ಅಡುಗೆ ಮನೆಯಲ್ಲಿ ಇರುವ ಅಗತ್ಯ ವಸ್ತುಗಳಲ್ಲಿ ನಿಂಬೆಹಣ್ಣು ಕೂಡ ಒಂದು. ಇದು ವಿಟಮಿನ್ ಸಿಯ ಉತ್ತಮ ಮೂಲವಾಗಿದ್ದು, ಆರೋಗ್ಯಕ್ಕೆ ಬಹಳ ಉತ್ತಮ.
ಹಲವು ಬಾರಿ ನಾವು ಮಾರುಕಟ್ಟೆಯಿಂದ ಒಂದಿಷ್ಟು ನಿಂಬೆಹಣ್ಣು ತಂದು ಸಂಗ್ರಹಿಸಿ ಇಡುತ್ತೇವೆ. ನಿಂಬೆ ತಾಜಾವಾಗಿ ಇದ್ದಷ್ಟೂ ಅದರ ರಸ ಸುಲಭವಾಗಿ ಹೊರ ಬರುತ್ತದೆ. ಆದರೆ ಒಣಗಲು ಆರಂಭಿಸಿದ ತಕ್ಷಣ ಅದನ್ನು ಹಿಂಡಿ ರಸ ತೆಗೆಯುವುದು ಕಷ್ಟವಾಗುತ್ತದೆ.
ನಿಂಬೆರಸ ತೆಗೆಯುವುದು ನಿಮಗೆ ಕಷ್ಟ ಎನ್ನಿಸಿದರೆ ಈ ಸರಳ ತಂತ್ರಗಳನ್ನು ಅನುಸರಿಸಿ ರಸ ಹಿಂಡಬಹುದು.
ನಿಂಬೆ ತುಂಬಾ ಗಟ್ಟಿಯಾಗಿದ್ದರೆ ಅಡುಗೆ ಮನೆಯ ಟೈಲ್ಸ್ ಮೇಲೆ ನಿಂಬೆಹಣ್ಣನ್ನು ಇಟ್ಟು ಅದನ್ನು ಸ್ವಲ್ಪ ಒತ್ತಿಕೊಳ್ಳಿ.
ನಿಂಬೆಹಣ್ಣನ್ನು ಒತ್ತುವುದರಿಂದ ಮೃದುವಾಗುತ್ತದೆ ಹಾಗೂ ಸುಲಭವಾಗಿ ರಸ ತೆಗೆಯಬಹುದು.
ಕೆಲವೊಮ್ಮೆ ನಿಂಬೆಹಣ್ಣು ರಸಭರಿತವಾಗಿದ್ದರೂ ಅವು ತುಂಬಾ ಗಟ್ಟಿಯಾಗಿರುತ್ತವೆ. ಅಂತಹ ನಿಂಬೆಹಣ್ಣನ್ನು ಕತ್ತರಿಸುವ ಮೊದಲು 5 ನಿಮಿಷಗಳ ಕಾಲ ಬಿಸಿನೀರಿನಲ್ಲಿ ನೆನೆಸಿಡಿ.
ನಿಂಬೆಯನ್ನು ಬಿಸಿನೀರಿನಲ್ಲಿ ನೆನೆಸಿದಾಗ ನಿಂಬೆಹಣ್ಣು ಮೃದುವಾಗುತ್ತದೆ ಮತ್ತು ಅದರಿಂದ ರಸ ಸುಲಭವಾಗಿ ಹೊರ ಬರುತ್ತದೆ.
ನಿಮ್ಮಲ್ಲಿ ಮೈಕ್ರೋವೇವ್ ಇದ್ದರೆ ನಿಂಬೆಯನ್ನ ಪ್ಲೇಟ್ ಮೇಲಿಟ್ಟು ಅದನ್ನು 5 ರಿಂದ 20 ಸೆಕೆಂಡುಗಳ ಕಾಲ ಬಿಸಿ ಮಾಡಿ. ಹೀಗೆ ಮಾಡುವುದರಿಂದಲೂ ನಿಂಬೆಯಿಂದ ಹೆಚ್ಚು ರಸ ಬರುತ್ತದೆ.
ಆದರೆ ಯಾವುದೇ ಕಾರಣಕ್ಕೂ ಕತ್ತರಿಸಿ ನಿಂಬೆಹಣ್ಣನ್ನು ಮೈಕ್ರೋವೇವ್‌ನಲ್ಲಿ ಇರಿಸಬೇಡಿ.
ನಿಂಬೆಹಣ್ಣನ್ನು ಅರ್ಧದಷ್ಟಕ್ಕೆ ಕತ್ತರಿಸಿ. ಕತ್ತರಿಸಿದ ಭಾಗಕ್ಕೆ ಪೋರ್ಕ್ ಸೇರಿಸಿ. ನಂತರ ನಿಂಬೆರಸ ಹಿಂಡಿ. ಇದರಿಂದ ಸಂಪೂರ್ಣ ರಸ ಹೊರ ಬರುತ್ತದೆ.