ಸಾಕ್ಷಿ, ಬಜರಂಗ್, ವಿನೇಶ್ ವಿರುದ್ಧ ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ; ರಸ್ಲಿಂಗ್ ಚಟುವಟಿಗೆ ಪುನರಾರಂಭಕ್ಕೆ ಒತ್ತಾಯ
ಕನ್ನಡ ಸುದ್ದಿ  /  ಕ್ರೀಡೆ  /  ಸಾಕ್ಷಿ, ಬಜರಂಗ್, ವಿನೇಶ್ ವಿರುದ್ಧ ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ; ರಸ್ಲಿಂಗ್ ಚಟುವಟಿಗೆ ಪುನರಾರಂಭಕ್ಕೆ ಒತ್ತಾಯ

ಸಾಕ್ಷಿ, ಬಜರಂಗ್, ವಿನೇಶ್ ವಿರುದ್ಧ ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ; ರಸ್ಲಿಂಗ್ ಚಟುವಟಿಗೆ ಪುನರಾರಂಭಕ್ಕೆ ಒತ್ತಾಯ

Wrestlers Protest: ಕಿರಿಯ ಕುಸ್ತಿಪಟುಗಳಿಗೆ ತರಬೇತಿ ಮತ್ತು ಶಿಬಿರಗಳನ್ನು ಪುನರಾರಂಭಿಸುವಂತೆ ನೂರಾರು ಯುವ ಕುಸ್ತಿಪಟುಗಳು ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನವದೆಹಲಿಯ ಜಂತರ್ ಮಂತರ್‌ನಲ್ಲಿ ಕಿರಿಯ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದರು
ನವದೆಹಲಿಯ ಜಂತರ್ ಮಂತರ್‌ನಲ್ಲಿ ಕಿರಿಯ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದರು (Ishant )

ಹಿರಿಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರನ್ನು ದೂಷಿಸಿ, ಯುವ ಕುಸ್ತಿಪಟುಗಳು ಧರಣಿ ಆರಂಭಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನವರಿ 3ರ ಬುಧವಾರ ಪ್ರತಿಭಟನೆ ನಡೆಸಿದ ನೂರಾರು ಯುವ ರಸ್ಲರ್‌ಗಳು, ವಿವಿಧ ವಯೋಮಾನದ ಸ್ಪರ್ಧಿಗಳಿಗೆ ತರಬೇತಿ ಮತ್ತು ಪಂದ್ಯಾವಳಿಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ದೇಶದಲ್ಲಿ ಕುಸ್ತಿ ಚಟುವಟಿಕೆಗಳು ನಿಲ್ಲಲು, ವರ್ಷದ ಹಿಂದೆ ಪ್ರತಿಭಟನೆ ನಡೆಸಿದ ಹಿರಿಯ ಕುಸ್ತಿಪಟುಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಒಂದು ವರ್ಷದ ಹಿಂದೆ ಹಿರಿಯ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಬಜರಂಗ್ ಪೂನಿಯಾ, ಸಾಕ್ಷಿ ಮತ್ತು ವಿನೇಶ್ ಸೇರಿದಂತೆ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದ ದೆಹಲಿಯ ಜಂತರ್ ಮಂತರ್‌ನಲ್ಲೇ ಯುವ ಕುಸ್ತಿಪಟುಗಳು ಧರಣಿ ನಡೆಸಿದ್ದಾರೆ.

ಇದನ್ನೂ ಓದಿ | PKL 10: ಪುಣೇರಿ ಪಲ್ಟನ್‌ ಗೆಲುವಿನ ನಾಗಾಲೋಟ; ಹರಿಯಾಣ ಮಣಿಸಿದ ಹಾಲಿ ಚಾಂಪಿಯನ್‌ ಜೈಪುರ

ಸದ್ಯ ಬ್ರಿಜ್‌ ಭೂಷಣ್ ಪ್ರಕರಣವು ದೆಹಲಿ ನ್ಯಾಯಾಲಯದಲ್ಲಿದೆ. ಆ ಬಳಿಕ ಡಬ್ಲ್ಯೂಎಫ್‌ಐ ಚುನಾವಣೆ ನಡೆದು ಬ್ರಿಜ್‌ ಭೂಷಣ್‌ ಅವರ ಆಪ್ತ ಸಂಜಯ್ ಸಿಂಗ್ ನೂತನ ಅಧ್ಯಕ್ಷರಾಗಿ ಚುನಾಯಿತರಾದರು. ಆದರೆ, ಹೊಸದಾಗಿ ಆಯ್ಕೆಯಾದ ಸಂಸ್ಥೆಯನ್ನು ಕೇಂದ್ರ ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ. ಹೀಗಾಗಿ ಒಲಿಂಪಿಕ್ಸ್‌ ಗೇಮ್ಸ್‌ ಇರುವ ಮಹತ್ವದ ವರ್ಷದಲ್ಲಿ ಕುಸ್ತಿ ಚಟುವಟಿಕೆಗಳು ನಿಂತು ಹೋಗಿದೆ.

ಯುವ ಕುಸ್ತಿಪಟುಗಳ ಆರೋಪ

ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಿಂದ ಬಂದ ಯುವ ಕುಸ್ತಿಪಟುಗಳು ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ಪ್ರತಿಭಟನೆ ಆರಂಭಿಸಿದರು. ಹಿರಿಯ ಕುಸ್ತಿಪಟುಗಳಾದ ಬಜರಂಗ್, ಸಾಕ್ಷಿ ಮತ್ತು ವಿನೇಶ್ ಅವರ ಪ್ರತಿಭಟನೆಯಿಂದಾಗಿ ದೇಶದಲ್ಲಿ ಕಳೆದ ಒಂದು ವರ್ಷದಿಂದ ಕುಸ್ತಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ದೂಷಿಸಿದ್ದಾರೆ. ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಬಾಗ್ಪತ್‌ನ ಆರ್ಯ ಸಮಾಜ ಅಖಾಡ ಮತ್ತು ದೆಹಲಿಯ ಹೊರವಲಯದಲ್ಲಿರುವ ನರೇಲಾದ ವೀರೇಂದ್ರ ಕುಸ್ತಿ ಅಕಾಡೆಮಿಗೆ ಸೇರಿದವರಾಗಿದ್ದಾರೆ.

ಪ್ರತಿಭಟನೆಯಲ್ಲಿ ಅಂಡರ್-23 ವಿಶ್ವ ಚಾಂಪಿಯನ್ ರೀತಿಕಾ ಹೂಡಾ, ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಗ್ರೀಕೋ-ರೋಮನ್ ಕುಸ್ತಿಪಟು ಸುನಿಲ್ ಕುಮಾರ್ ಕೂಡಾ ಸೇರಿದ್ದರು.

ಕಳೆದ ವರ್ಷದ ನಡೆದ ಪ್ರತಿಭಟನೆಯಿಂದಾಗಿ, 2023ರಲ್ಲಿ ಕಿರಿಯ ಕುಸ್ತಿಪಟುಗಳಿಗೆ ಯಾವುದೇ ರಾಷ್ಟ್ರೀಯ ಶಿಬಿರ ಅಥವಾ ಚಾಂಪಿಯನ್ಶಿಪ್ ನಡೆಸಿಲ್ಲ. ಇದಕ್ಕೆಲ್ಲ ಹಿರಿಯರ ಪ್ರತಿಭಟನೆಯೇ ಕಾರಣ ಎಂದು ಇವರು ಆರೋಪಿಸಿದ್ದಾರೆ. ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಪುನಿಯಾ, ಫೋಗಟ್ ಮತ್ತು ಮಲಿಕ್ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ಬಜರಂಗ್, ಸಾಕ್ಷಿ ಮತ್ತು ವಿನೇಶ್ ಅವರ ವಿರುದ್ಧ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಅಂಡರ್ 20 ರಾಷ್ಟ್ರೀಯ ಶಿಬಿರ

ಕ್ರೀಡಾ ಸಚಿವಾಲಯವು 10 ದಿನಗಳಲ್ಲಿ ಡಬ್ಲ್ಯುಎಫ್ಐ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.

ಮೂರು ಗಂಟೆಗಳ ಪ್ರತಿಭಟನೆಯ ನಂತರ, ಕುಸ್ತಿಯ ಜವಾಬ್ದಾರಿ ಹೊತ್ತಿರುವ ತಾತ್ಕಾಲಿಕ ಸಮಿತಿಯು ಆರು ವಾರಗಳಲ್ಲಿ ಗ್ವಾಲಿಯರ್‌ನಲ್ಲಿ ಅಂಡರ್ 15 ಮತ್ತು ಅಂಡರ್ 20 ರಾಷ್ಟ್ರೀಯ ಶಿಬಿರ ನಡೆಸುವುದಾಗಿ ಘೋಷಿಸಿದೆ.

ಸಾಕ್ಷಿ ಮಲಿಕ್‌ ಪ್ರತಿಭಟನೆ

ಪ್ರತಿಭಟನೆ ಕುರಿತು ದೆಹಲಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಾಕ್ಷಿ, ಕಿರಿಯ ಕುಸ್ತಿಪಟುಗಳ ಸೋಲಿಗೆ ತಮ್ಮನ್ನು ಗುರಿಯಾಗಿಸುವುದು ಅನ್ಯಾಯ ಎಂದು ಹೇಳಿದರು. “ಕಿರಿಯ ಕುಸ್ತಿಪಟುಗಳು ತೊಂದರೆ ಅನುಭವಿಸುವುದನ್ನು ನಾವು ಬಯಸುವುದಿಲ್ಲ. ಆದರೆ ಅವರ ಸೋಲಿಗೆ ನಮ್ಮನ್ನು ದೂಷಿಸುವುದು ಸರಿಯಲ್ಲ” ಎಂದು ಹೇಳಿದರು.

ಇದನ್ನೂ ಓದಿ | ವರ್ಷದ ಬಳಿಕ ಸಿಂಗಲ್ಸ್‌ ಗೆದ್ದ ರಫೆಲ್ ನಡಾಲ್; ಗಾಯದ ಬಳಿಕ ಗೆಲುವಿನ ಲಯ ಕಂಡ ಗ್ರ್ಯಾಂಡ್ ಸ್ಲಾಮ್‌ ದೊರೆ

ಅತ್ತ ಅಮಾನತುಗೊಂಡ ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್, “ನಾನು ಹಲವು ದಿನಗಳಿಂದ ಕ್ರೀಡಾ ಸಚಿವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಯಶಸ್ವಿಯಾಗಲಿಲ್ಲ. ಸದ್ಯ ನ್ಯಾಯಾಲಯದ ಮೆಟ್ಟಿಲೇರುವುದನ್ನು ಬಿಟ್ಟರೆ ನನಗೆ ಬೇರೆ ಆಯ್ಕೆಯಿಲ್ಲ. ಒಂದೆರಡು ದಿನಗಳಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.