ತನ್ನ ಕೇಳಿ ಬಂದಿರುವ ನಕಲಿ ಸುದ್ದಿಗಳಿಗೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಈ ಸಮಸ್ಯೆಗೆ ತುತ್ತಾಗಿದ್ದರು.
ಸಿಡ್ನಿ ಟೆಸ್ಟ್ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದ ಬುಮ್ರಾ, ಚಿಕಿತ್ಸೆ ಪಡೆದಿದ್ದರು. ಅಲ್ಲದೆ, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು.
ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದ್ದರ ಕಾರಣ ಬುಮ್ರಾ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಪಂದ್ಯಗಳಿಗೆ ಅಲಭ್ಯರಾಗುತ್ತಾರೆ ಎಂದು ವರದಿಯಾಗಿತ್ತು.
ಜಸ್ಪ್ರೀತ್ ಬುಮ್ರಾ ಮೂರ್ನಾಲ್ಕು ತಿಂಗಳ ಕಾಲ ಮೈದಾನಕ್ಕಿಳಿಯಲ್ಲ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಬುಮ್ರಾ, ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಸುದ್ದಿ ಹರಡುವುದು ಸುಲಭ ಎಂದು ನನಗೆ ಗೊತ್ತಿದೆ. ಆದರೆ ಇದು ನನಗೆ ನಗು ತರಿಸಿತು. ಮೂಲಗಳು ವಿಶ್ವಾಸಾರ್ಹವಲ್ಲ ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಮೂಲಕ ತಾನು 3-4 ತಿಂಗಳು ಬೆಡ್ ರೆಸ್ಟ್ ಮಾಡಬೇಕು ಎನ್ನುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಆದರೆ ಈ ಟ್ವೀಟ್ನಲ್ಲಿ ತಾನು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತೇನೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿಲ್ಲ.