ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ (ಫೆಬ್ರವರಿ 14) ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ.
ಟೂರ್ನಿಯಲ್ಲಿ ತಂಡಗಳು ಲೀಗ್ ಹಂತದಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 2 ಬಾರಿ ಮುಖಾಮುಖಿಯಾಗಲಿವೆ. ಗುಂಪು ಹಂತದಲ್ಲಿ ಎಲ್ಲಾ ಐದು ತಂಡಗಳು ತಲಾ 8 ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ.
ಪ್ರಸಕ್ತ ಆವೃತ್ತಿಯಲ್ಲಿ ಕರ್ನಾಟಕದ ಆಟಗಾರ್ತಿಯರೂ ಗಮನ ಸೆಳೆದಿದ್ದಾರೆ. ನಾಲ್ವರು ಕನ್ನಡತಿಯರು ಡಬ್ಲ್ಯುಪಿಎಲ್ ಕಣದಲ್ಲಿದ್ದಾರೆ. ಯಾರು, ಯಾವ ತಂಡದ ಪರ ಆಡುತ್ತಿದ್ದಾರೆ ಎನ್ನುವುದರ ವಿವರ ಈ ಮುಂದಿದೆ.
ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ತವರು ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವ ಆರ್ಸಿಬಿ ತಂಡದಲ್ಲಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲೂ ಇದೇ ತಂಡದ ಪರ ಕಣಕ್ಕಿಳಿದಿದ್ದ ಶ್ರೇಯಾಂಕಾ ಟ್ರೋಫಿ ಗೆಲ್ಲುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.
ಅನುಭವಿ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಮತ್ತು ವೃಂದಾ ದಿನೇಶ್ ಅವರು ಒಂದೇ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಇಬ್ಬರು ಯುಪಿ ವಾರಿಯರ್ಸ್ ತಂಡದಲ್ಲಿದ್ದಾರೆ.
ಇತ್ತೀಚೆಗೆ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕಿ ಆಗಿದ್ದ ಬೆಂಗಳೂರಿನ ನಿಕಿ ಪ್ರಸಾದ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಇದೀಗ ಅವರು ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.