ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಬಿಡುಗಡೆಯಾದ ಒಂದು ಗಂಟೆಯಲ್ಲೇ ಸೋಲ್ಡ್ ಔಟ್ ಆಗಿವೆ. ಆದರೆ ಅನೇಕರು ತಮಗೆ ಟಿಕೆಟ್ ಸಿಗದೇ ಇರುವುದಕ್ಕೆ ಬೇಸರಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಫೆಬ್ರವರಿ 23ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಭಾರತದ ಪಂದ್ಯಗಳಿಗೆ ಟಿಕೆಟ್ ಬಿಡುಗಡೆಯಾದ ಕ್ಷಣಾರ್ಧದಲ್ಲಿ ಪಾಕ್ ಎದುರಿನ ಪಂದ್ಯದ ಟಿಕೆಟ್‌ಗಳು ಮಾರಾಟವಾಗಿವೆ.
ಫೆಬ್ರವರಿ 19 ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಫೆಬ್ರವರಿ 20ರಿಂದ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಉಳಿದ ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ.
ಫೆಬ್ರವರಿ 3ರಂದು ಐಸಿಸಿಯು ಭಾರತದ ಎಲ್ಲಾ ಪಂದ್ಯಗಳ ಟಿಕೆಟ್ಗಳನ್ನು ಬಿಡುಗಡೆ ಮಾಡಿತು. ಆನ್ಲೈನ್ ಮತ್ತು ಆಫ್ಲೈನ್ ಖರೀದಿಗೆ ಅವಕಾಶ ನೀಡಿತ್ತು. ಆದರೆ, ಪಾಕ್ ವಿರುದ್ಧದ ಪಂದ್ಯದ ಟಿಕೆಟ್‌ಗಳು ಬಿಡುಗಡೆಗೊಂಡ ಗಂಟೆಯಲ್ಲೇ ಸೋಲ್ಡ್ ಔಟ್ ಆಗಿದ್ದು, ಪಂದ್ಯದ ಕಾವು ಹೆಚ್ಚಿಸುವಂತೆ ಮಾಡಿದೆ.
ಪಾಕ್ ವಿರುದ್ಧದ ಮಾತ್ರವಲ್ಲದೆ ಭಾರತದ ಉಳಿದ ಪಂದ್ಯಗಳ ಟಿಕೆಟ್ಗಳೂ ಮಾರಾಟವಾಗಿದೆ ಎಂದು ವರದಿಯಾಗಿದೆ. ದುಬೈನಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ದರ 125 ಎಇಡಿ ಎಂದರೆ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹ್ಯಾಮ್ನಿಂದ ಆರಂಭವಾಗಿತ್ತು. ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ 2900 ರೂಪಾಯಿ.
ಪಂದ್ಯದ ಟಿಕೆಟ್ಗಳನ್ನು ಆನ್ಲೈನ್ ಅಥವಾ ನೇರವಾಗಿ ದುಬೈ ಮೈದಾನದ ಟಿಕೆಟ್ ಕೌಂಟರ್ನಿಂದಲೂ ಖರೀದಿಸಲು ಅವಕಾಶ ನೀಡಸಲಾಗಿತ್ತು. ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಲು ಲಿಂಕ್ ಇಲ್ಲಿದೆ https://www.iccchampionstrophy.com/tickets).
ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ, ಫೆಬ್ರವರಿ 23 ರಂದು ಪಾಕಿಸ್ತಾನ ವಿರುದ್ಧ, ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನ ಲೀಗ್ ಪಂದ್ಯಗಳನ್ನಾಡಲಿದೆ.
ಭಾರತ ಸೆಮಿಫೈನಲ್ ಪ್ರವೇಶ ಮಾಡಿದರೆ ಮತ್ತು ಸೆಮೀಸ್ ಗೆದ್ದು ಫೈನಲ್ಗೆ ಅರ್ಹತೆ ಪಡೆದುಕೊಂಡರೂ ದುಬೈನಲ್ಲೇ ಆಡಲಿದೆ.