logo
ಕನ್ನಡ ಸುದ್ದಿ  /  ಮನರಂಜನೆ  /  Kirik Keerthi: ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಕಿರಿಕ್‌ ಕೀರ್ತಿ...ನಿಮಗಿಂತ ಕಷ್ಟ ಇರೋರನ್ನ ನೋಡಿ ಎಂದ ನೆಟಿಜನ್ಸ್

Kirik Keerthi: ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಕಿರಿಕ್‌ ಕೀರ್ತಿ...ನಿಮಗಿಂತ ಕಷ್ಟ ಇರೋರನ್ನ ನೋಡಿ ಎಂದ ನೆಟಿಜನ್ಸ್

HT Kannada Desk HT Kannada

Feb 02, 2023 03:25 PM IST

google News

ಕಿರಿಕ್‌ ಕೀರ್ತಿ

    • ಎಲ್ಲಾ ಸಮಸ್ಯೆಗೂ ಸಾವು ಪರಿಹಾರವಲ್ಲ, ಖಿನ್ನತೆಯಿಂದ ಹೊರ ಬನ್ನಿ, ಎಲ್ಲವೂ ಸರಿ ಹೋಗುತ್ತದೆ, ನಿಮಗಿಂತ ಕಷ್ಟ ಎದುರಿಸುತ್ತಿರುವವರನ್ನು ನೋಡಿ, ಅವರ ಮುಂದೆ ನಿಮ್ಮ ಕಷ್ಟಗಳು ಏನೂ ಅಲ್ಲ ಎಂಬುದು ಅರಿವಾಗುತ್ತದೆ ಎಂದು ಜನರು ಕೀರ್ತಿಗೆ ಬುದ್ಧಿ ಹೇಳುತ್ತಿದ್ದಾರೆ.
ಕಿರಿಕ್‌ ಕೀರ್ತಿ
ಕಿರಿಕ್‌ ಕೀರ್ತಿ (PC: Kirik Keerthi Facebook)

ಕಿರಿಕ್‌ ಕೀರ್ತಿ ಹೆಸರು ಕೇಳದವರೇ ಇಲ್ಲ. ಸಿನಿಮಾ ಪತ್ರಕರ್ತನಾಗಿ, ರೆಡಿಯೋ ಜಾಕಿ, ನಟನಾಗಿ, ನಿರೂಪಕನಾಗಿ, ಕನ್ನಡ ಪರ ಹೋರಾಟಗಾರನಾಗಿ ಕೀರ್ತಿ ಗುರುತಿಸಿಕೊಂಡಿದ್ದಾರೆ. ಕೀರ್ತಿ ಅವರ ಮಾತುಗಳಿಗೆ ಮನ ಸೋಲದವರೇ ಇಲ್ಲ. ತಮ್ಮ ಪ್ರತಿಭೆಯಿಂದ ಲಕ್ಷಾಂತರ ಜನರನ್ನು ರಂಜಿಸಿದ್ದ ಕೀರ್ತಿ ಕೂಡಾ ಒಮ್ಮೆ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ ಅಂದ್ರೆ ನಂಬ್ತೀರಾ..? ಹೌದು, ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ.

ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಸೆಲೆಬ್ರಿಟಿಗಳ ಜೀವನ ಬಹಳ ಸಂತೋಷವಾಗಿರುತ್ತದೆ ಅನ್ನೋದು ಎಲ್ಲರ ತಪ್ಪು ಅಭಿಪ್ರಾಯ. ಆದರೆ ಅವರಿಗೂ ಸಮಸ್ಯೆಗಳಿರುತ್ತವೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೀರ್ತಿ ಕೂಡಾ ಕೆಲವೊಂದು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಖಿನ್ನತೆ ಅನುಭವಿಸಿದ್ದರಂತೆ. ಇದೇ ವೇಳೆ ಆತ್ಮಹತ್ಯೆ ನಿರ್ಧಾರ ಮಾಡಿ ಡೆತ್‌ ನೋಟ್‌ ಕೂಡಾ ಬರೆದಿಟ್ಟಿದ್ದರಂತೆ. ಆದರೆ ನಂತರ ಮನಸ್ಸು ಬದಲಾಯಿಸಿಕೊಂಡೆ ಎಂದು ಅಂದಿನ ಘಟನೆಯನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

''ಜಗತ್ತಿಗೆ ವಿದಾಯ ಹೇಳಿ ಬಿಡಬೇಕು ಅಂತ ನಿರ್ಧಾರ ಮಾಡಿಬಿಟ್ಟಿದ್ದೆ, ಕಾರಣಗಳು ಹಲವು, ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲಾ ಪ್ರಯತ್ನಗಳೂ ಕೈ ಕೊಡುತ್ತಿತ್ತು. ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು. ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದರೆ ಹೀಗೆ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ...? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದ್ದವು. ''

ಕಿರಿಕ್‌ ಕೀರ್ತಿ ಫೇಸ್‌ಬುಕ್‌ ಪೋಸ್ಟ್‌

''ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡಿ 10 ನಿಮಿಷ ಧ್ಯಾನ ಮಾಡಿದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡಿದೆ. ಮನಸ್ಸಿನಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ‌ ಜೊತೆಗಿರಲಿ, ಡಿಪ್ರೆಷನ್‌ನಿಂದ ಮತ್ತೆ ವಾಪಸ್ ಬರಲು ಸಹಕರಿಸಿ, ಮತ್ತೆ ನನ್ನ ಮುಖದ ಮೇಲಿನ ನಗು ವಾಪಸ್ ತರುವ ತನಕ ಪ್ರಯತ್ನ‌ ನಿರಂತರ, ಇದು ಹೇಳಿಕೊಳ್ಳಬಾರದ ವಿಷಯ, ಆದ್ರೆ ಹೇಳಿಕೊಂಡರಷ್ಟೇ ಸಮಾಧಾನ'' ಎಂದು ಕೀರ್ತಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕೂಡಾ ಕೀರ್ತಿ, ''ಕಳೆದುಹೋದ ದಿನಗಳ ಕೆಟ್ಟ ನೆನಪುಗಳು ಇಂದಿನ ಸಂತೋಷ ನಾಶ ಮಾಡದಿರಲಿ'' ಎಂದು ಬರೆದಿರುವ ಪೋಸ್ಟ್‌ ಹಂಚಿಕೊಂಡಿದ್ದರು. ''2022 ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷ'' ಎಂದೂ ಕೀರ್ತಿ ಹೇಳಿಕೊಂಡಿದ್ದರು.

ಕೀರ್ತಿ ಅವರ ಪೋಸ್ಟ್‌ಗೆ ನೆಟಿಜನ್ಸ್‌ ಕಮೆಂಟ್‌ ಮೂಲಕ ಧೈರ್ಯ ಹೇಳುತ್ತಿದ್ದಾರೆ. ಕೀರ್ತಿಯವರೇ, ಜಿಹಾದಿಗಳ ಬೆದರಿಕೆ ಕರೆಗೆ ಹೆದರುವ ಅಗತ್ಯವಿಲ್ಲ, ಹಿಂದೂಗಳು ಹೇಡಿಗಳಲ್ಲ ಹಿಂದೂಗಳು ಶೌರ್ಯವಂತರು ನಾವು ನಿಮ್ಮ ಜೊತೆ ಇದ್ದೇವೆ, ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಜೀವನ ಧೈರ್ಯದಿಂದ ಸಾಗಬೇಕು ಆಗಲೇ ಜಗತ್ತಿಗೆ ನಾವು ಯಾರು ಎಂದು ತಿಳಿಯುವುದು. ಕಷ್ಟ ಮನುಷ್ಯನಿಗೆ ಬರೋದು ಮರಕ್ಕಲ್ಲ, ಮುಂದೆ ಸಾಗಿ ಜೊತೆಗೆ ನಿಮ್ಮ ಜೂನಿಯರ್ ಇದ್ದಾನೆ ಒಳ್ಳೆದಾಗಲಿ, ಎಲ್ಲಾ ಸಮಸ್ಯೆಗೂ ಸಾವು ಪರಿಹಾರವಲ್ಲ, ಖಿನ್ನತೆಯಿಂದ ಹೊರ ಬನ್ನಿ, ಎಲ್ಲವೂ ಸರಿ ಹೋಗುತ್ತದೆ, ನಿಮಗಿಂತ ಕಷ್ಟ ಎದುರಿಸುತ್ತಿರುವವರನ್ನು ನೋಡಿ, ಅವರ ಮುಂದೆ ನಿಮ್ಮ ಕಷ್ಟಗಳು ಏನೂ ಅಲ್ಲ ಎಂಬುದು ಅರಿವಾಗುತ್ತದೆ ಎಂದು ಜನರು ಕೀರ್ತಿಗೆ ಬುದ್ಧಿ ಹೇಳುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ