ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಗೊಂಡ ಕೆಲವೇ ದಿನಗಳಲ್ಲಿ ಎ ಗುಂಪಿನಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿವೆ.
ಮತ್ತೊಂದೆಡೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಗುಂಪು ಹಂತದಿಂದಲೇ ಹೊರಬಿದ್ದಿವೆ. ಅದರಲ್ಲೂ ತನ್ನ ತವರಿನಲ್ಲೇ ಐಸಿಸಿ ಟೂರ್ನಿ ಆಯೋಜಿಸಿದ ಪಾಕಿಸ್ತಾನ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿಲ್ಲ.
ಹಾಗಿದ್ದರೆ ಭಾರತ ತಂಡವು ಸೆಮಿಫೈನಲ್ ಪಂದ್ಯ ಯಾವಾಗ ಆಡಲಿದೆ? ಯಾವ ತಂಡವನ್ನು ಎದುರಿಸಲಿದೆ ಎಂಬುದರ ವಿವರ ಇಂತಿದೆ.
ಮಾರ್ಚ್ 4 ರಂದು ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ ಕಣಕ್ಕಿಳಿಯಲಿದೆ. ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಜರುಗಲಿದೆ.
ಮಾರ್ಚ್ 2ರಂದು ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತರೂ ಗೆದ್ದರೂ ಮೊದಲ ಸೆಮಿಫೈನಲ್ನಲ್ಲೇ ಕಣಕ್ಕಿಳಿಯಲಿದೆ. ನ್ಯೂಜಿಲೆಂಡ್ ಎರಡನೇ ಸೆಮೀಸ್ನಲ್ಲಿ ಕಣಕ್ಕಿಳಿಯಲಿದೆ.
ಗ್ರೂಪ್ ಬಿನಲ್ಲಿ ಅಗ್ರಸ್ಥಾನ ಪಡೆಯುವ ತಂಡದ ವಿರುದ್ಧ ಮೊದಲ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಸೆಣಸಾಟ ನಡೆಸಲಿದೆ.
ಅದರಂತೆ ಭಾರತದ ಸೆಮಿಫೈನಲ್ ಎದುರಾಳಿ ಯಾರೆಂದು ಸ್ಪಷ್ಟ ಚಿತ್ರಣ ತಿಳಿಯಲು ಮಾರ್ಚ್ 1 ರವರೆಗೆ ಕಾಯಲೇಬೇಕು. ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾ ಅಥವಾ ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ ತಂಡ ಕಾಣಿಸಿಕೊಳ್ಳಬಹುದು.
ಮಾರ್ಚ್ 5ರಂದು ಎರಡನೇ ಸೆಮಿಫೈನಲ್, ಮಾರ್ಚ್ 9ರಂದು ಫೈನಲ್ ನಡೆಯಲಿದೆ. ಭಾರತ ಫೈನಲ್ ಪ್ರವೇಶಿಸಿದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಅರ್ಹತೆ ಪಡೆಯದಿದ್ದಲ್ಲಿ ಲಾಹೋರ್ನಲ್ಲಿ ನಡೆಯಲಿದೆ.