ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಸಾಧಕರಿಗೆ ಕೇಂದ್ರ ಸರ್ಕಾರವು 'ಪದ್ಮ ಪ್ರಶಸ್ತಿ'ಗಳನ್ನು ಘೋಷಿಸಿದೆ.
ಪ್ರಕಟಗೊಂಡ ಪದ್ಮ ಪ್ರಶಸ್ತಿಗಳಲ್ಲಿ ಕರ್ನಾಟಕದ 9 ಸಾಧಕರೂ ಇದ್ದಾರೆ. ಒಬ್ಬರು ಪದ್ಮವಿಭೂಷಣ, ಇಬ್ಬರು ಪದ್ಮಭೂಷಣ, 6 ಮಂದಿ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.
ಕಲಾ ವಿಭಾಗದಲ್ಲಿ ಮಾಡಿರುವ ಸಾಧನೆಗಾಗಿ ಖ್ಯಾತ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಜನನ 1947ರ ಜುಲೈ 23ರಂದು. ಒಬ್ಬ ಭಾರತೀಯ ಪಿಟೀಲು ವಾದಕ, ಸಂಯೋಜಕ. ಶಾಸ್ತ್ರೀಯ ಕರ್ನಾಟಕ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಕಲಾ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. 1948ರ ಸೆಪ್ಟೆಂಬರ್ 4ರಂದು ಭಟ್ಕಲ್ ತಾಲೂಕಿನ ಶಿರಾಲಿ ಗ್ರಾಮದಲ್ಲಿ ಜನಿಸಿದರು.
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದು, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ಮರಾಠಿ, ಮಲಯಾಳಂ ಸೇರಿದಂತೆ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ರಂಗಭೂಮಿ ನಾಟಕಗಳು, ಸಮಾನಾಂತರ ಸಿನಿಮಾಗಳು, ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ, 1973ರಲ್ಲಿ ಪ್ರೊ. ಪಿವಿ ನಂಜರಾಜ್ ಅರಸ್ ನಿರ್ದೇಶನದ ಸಂಕಲ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಸಂಕಲ್ಪ ಚಿತ್ರ ಕರ್ನಾಟಕದಲ್ಲಿ ಏಳು ರಾಜ್ಯ ಪ್ರಶಸ್ತಿ ಗೆದ್ದಿತ್ತು.
ತೊಗಲುಗೊಂಬೆಯಾಟದಲ್ಲಿ ಸುದೀರ್ಘ ಸೇವೆ ಸಲ್ಲಿಸರುವ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ದೇಶದ 3ನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೀಗ 96 ವರ್ಷ. 70 ವರ್ಷಗಳಿಂದ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದ ಖ್ಯಾತ ಕ್ಯಾನ್ಸರ್ ತಜ್ಞೆ (ಆಂಕೊಲಾಜಿಸ್ಟ್ ಸರ್ಜನ್) ವಿಜಯಲಕ್ಷ್ಮೀ ದೇಶಮಾನೆ ಅವರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲಬುರಗಿಯ ಹಿರಿಯ ಆಂಕೊಲಾಜಿಸ್ಟ್ ಸರ್ಜನ್, 4 ದಶಕಗಳಿಗೂ ಹೆಚ್ಚು ಕಾಲ ಕ್ಯಾನ್ಸರ್ ರೋಗಿಗಳ ಚೇತರಿಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈಗ ಇವರಿಗೆ 70 ವರ್ಷ ವಯಸ್ಸು.
ಸೂರ್ಯ ಪ್ರಕಾಶ್ ಅವರಿಗೆ ಪದ್ಮಭೂಷಣ (ಸಾಹಿತ್ಯ ಮತ್ತು ಶಿಕ್ಷಣ -ಪತ್ರಿಕೋದ್ಯಮ), ಹಾಸನ ರಘು (ಕಲೆ)-ಪದ್ಮಶ್ರೀ, ಪ್ರಶಾಂತ್ ಪ್ರಕಾಶ್ (ವ್ಯಾಪಾರ ಮತ್ತು ಕೈಗಾರಿಕೆ) -ಪದ್ಮಶ್ರೀ, ರಿಕಿ ಗ್ಯಾನ್ ಕೇಜ್ (ಕಲೆ) -ಪದ್ಮಶ್ರೀ, ವೆಂಕಪ್ಪ ಅಂಬಾಜಿ ಸುಗಟೇಕರ್ (ಕಲೆ) -ಪದ್ಮಶ್ರೀ.
ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವಕ್ಕೂ ಮುನ್ನ ಕೇಂದ್ರ ಸರ್ಕಾರ 139 ಸಾಧಕರಿಗೆ ಪದ್ಮ ಪುರಸ್ಕೃತ ಪ್ರಶಸ್ತಿಗಳನ್ನು ಪ್ರಕಟಿಸಿತು. ಈ ಪೈಕಿ 7 ಸಾಧಕರಿಗೆ ಪದ್ಮವಿಭೂಷಣ, 19 ಮಂದಿಗೆ ಪದ್ಮಭೂಷಣ, 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ.