತಪ್ಪಿಗೆ ಕ್ಷಮೆ ಕೋರಿದ್ದಾರೆ. ಇದು "ಮಾನವ ದೋಷ" ಎಂದು ಹೇಳಿರುವ ಸಂಘಟಕರು, ಪ್ರಮಾದಕ್ಕಾಗಿ ಕ್ಷಮೆಯಾಚಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ದೇಶಕ್ಕೆ ತೋರಿದ ಅಗೌರವ
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ದಕ್ಷಿಣ ಸುಡಾನ್‌ನ ಆಟಗಾರರೊಬ್ಬರು, ಇದು ತಮ್ಮ ದೇಶಕ್ಕೆ ತೋರಿದ ಅಗೌರವ ಎಂದು ಹೇಳಿದ್ದಾರೆ. “ಸಂಘಟಕರು ಇಂಥಾ ವಿಚಾರಗಳಲ್ಲಿ ಎಚ್ಚರದಿಂದ ಇರಬೇಕು. ಏಕೆಂದರೆ ಇದು ಅತಿದೊಡ್ಡ ಕ್ರೀಡಾಕೂಟವಾಗಿದೆ. ದಕ್ಷಿಣ ಸುಡಾನ್ ಆಡುತ್ತಿದೆ ಎಂಬುದು ಅವರಿಗೆ ತಿಳಿದಿದೆ. ಬೇರೆ ದೇಶದ ಗೀತೆಯನ್ನು ಪ್ಲೇ ಮಾಡುವ ಮೂಲಕ ನೀವು ಅದನ್ನು ತಪ್ಪಾಗಿ ಗ್ರಹಿಸಲು ಆಗುವುದಿಲ್ಲ. ಇದು ಅಗೌರವ,” ಎಂದು ಮಜೋಕ್ ಡೆಂಗ್ ಹೇಳಿದ್ದಾರೆ.
ಐತಿಹಾಸಿಕ ಗೆಲುವು
ಪಂದ್ಯದಲ್ಲಿ ದೇಶವು ಪೋರ್ಟೊ ರಿಕೊ ವಿರುದ್ಧ 90-79 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಇದು ದೇಶದ ಪಾಲಿಗೆ ಮೊದಲ ಒಲಿಂಪಿಕ್ ವಿಜಯವಾಗಿದೆ. ಅಂತರ್ಯುದ್ಧದಿಂದ ಹೊರಬಂದು 2011ರಲ್ಲಿ ದಕ್ಷಿಣ ಸೂಡಾನ್ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.
ಇದಕ್ಕೂ ಮುನ್ನ ಜುಲೈ 26ರ ಶುಕ್ರವಾರದಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ, ದಕ್ಷಿಣ ಕೊರಿಯಾದ ಕ್ರೀಡಾಪಟುಗಳನ್ನು "ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ" ಎಂದು ತಪ್ಪಾಗಿ ಪರಿಚಯಿಸಲಾಗಿತ್ತು. ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾದ ಅಧಿಕೃತ ಹೆಸರು ಹೇಳಿದ್ದಕ್ಕೆ ಸಂಘಟಕರು ಕ್ಷಮೆ ಯಾಚಿಸಿದ್ದರು.
“ಉದ್ಘಾಟನಾ ಸಮಾರಂಭದ ನೇರಪ್ರಸಾರ ಸಮಯದಲ್ಲಿ ದಕ್ಷಿಣ ಕೊರಿಯಾದ ತಂಡವನ್ನು ಪರಿಚಯಿಸುವಾಗ ಆದ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ” ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ತನ್ನ ಅಧಿಕೃತ ಕೊರಿಯನ್ ಭಾಷೆಯ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2ನೇ ಪದಕ ಗೆದ್ದ ಮನು ಭಾಕರ್; ಶೂಟಿಂಗ್ನಲ್ಲಿ ಸರಬ್ಜೋತ್ ಸಿಂಗ್ ಜೊತೆಗೆ ಕಂಚಿನ ಪದಕ