Year in Review 2024: ಒಲಿಂಪಿಕ್ಸ್, ಟಿ20 ವಿಶ್ವಕಪ್ ಸೇರಿ ಮತ್ತಷ್ಟು; ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪ್ರದರ್ಶನದ ಮೆಲುಕು
ಕ್ರೀಡಾಕ್ಷೇತ್ರದಲ್ಲಿ ಭಾರತವು ಮತ್ತೊಂದು ಮಹತ್ವಪೂರ್ಣ ವರ್ಷವನ್ನು ಪೂರೈಸಿದೆ. ಕೆಲವೊಂದು ಸಾಧಕರು, ಹೊಸ ಪ್ರತಿಭೆಗಳ ಉದಯ ಮಾತ್ರವಲ್ಲದೆ, ಸ್ಮರಣೀಯ ಗೆಲುವು ದಾಖಲೆಗಳು ಈ ವರ್ಷ ಕ್ರೀಡಾಭಿಮಾನಿಗಳ ಖುಷಿ ಹೆಚ್ಚಿಸಿತು. 2024ರಲ್ಲಿ ಭಾರತದ ಕ್ರೀಡಾಕ್ಷೇತ್ರದ ಪ್ರಮುಖ ಸಾಧನೆಗಳ ಸಂಕ್ಷಿಪ್ತ ವರದಿ ಇಲ್ಲಿದೆ.
ಹೊಸ ವರ್ಷ ಬರುತ್ತಿದ್ದಂತೆಯೇ ಹಳೆಯ ನೆನಪನ್ನು ಮರೆಯಯವವರೇ ಹೆಚ್ಚು. ಇನ್ನೇನು 2024 ಮುಗಿಯಲು 15 ದಿನಗಳು ಮಾತ್ರವೇ ಉಳಿದಿದೆ. ಈ ವರ್ಷ ಭಾರತದ ಕ್ರೀಡಾಕ್ಷೇತ್ರಕ್ಕೆ ಮರೆಯಾಲಾಗದ ವರ್ಷ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಒಂದೆಡೆಯಾದರೆ, ಕ್ರಿಕೆಟ್‌ನಲ್ಲಿ ಟಿ20 ವಿಶ್ವಕಪ್ ಗೆದ್ದ ಮಹತ್ವದ ವರ್ಷ. ಚೆಸ್ ಆಟಗಾರ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು. ಇಷ್ಟೇ ಅಲ್ಲದೆ ಕ್ರೀಡಾಲೋಕದಲ್ಲಿ ಹಲವು ಮಹತ್ವಪೂರ್ಣ ವಿದ್ಯಮಾನಗಳು ನಡೆದವು. ಇವೆಲ್ಲದರ ಮೆಲುಕು ಹಾಕೋಣ. ಇಲ್ಲಿ 2024 ಪ್ರಮುಖ ಕ್ರೀಡಾ ಸಾಧಕರ ಹಾಗೂ ಸಾಧನೆಯ ಸಂಕ್ಷಿಪ್ತ ಚಿತ್ರಣ ನೀಡಲಾಗಿದೆ.
ಒಲಿಂಪಿಕ್ಸ್ ಪದಕ ಗೆಲುವು
ಈ ವರ್ಷ ನಡೆದ ಪ್ರಮುಖ ಜಾಗತಿಕ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಸ್. ಇದರಲ್ಲಿ ಭಾರತದ ಸಾಧನೆಯೇ ಅಮೋಘ. ಒಟ್ಟು ಆರು ಪದಕಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿತು. ಇದರಲ್ಲಿ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟರು. ಒಲಿಂಪಿಕ್ ಶೂಟಿಂಗ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೆ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು.
ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಗೆದ್ದರೆ, ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್, ಈ ಸಾಧನೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಇದೇ ವೇಳೆ ಮನು ಭಾಕರ್ ಜತೆಗೆ ಸರ್ಬ್ಜೋತ್ ಸಿಂಗ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚು ಸಾಧನೆ ಮಾಡಿದರು. ಮತ್ತೊಂದೆಡೆ ಸ್ವಪ್ನಿಕ್ ಕುಸಾಲೆ ಕೂಡಾ ಶೂಟಿಂಗ್ ಕಂಚು ತಮ್ಮದಾಗಿಸಿಕೊಂಡರು. ಪುರುಷರ ಹಾಕಿ ತಂಡ ಮತ್ತೊಮ್ಮೆ ಐತಿಹಾಸಿಕ ಕಂಚು ತನ್ನದಾಗಿಸಿಕೊಂಡಿತು.
ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕ
ಇದೇ ವೇಳೆ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಭಾರತದ ಸಾಧನೆ ಅಮೋಘ. ಒಟ್ಟು 29 ಪದಕಗಳನ್ನು ಭಾರತದ ಪ್ಯಾರಾಲಿಂಪಿಯನ್‌ಗಳು ಗೆದ್ದು ಬೀಗಿದರು. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಪದಕಗಳು. ಇದು ಈವರೆಗಿನ ದಾಖಲೆಯಾಗಿದೆ.
ಟಿ20 ವಿಶ್ವಕಪ್ ಗೆಲುವಿನ ಹರ್ಷ
ಜೂನ್ 29 ಭಾರತದ ಪಾಲಿಗೆ ಸ್ಮರಣೀಯ ದಿನ. ಆವರೆಗೆ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವಲ್ಲಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಆ ದಿನ ಖುಷಿಯಿಂದ ಪನ್ನೀರು ಸುರಿಸಿದರು. ವೆಸ್ಟ್ ಇಂಡೀಸ್‌ನ ಬಾರ್ಬಡೋಸ್ ಮೈದಾನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಬೀಗಿತು. ಸೂರ್ಯಕುಮಾರ್ ಯಾದವ್ ಹಿಡಿದ ಆ ಅಮೋಘ ಕ್ಯಾಚ್ ಅನ್ನು ಭಾರತೀಯರು ಮರೆಯಲು ಸಾಧ್ಯವೇ? ಹಾರ್ದಿಕ್ ಪಾಂಡ್ಯ ಪಡೆದ ನಿರ್ಣಾಯಕ ವಿಕೆಟ್, ಗೆಲುವಿನ ಬಳಿಕ ಸುರಿಸಿದ ಕಣ್ಣೀರು, ರೋಹಿತ್ ಶರ್ಮಾ ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್‌ನ ಮಣ್ಣಿನ ರುಚಿಯನ್ನು ನೋಡಿದ ಆ ಅಪರೂಪದ ಕ್ಷಣ ಈಗಲೂ ಭಾರತೀಯರ ಕಣ್ಣ ಮುಂದಿದೆ. ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ರೋಚಕವಾಗಿ ಮಣಿಸಿ, ಭಾರತವು ಎರಡನೇ ಚುಟುಕು ವಿಶ್ವಕಪ್ ತನ್ನದಾಗಿಸಿಕೊಂಡಿತು.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಡಿ ಗುಕೇಶ್
ಡಿ ಗುಕೇಶ್ ಪಾಲಿಗೆ ಇದು ಬಂಗಾರದ ವರ್ಷ. 18ರ ಹರೆಯದ ಚೆನ್ನೈನ ಚೆಸ್ ಆಟಗಾರ, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾನೆ. ಅದು ಕೂಡಾ ಮಾಜಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಮಣಿಸಿ ಈ ಸಾಧನೆ ಮಾಡಿದ್ದು ಇನ್ನೂ ವಿಶೇಷ. ಅಂತಿಮ ಸುತ್ತಿನಲ್ಲಿ ರೋಚಕ ಗೆಲುವು ಸಾಧಿಸಿದ ಭಾರತೀಯ, ಚೆಸ್ ಚಾಂಪಿಯನ್‌ಶಿಪ್ ಗೆದ್ದ ಕೇವಲ ಎರಡನೇ ಭಾರತೀಯ ಆಟಗಾರ ಎಂಬುದು ವಿಶೇಷ. ಈ ಹಿಂದೆ ವಿಶ್ವನಾಥನ್ ಆನಂದ್ ಮಾತ್ರ ಈ ಸಾಧನೆ ಮಾಡಿದ್ದರು.
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ ಅವರು ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಗೆದ್ದರು. ತಮ್ಮ 43ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು. ಇದು ಭಾರತ ಟೆನಿಸ್ ಪಾಲಿಗೆ ಐತಿಹಾಸಿಕ ಗೆಲುವು.