2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಎಡಗೈ ಬ್ಯಾಟರ್ ಪ್ರಿಯಾನ್ಶ್ ಆರ್ಯ ಈಗ ಐಪಿಎಲ್ನಲ್ಲೂ ತನ್ನ ಸಾಮರ್ಥ್ಯ ಜಗತ್ತಿಗೆ ತೋರಿಸಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುವುದರೊಂದಿಗೆ ಐಪಿಎಲ್ಗೆ ಪದಾರ್ಪಣೆ ಮಾಡಿದ ಆರ್ಯ, 23 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 47 ರನ್ ಗಳಿಸಿ ಛಾಪು ಮೂಡಿಸಿದರು.
204.35ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸುವ ಮೂಲಕ ಪಿಬಿಕೆಎಸ್‌ಗೆ ತ್ವರಿತ ಆರಂಭ ನೀಡಿದ ನಂತರ ಆರ್ಯ, ರಶೀದ್ ಖಾನ್ ಬೌಲಿಂಗ್ನಲ್ಲಿ ಔಟಾದರು.
ಕಳೆದ ವರ್ಷ ನವೆಂಬರ್‌ನಲ್ಲಿ ಜೆಡ್ಡಾದಲ್ಲಿ ನಡೆದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಿಯಾನ್ಶ್ ಅವರನ್ನು ಪಿಬಿಕೆಎಸ್ 3.80 ಕೋಟಿ ರೂ.ಗಳಿಗೆ ಖರೀದಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ತೀವ್ರ ಬಿಡ್ಡಿಂಗ್ ವಾರ್ ನಂತರ ಪಂಜಾಬ್ ಮೂಲದ ಫ್ರಾಂಚೈಸಿ ಆರ್ಯನನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
18ನೇ ಸಂಖ್ಯೆಯ ಜೆರ್ಸಿಯೊಂದಿಗೆ ಐಪಿಎಲ್ ಆಡುತ್ತಿರುವ ಪ್ರಿಯಾನ್ಶ್ ದೆಹಲಿಯವರು. ಆರ್ಯ ದೇಶೀಯ ಕ್ರಿಕೆಟ್ನಲ್ಲಿ 7 ಲಿಸ್ಟ್ ಎ ಪಂದ್ಯ, 18 ಟಿ20 ಪಂದ್ಯಗಳನ್ನು ಆಡಿದ್ದಾರೆ.
2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 9 ಇನ್ನಿಂಗ್ಸ್ಗಳಲ್ಲಿ 40.62 ಸರಾಸರಿ ಮತ್ತು 176.63 ಸ್ಟ್ರೈಕ್ ರೇಟ್‌ನಲ್ಲಿ 325 ರನ್ ಗಳಿಸಿದ್ದಾರೆ.
ಭುವನೇಶ್ವರ್ ಕುಮಾರ್, ಶಿವಂ ಮಾವಿ ಮತ್ತು ಪಿಯೂಷ್ ಚಾವ್ಲಾ ಅವರನ್ನೊಳಗೊಂಡ ಸ್ಟಾರ್ ಬೌಲಿಂಗ್ ದಾಳಿಯನ್ನು ಹೊಂದಿದ್ದ ಉತ್ತರ ಪ್ರದೇಶ ವಿರುದ್ಧ ಆರ್ಯ ಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದರು.
2024ರಲ್ಲಿ ಡೆಲ್ಲಿ ಪ್ರೀಮಿಯರ್ ಲೀಗ್ನ ಉದ್ಘಾಟನಾ ಆವೃತ್ತಿಯಲ್ಲಿ ಆಡುವಾಗ ಕ್ರಿಕೆಟ್ ಜಗತ್ತಿಗೆ ಪರಿಚಿತರಾದರು. ಪ್ರಿಯಾನ್ಶ್ 10 ಪಂದ್ಯಗಳಲ್ಲಿ 608 ರನ್ ಗಳಿಸುವ ಮೂಲಕ ಉದ್ಘಾಟನಾ ಋತುವಿನ ಪ್ರಮುಖ ರನ್ ಗಳಿಕೆದಾರರಾಗಿದ್ದರು.
ಈ ಟೂರ್ನಿಯ ಒಂದು ಪಂದ್ಯವೊಂದರಲ್ಲಿ ಪ್ರಿಯಾನ್ಶ್ ಅವರು ಮನನ್ ಭಾರದ್ವಾಜ್ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದರು. ಪರಿಣಾಮ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ 308 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
ಪ್ರಿಯಾನ್ಶ್ ಅವರ ಪೋಷಕರು ಇಬ್ಬರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು. ಅಲ್ಲದೆ ಈತನಿಗೆ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಸಂಪರ್ಕವೂ ಇದೆ.