Video: ಕಾರವಾರದಲ್ಲಿ ಕಾಳಿ ನದಿ ಸೇತುವೆ ಕುಸಿತ, ನದಿ ನೀರಿನಲ್ಲಿ ಕೊಚ್ಚಿ ಹೋದ ಲಾರಿ, ಚಾಲಕನ ರಕ್ಷಣೆ
ಕಾರವಾರ: ಕಾಳಿ ನದಿಯ ಸದಾಶಿವಗಡ ಸೇತುವೆಗಳ ಪೈಕಿ ಒಂದು ಸೇತುವೆ ಕುಸಿತು ನದಿ ನೀರಿನ ಜೊತೆಗೆ ಕೊಚ್ಚಿಕೊಂಡು ಹೋಗಿದೆ. ಈ ಸೇತುವೆಯಲ್ಲಿ ಆ ಸಂದರ್ಭದಲ್ಲಿ ಸಂಚರಿಸುತ್ತಿದ್ದ ಲಾರಿ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ. ಲಾರಿ ಚಾಲಕ ಮುರುಗನ್‌ನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕಾರವಾರದಿಂದ ಗೋವಾಕ್ಕೆ ಹಾಗೂ ಗೋವಾದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳಿದ್ದು, ಅವುಗಳನ್ನು ಅದು ಸದಾಶಿವಗಢ ಸೇತುವೆ, ಕೋಡಿಯಾಭಾಗ್ ಸೇತುವೆ ಎನ್ನುತ್ತಾರೆ. ಈ ಪೈಕಿ ಗೋವಾದಿಂದ ಕಾರವಾರಕ್ಕೆ ಬರುವ ಸೇತುವೆ ಹಳೆಯದಾಗಿತ್ತು. ಅದೇ ಸೇತುವೆ ಈಗ ಕುಸಿದು ಹೋಗಿರುವುದು. 1982ರಲ್ಲಿ ಈ ಸೇತುವೆ ನಿರ್ಮಾಣಗೊಂಡಿದ್ದು, ಶಿಥಿಲವಾಗಿತ್ತು. ನಿರ್ವಹಣೆ ಮಾಡಲಾಗಿತ್ತಾದರೂ, ಅದು ಇತ್ತೀಚಿನ ಮಳೆಗೆ ಇನ್ನಷ್ಟು ಶಿಥಿಲವಾಗಿತ್ತು. ಮಂಗಳವಾರ ಮಧ್ಯರಾತ್ರಿ ಕಾರು ಹಾಗೂ ಬೈಕ್ ಸೇತುವೆ ದಾಟಿದ ಬಳಿಕ ಖಾಲಿ ಲಾರಿ ಅದರಲ್ಲಿ ಬಂದಿತ್ತು ಆಗಲೇ ಸೇತುವೆ ಕುಸಿದೆ.
ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯ ಮೀನುಗಾರರು ಇದನ್ನು ಗಮನಿಸಿ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಿದರು.