ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎರಡು ಮಹತ್ವದ ಬದಲಾವಣೆಯಾಗಿದೆ.
ಪ್ರಮುಖ ಆಟಗಾರ್ತಿಯರಾದ ನ್ಯೂಜಿಲೆಂಡ್ನ ಸೋಫಿ ಡಿವೈನ್ ಮತ್ತು ಇಂಗ್ಲೆಂಡ್ನ ಕೇಟ್ ಕ್ರಾಸ್ ಹೊರಬಿದ್ದ ಹಿನ್ನೆಲೆ ಅವರ ಸ್ಥಾನಕ್ಕೆ ಆಸ್ಟ್ರೇಲಿಯಾದ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
ಆರ್‌ಸಿಬಿ ತಂಡವು ಸೋಫಿ ಡಿವೈನ್ ಮತ್ತು ಕೇಟ್ ಕ್ರಾಸ್ ಅವರ ಸ್ಥಾನಕ್ಕೆ ಕ್ರಮವಾಗಿ ಹೀದರ್ ಗ್ರಹಾಂ ಮತ್ತು ಕಿಮ್ ಗಾರ್ತ್ ಅವರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.
ವೈಯಕ್ತಿಕ ಕಾರಣಗಳಿಂದ ಡಬ್ಲ್ಯುಪಿಎಲ್‌ನಲ್ಲಿ ಡಿವೈನ್ ಮತ್ತು ಕೇಟ್ ಕ್ರಾಸ್ ಕಾಣಿಸಿಕೊಳ್ಳುವುದಿಲ್ಲ. 35 ವರ್ಷದ ಡಿವೈನ್ ತನ್ನ ಯೋಗಕ್ಷೇಮ ಸುಧಾರಣೆಗಾಗಿ ಆಟದಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಂಡಿದ್ದಾರೆ.
ಇಂಗ್ಲೆಂಡ್ ಆಲ್‌ರೌಂಡರ್ ಕ್ರಾಸ್ ಅವರು ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಡಬ್ಲ್ಯುಪಿಎಲ್‌ನಲ್ಲಿ ಕೇಟ್ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿರಲಿಲ್ಲ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಆಗಿರುವ ಗ್ರಹಾಂ 5 ಟಿ20ಐ ಪಂದ್ಯಗಳನ್ನು ಆಡಿದ್ದು, 8 ವಿಕೆಟ್ ಪಡೆದಿದ್ದಾರೆ. ಗಾರ್ತ್ 56 ಏಕದಿನ, 4 ಟೆಸ್ಟ್‌ಗಳ ಜತೆಗೆ 59 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಟಿ20ಐನಲ್ಲಿ 764 ರನ್, 49 ವಿಕೆಟ್ ಹೊಂದಿದ್ದಾರೆ.
ಗಾರ್ತ್ ಈ ಹಿಂದೆ ಡಬ್ಲ್ಯುಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಆಡಿದ್ದರು. ಗ್ರಹಾಂ ಮತ್ತು ಗಾರ್ತ್ ಕ್ರಮವಾಗಿ ತಲಾ 30 ಲಕ್ಷ ರೂ.ಗೆ ಆರ್‌ಸಿಬಿ ಸೇರಿದ್ದಾರೆ.
ಗಾಯಗೊಂಡಿರುವ ಆಸ್ಟ್ರೇಲಿಯಾದ ಅಲಿಸಾ ಹೀಲಿ ಬದಲಿಗೆ ಯುಪಿ ವಾರಿಯರ್ಸ್ ತಂಡವು ವೆಸ್ಟ್ ಇಂಡೀಸ್ನ ಚಿನೆಲ್ಲೆ ಹೆನ್ರಿಯನ್ನು ಆಯ್ಕೆ ಮಾಡಿಕೊಂಡಿದೆ. ಪಾದದ ಗಾಯದಿಂದಾಗಿ ಹೀಲಿ ಹೊರಗುಳಿದಿದ್ದಾರೆ.
ಮೂರನೇ ಆವೃತ್ತಿಯ ಡಬ್ಲ್ಯುಪಿಎಲ್ ಫೆಬ್ರವರಿ 14ರಂದು ವಡೋದರಾದಲ್ಲಿ ಪ್ರಾರಂಭವಾಗಲಿದ್ದು, ಗುಜರಾತ್ ಮತ್ತು ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.