ದೇಶ-ವಿದೇಶ ಪ್ರಯಾಣ ಬೆಳೆಸಬೇಕೆಂದರೆ ಪಾಸ್‌ಪೋರ್ಟ್ ಅತ್ಯಗತ್ಯ. ಎನ್ಆರ್ಐ, ಶಿಕ್ಷಣ, ಪ್ರವಾಸ, ವೈಯಕ್ತಿಕ ಕೆಲಸಗಳಿಗೆ ಹೋಗುವವರು.. ಹೀಗೆ ಎಲ್ಲರಿಗೂ ಈ ದಾಖಲೆ ಹೊಂದಿರಲೇಬೇಕು.
ಪಾಸ್‌ಪೋರ್ಟ್ ಇಲ್ಲದೆ ವಿಮಾನದ ಬಾಗಿಲು ಬಳಿ ಸುಳಿಯಲು ಸಹ ಬಿಡುವುದಿಲ್ಲ. ವಿದೇಶಿ ಪ್ರಯಾಣಕ್ಕೆ ಇರಲೇಬೇಕಾದ ಪ್ರಮುಖ ದಾಖಲೆ ಇದಾಗಿದೆ. ಭಾರತದಲ್ಲಿ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಹೇಗೋ ಬೇರೆ ದೇಶದಲ್ಲಿ ಪಾಸ್‌ಪೋರ್ಟ್ ಹಾಗೆ.
ಬೇರೆ ದೇಶದಲ್ಲಿ ನಮ್ಮ ಗುರುತಿಗೆ ಮುಖ್ಯವಾಗಿರುವ ಈ ಪಾಸ್‌ಪೋರ್ಟ್ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂಬುದರ ವಿವರ ಇಲ್ಲಿದೆ. ಅಚ್ಚರಿ ಸಂಗತಿ ಏನೆಂದರೆ, ಇದು ಇತ್ತೀಚಿನದ್ದಲ್ಲ. ಇದು ರಾಜರು ಮತ್ತು ಚಕ್ರವರ್ತಿಗಳ ಕಾಲದಿಂದಲೂ ಚಾಲ್ತಿಯಲ್ಲಿದೆ.
ಪಾಸ್‌ಪೋರ್ಟ್ ಎಂಬುದು ಫ್ರೆಂಚ್ ಪದವಾಗಿದ್ದು, ಅನುಮತಿ ಎಂದರ್ಥ ನೀಡುತ್ತದೆ. ಪ್ರಾಚೀನ ಕಾಲದಲ್ಲಿ ಪಾಸ್‌ಪೋರ್ಟ್ ರಾಜರ ಅನುಮತಿ ಕಾರ್ಡ್ ಆಗಿತ್ತು. ಇದನ್ನು ರಾಜರು-ಚಕ್ರವರ್ತಿಗಳ ಯುಗದಿಂದ ಮೊದಲ ವಿಶ್ವ ಯುದ್ಧದವರೆಗೆ ಬಳಕೆಯಲ್ಲಿತ್ತು.
ಮಧ್ಯಯುಗದಲ್ಲಿ ಇಸ್ಲಾಮಿಕ್ ರಾಜಪ್ರಭುತ್ವದ ದೇಶಗಳಿಗೆ ಪ್ರಯಾಣ ಬೆಳೆಸಲು ಜಕಾಹ್ ಮತ್ತು ಜಿಜ್ಯಾ ರಶೀದಿಗಳಿದ್ದವು. ಇದು ಕೂಡ ಒಂದು ರೀತಿಯ ಪಾಸ್‌ಪೋರ್ಟ್ ಆಗಿತ್ತು ಎಂಬುದು ವಿಶೇಷ.
ಪಾಸ್‌ಪೋರ್ಟ್ ಅನ್ನು ಇಂಗ್ಲೆಂಡ್ನ ಕಿಂಗ್ ಹೆನ್ರಿ ವಿ ಪರಿಚಯಿಸಿದರು. 19ನೇ ಶತಮಾನದಲ್ಲಿ ಯೂರೋಪ್‌ನಲ್ಲಿ ರೈಲ್ವೆ ವಿಸ್ತರಣೆಯಾದಾಗ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗೆ ಪಾಸ್‌ಪೋರ್ಟ್ ಬಳಸಲು ಆರಂಭಿಸಿದರು.
1914ರ ಮೊದಲ ಮಹಾಯುದ್ಧದ ವೇಳೆ ರಾಷ್ಟ್ರೀಯ ಭದ್ರತೆಗೆ ಹಲವು ಕ್ರಮ ಕೈಗೊಳ್ಳಲಾಯಿತು. ಅಂದಿನಿಂದ ವಿದೇಶಗಳಲ್ಲಿ ಪಾಸ್‌ಪೋರ್ಟ್ ಗುರುತಿನ ಕಡ್ಡಾಯ ದಾಖಲೆಯಾಗಿ ಮಾರ್ಪಟ್ಟಿತು.
ಮೊದಲ ಆಧುನಿಕ ಶೈಲಿಯ ಬ್ರಿಟಿಷ್ ಪಾಸ್‌ಪೋರ್ಟ್‌ಗಳನ್ನು 1915 ರಲ್ಲಿ ನೀಡಲಾಯಿತು. ಅದು ಛಾಯಾಚಿತ್ರ ಮತ್ತು ಸಹಿಯನ್ನು ಒಳಗೊಂಡಿತ್ತು. ಓಲ್ಡ್ ಬ್ಲೂ ಎಂದು ಕರೆಯಲ್ಪಡುವ ವಿಶ್ವದ ಮೊದಲ ಅಧಿಕೃತ ಪಾಸ್‌ಪೋರ್ಟ್ ಅನ್ನು 1920ರಲ್ಲಿ ವಿತರಿಸಲಾಯಿತು.