ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್ ಗೆಲುವು ದಾಖಲಿಸಿ ದಾಖಲೆಯ ಮೂರನೇ ಪ್ರಶಸ್ತಿಗೆ ಮುತ್ತಿಕ್ಕಿದೆ.
ಟೂರ್ನಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ಈ ಟ್ರೋಫಿ ಗೆಲುವಿನೊಂದಿಗೆ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಹೌದು, ಅಯ್ಯರ್ ಪಾಲಿಗೆ ಈ ಟ್ರೋಫಿ ಒಂದೇ ವರ್ಷದಲ್ಲಿ ದೊರೆತ 5ನೇ ಪ್ರಶಸ್ತಿಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ 3, ಐಪಿಎಲ್ ನಲ್ಲಿ ಒಂದು, ಇದೀಗ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ.
ರಣಜಿ ಚಾಂಪಿಯನ್: 2023-24ರ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಮುಂಬೈ ಚಾಂಪಿಯನ್ ಆಗಿತ್ತು. 2024ರ ಮಾರ್ಚ 10ರಿಂದ 14ರ ತನಕ ಪಂದ್ಯ ನಡೆದಿತ್ತು. ಅಜಿಂಕ್ಯ ರಹಾನೆ ನೇತೃತ್ವದ ತಂಡದಲ್ಲಿ ಅಯ್ಯರ್ ಕೂಡ ಸ್ಥಾನ ಪಡೆದಿದ್ದರು.
ಐಪಿಎಲ್ ಚಾಂಪಿಯನ್; ರಣಜಿ ಮುಗಿದ ಐಪಿಎಲ್ ಅಖಾಡದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಚಾಂಪಿಯನ್ ಮಾಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ್ದ ಕೆಕೆಆರ್ ಮೂರನೇ ಪ್ರಶಸ್ತಿಗೆ ಮುತ್ತಿಕ್ಕಿತು.
ಇರಾನಿ ಕಪ್: ಅದೇ ವರ್ಷ ಅಕ್ಟೋಬರ್ 1ರಿಂದ 5ರತನಕ ನಡೆದ ಇರಾನಿ ಕಪ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಮುಂಬೈ ಟ್ರೋಫಿ ಜಯಿಸಿತ್ತು. ಆ ತಂಡದಲ್ಲೂ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ: 2024ರ ಡಿಸೆಂಬರ್ 15 ರಂದು ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ನಲ್ಲಿ ಮಧ್ಯ ಪ್ರದೇಶ ತಂಡವನ್ನು ಮಣಿಸಿದ ಮುಂಬೈ ಚಾಂಪಿಯನ್ ಆಗಿತ್ತು. ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕತ್ವ ವಹಿಸಿದ್ದರು. 2024ರಲ್ಲೇ ತಾನು ಗೆದ್ದ ನಾಲ್ಕನೇ ಟ್ರೋಫಿ ಇದಾಗಿತ್ತು.
ಚಾಂಪಿಯನ್ಸ್ ಟ್ರೋಫಿ: 2025ರ ಮಾರ್ಚ್ 9ರಂದು ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಚಾಂಪಿಯನ್ ಆಯಿತು. ರೋಹಿತ್ ಶರ್ಮಾ ಮುಂದಾಳತ್ವದ ಭಾರತ ತಂಡದಲ್ಲಿ ಅಯ್ಯರ್ ಕೂಡ ಸ್ಥಾನ ಪಡೆದಿದ್ದರು.
2024 ಮಾರ್ಚ 14ರಂದು ಮೊದಲ ಪ್ರಶಸ್ತಿ ಗೆದ್ದಿದ್ದ ಅಯ್ಯರ್ 2025ರ ಮಾರ್ಚ್ 9ರೊಳಗೆ ಅಣದರೆ ಒಂದು ವರ್ಷದೊಳಗೆ ಒಟ್ಟು ಐದು ಪ್ರಶಸ್ತಿಗಳಿಗೆ ಮುತ್ತಿಕ್ಕುವ ಮೂಲಕ ಗಮನ ಸೆಳೆದಿದ್ದಾರೆ.