ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಅವರು ಪ್ರಸ್ತುತ ರಣಜಿ ಟ್ರೋಫಿಯಲ್ಲಿ ನಿರತರಾಗಿದ್ದಾರೆ. ಆ ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ರಣಜಿ ಟ್ರೋಫಿಯಲ್ಲಿ ಡೆಲ್ಲಿ ತಂಡದ ಪರ ಆಡುತ್ತಿರುವ ರಿಷಭ್ ಪಂತ್ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿರುವ ಪಂತ್, ವರ್ಲ್ಡ್ ಪಿಕಲ್ ಬಾಲ್ ಲೀಗ್ (WPBL) ಸೇರಿದ್ದಾರೆ. ಆದರೆ, ಆಟಗಾರನಾಗಿ ಅಲ್ಲ, ಫ್ರಾಂಚೈಸಿಯ ಸಹ-ಮಾಲೀಕನಾಗಿ!
ವಿಶ್ವ ಪಿಕಲ್ ಬಾಲ್ ಲೀಗ್ ಇಂದಿನಿಂದ (ಜನವರಿ 24) ಆರಂಭವಾಗಲಿದೆ. ಈ ಲೀಗ್‌ನಲ್ಲಿ ಒಟ್ಟು 6 ತಂಡಗಳು ಸ್ಪರ್ಧಿಸಲಿವೆ. ಚೆನ್ನೈ ಸೂಪರ್ ಚಾಂಪ್ಸ್, ಬೆಂಗಳೂರು ಜವಾನ್ಸ್ ಮತ್ತು ಮುಂಬೈ ಪಿಕಲ್ ಪವರ್ ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುತ್ತಿವೆ.
ರಿಷಭ್ ಪಂತ್ ಅವರು ಮುಂಬೈ ಪಿಕಲ್ ಪವರ್ ಫ್ರಾಂಚೈಸಿಯ ಸಹ-ಮಾಲೀಕನ ಪಾತ್ರ ನಿರ್ವಹಿಸಿದ್ದಾರೆ. ನಾನು ಪಿಕಲ್ ಬಾಲ್ ಆಟದಲ್ಲಿ ತುಂಬಾ ಆಸಕ್ತಿ ಹೊಂದಿದ್ದು, ಆಟವನ್ನ ಜನಪ್ರಿಯಗೊಳಿಸುವ ಉದ್ದೇಶದಿಂದ ನಾನು ಈ ಲೀಗ್‌ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ನಟಿ ಸಮಂತಾ ಅವರು ಸಹ ಈ ಲೀಗ್‌ನಲ್ಲಿ ಹೂಡಿಕೆ ಮಾಡಿದ್ದು, ಚೆನ್ನೈ ಸೂಪರ್ ಚಾಂಪ್ಸ್ ಫ್ರಾಂಚೈಸ್ ಅನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಜೆರ್ಸಿಯನ್ನೂ ಬಿಡುಗಡೆ ಮಾಡಿದ್ದರು.
ಇದೀಗ ಸಮಂತಾ ಜೊತೆಗೆ ರಿಷಭ್ ಪಂತ್ ಕೂಡ ಇದೇ ಪಿಕಲ್ಬಾಲ್ ಲೀಗ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಟಾರ್ಗಳೇ ಹೆಚ್ಚು ಹೂಡಿಕೆ ಮಾಡಿರುವ ಕಾರಣ ಪಿಕಲ್ಬಾಲ್ ಇನ್ನಷ್ಟು ಜನಪ್ರಿಯವಾಗುವ ನಿರೀಕ್ಷೆ ಇದೆ.
2017ರಲ್ಲಿ ಟಿ20ಐ ಕ್ರಿಕೆಟ್ಗೆ ಕಾಲಿಟ್ಟ ರಿಷಭ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸಮರ್ಥ ವಿಕೆಟ್ ಕೀಪಿಂಗ್‌ನಿಂದ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ಛಾಪು ಮೂಡಿಸಿದ್ದು, ಐತಿಹಾಸಿಕ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಐಪಿಎಲ್ನಲ್ಲಿ ರಿಷಭ್, ಲಕ್ನೋ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವರ್ಷ ಡೆಲ್ಲಿನ ಕ್ಯಾಪಿಟಲ್ಸ್ ತಂಡದಲ್ಲಿದ್ದ ರಿಷಭ್, ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಲಿದ್ದಾರೆ.