ವಿಜಯಪುರದ ಲಚ್ಯಾಣದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಸಾತ್ವಿಕ್ ರಕ್ಷಣೆ; ಹೇಗಿತ್ತು ಕಾರ್ಯಾಚರಣೆ; ವಿಡಿಯೊ
ಸಾವಿರಾರು ಜನರ ಪ್ರಾರ್ಥನೆಯ ಫಲವಾಗಿ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ 14 ತಿಂಗಳ ಸಾತ್ವಿಕ್‌ನನ್ನು ಯಾವುದೇ ತೊಂದರೆಯಾಗದೆ ಹೊರ ತೆಗೆಯಲಾಗಿದೆ. ಅದರ ವಿಡಿಯೊ ನೋಡಿ
ವಿಜಯಪುರ: ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಳಗೆ ಬಿದ್ದಿದ್ದ ಒಂದೂವರೆ ವರ್ಷದ ಬಾಲಕ ಸಾತ್ವಿಕ ಜುನಗೊಂಡ ಸಾವನ್ನೇ ಗೆದ್ದು ಬಂದಿದ್ದಾನೆ. ಆಟವಾಡಲು ಹೋಗಿ ಆಯತಪ್ಪಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮಗುವಿಗಾಗಿ ಸತತ 22 ಗಂಟೆ ಕಾಲ ನಡೆಸಿದ ಕಾರ್ಯಾಚರಣೆ ಫಲ ಕೊಟ್ಟಿದೆ. 16 ಅಡಿ ಕೆಳಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲನನ್ನ ಜೀವಂತವಾಗಿ ಹೊರತೆಗೆಯುವಲ್ಲಿ ರಕ್ಷಣಾ ಪಡೆ ಯಶಸ್ಸು ಆಗಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಮಗುವನ್ನು ಕೊಳವೆಬಾವಿಯಿಂದ ಹೊರ ತೆಗೆಯುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದವರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಆಮ್ಲಜನಕದ ಸಹಾಯದಿಂದಲೇ ಮಗುವಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮಗು ಕೊಳವೆಬಾವಿಗೆ ಬಿದ್ದಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸತತ ಶ್ರಮ ವಹಿಸಿ ಮಗುವವನ್ನು ಜೀವಂತವಾಗಿ ಉಳಿಸಿದೆ. ರಕ್ಷಣಾ ಕಾರ್ಯಾಚರಣೆ ಹೇಗಿತ್ತು ಅನ್ನೋದರ ವಿಡಿಯೊವನ್ನು ಇಲ್ಲಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ, ರಾಜ್ಯ ವಿಪತ್ತು ನಿರ್ವಹಣೆ, ಅಗ್ನಿಶಾಮಕ, ಪೊಲೀಸ್, ಕಂದಾಯ, ಜಿಲ್ಲಾಡಳಿತ ಹೀಗೆ ಎಲ್ಲರ ಅವಿರತ ಶ್ರಮ, ಲಕ್ಷಾಂತರ ಜನರ ಪ್ರಾರ್ಥನೆ ಫಲಿಸಿದೆ. 22 ಗಂಟೆಗಳ ಕಾಲ ನಡೆದ ಅವಿರತ ಕಾರ್ಯಾಚರಣೆಯಲ್ಲಿ ಜೆಸಿಬಿ, ಹಿಟಾಚಿಗಳು ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿದ್ದವು. 37 ಜನ ಎನ್‌ಡಿಆರ್‌ಎಫ್, 40 ಜನರ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಯ ಭಾಗವಾಯಿತು. ಕೊಳವೆ ಬಾವಿಯತ್ತ ಆಡಲು ಹೋಗಿದ್ದ ಸಾತ್ವಿಕ್ ಬುಧವಾರ (ಏಪ್ರಿಲ್ 3) ಸಂಜೆ 5-25 ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದ. ಕೂಡಲೇ ಸ್ಥಳೀಯರ ನೆರವೊಂದಿಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸುಮಾರು ಅರ್ಧ-ಮುಕ್ಕಾಲು ಗಂಟೆಯಲ್ಲೇ ಪೊಲೀಸರು, ಅಗ್ನಿಶಾಮಕ ಸೇವೆಯ ಸಿಬ್ಬಂದಿ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಲೋಕಸಭೆ ಚುನಾವಣೆಯ ಬ್ಯುಸಿಯ ನಡುವೆ ಇಡೀ ಜಿಲ್ಲಾಡಳಿತ ಮೊದಲು ಮಗುವಿನ ರಕ್ಷಣೆಗೆ ಆದ್ಯತೆ ನೀಡಿತ್ತು. ಮಗುವನ್ನು ರಕ್ಷಿಸಿರುವ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.