Jai Jagadish: ಅಂಬರೀಶ್‌ಗೆ ಗಾಂಚಲಿ ಇತ್ತು, ಭಯ ಹುಟ್ಟಿಸಲು ಒಂದು ಪ್ಲಾನ್ ಮಾಡಿದ್ದೆ, ಅಂಬಿ ಜೊತೆಗಿನ ಒಡನಾಟ ನೆನೆದ ಜೈ ಜಗದೀಶ್; ವಿಡಿಯೋ
May 29, 2023 01:24 PM IST
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಂಬರೀಶ್ ಜೊತೆಗಿನ ಒಡನಾಟ ನೆನೆದ ಜೈ ಜಗದೀಶ್
- ಅಂಬರೀಶ್ ಡ್ರೈವಿಂಗ್ ನೋಡಿ ನನಗೆ ಬಹಳ ಭಯ ಆಯ್ತು. ಎದುರಿಗೆ ಕಾರು, ಲಾರಿ ಬಂದರೂ ಸ್ಲೋ ಮಾಡುತ್ತಿರಲಿಲ್ಲ, ಒಂದೇ ಸಮ ಡ್ರೈವ್ ಮಾಡುತ್ತಿದ್ದರು. ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸುವಂತೆ ಮನವಿ ಮಾಡಿ ಕಾರಿನಿಂದ ಇಳಿದು ಬಸ್ ಹತ್ತಿ ಬೆಂಗಳೂರಿಗೆ ಬಂದೆ.
ಪ್ರತಿ ಶನಿವಾರ ಹಾಗೂ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮದ 19ನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದ ಇದುವರೆಗಿನ ಅನೇಕ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಜೈ ಜಗದೀಶ್ ಲವ್ ಸ್ಟೋರಿ
ಜೈ ಜಗದೀಶ್ ಸಹೋದರಿಯರು, ಸ್ನೇಹಿತರು, ಪತ್ನಿ ನಾಲ್ವರು ಮಕ್ಕಳು ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಹಳೆಯ ಸುಂದರ ನೆನಪಿಗೆ ಜಾರಿದರು. ಇದೇ ವೇಳೆ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆ ಕೂಡಾ ಹೇಳಿದರು. ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿಯುವ ಮುನ್ನ ಜೈ ಜಗದೀಶ್‌ಗೆ ರೂಪ ಎಂಬುವರೊಂದಿಗೆ ಮದುವೆ ಆಗಿತ್ತು. ಈ ಜೋಡಿಗೆ ಅರ್ಪಿತ ಎಂಬ ಮಗಳಿದ್ದಾರೆ. ರೂಪ ಜೊತೆಗೆ ಮನಸ್ತಾಪ ಉಂಟಾಗಿದ್ದರಿಂದ ಜೈ ಜಗದೀಶ್ ಅವರಿಗೆ ವಿಚ್ಛೇದನ ನೀಡಿ ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿದರು. ಕಾರ್ಯಕ್ರಮಕ್ಕೆ ಮೊದಲ ಪುತ್ರಿ ಅರ್ಪಿತಾ ಕೂಡಾ ಆಗಮಿಸಿದ್ದು ವಿಶೇಷವಾಗಿತ್ತು.
ಅಂಬರೀಶ್ ಮೇಲೆ ಸೇಡು ತೀರಿಸಿಕೊಂಡ ಜೈ ಜಗದೀಶ್
ಮೇ 29 ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ. ಇದೇ ವೇಳೆ ಜೈ ಜಗದೀಶ್ ಭಾನುವಾರದ ಸಂಚಿಕೆಯಲ್ಲಿ ತಮ್ಮ ಹಾಗೂ ಅಂಬರೀಶ್ ನಡುವಿನ ಒಡನಾಟವನ್ನು ನೆನಪಿಸಿಕೊಂಡರು. ''ನಾನು ಪೈಲೆಟ್ ಆಗಬೇಕು ಎಂದುಕೊಂಡಿದ್ದೆ. ಆದರೆ ಆಕ್ಟರ್ ಆದೆ, ಜಕ್ಕೂರು ಫ್ಲೈಯಿಂಗ್ ಸ್ಕೂಲ್‌ನಲ್ಲಿ ಪೈಲೆಟ್ ತರಬೇತಿ ಪಡೆದಿದ್ದೇನೆ. ಅಂಬರೀಶ್ ಹಾಗೂ ನಾನು ಮೈಸೂರಿನಲ್ಲಿ ಸಾಕಷ್ಟು ಸಮಯ ಕಳೆದಿದ್ದೇವೆ. ಒಮ್ಮೆ ಚಿಕ್ಕಮಗಳೂರಿನಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿ ಅಂಬರೀಶ್ ಹಾಗೂ ನಾನು ಬೆಂಗಳೂರಿಗೆ ಬರಲು ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಆದರೆ ಅಂಬರೀಶ್ ಡ್ರೈವಿಂಗ್ ನೋಡಿ ನನಗೆ ಬಹಳ ಭಯ ಆಯ್ತು. ಎದುರಿಗೆ ಕಾರು, ಲಾರಿ ಬಂದರೂ ಸ್ಲೋ ಮಾಡುತ್ತಿರಲಿಲ್ಲ, ಒಂದೇ ಸಮ ಡ್ರೈವ್ ಮಾಡುತ್ತಿದ್ದರು. ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸುವಂತೆ ಮನವಿ ಮಾಡಿ ಕಾರಿನಿಂದ ಇಳಿದು ಬಸ್ ಹತ್ತಿ ಬೆಂಗಳೂರಿಗೆ ಬಂದೆ. ''
ಫ್ಲೈಟ್‌ನಲ್ಲಿ ಕರೆದೊಯ್ದು ಭಯ ಹುಟ್ಟಿಸಿದ್ದ ಜೈ ಜಗದೀಶ್
''ಅಂಬರೀಶ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಕಾಯುತ್ತಿದ್ದೆ. ಫ್ಲೈಯಿಂಗ್ ಸ್ಕೂಲ್ ಪ್ರಿನ್ಸಿಪಲ್ ಬಳಿ ಮಾತನಾಡಿ, ಅಂಬರೀಶ್‌ಗೆ ಗಾಂಚಲಿ ಹೇಗಾದರೂ ಮಾಡಿ ಅವರಿಗೆ ಭಯ ಹುಟ್ಟಿಸಬೇಕು ಎಂದು ಕೊನೆಗೆ ಅವರನ್ನು ಫ್ಲೈಟ್‌ನಲ್ಲಿ ಕರೆದೊಯ್ಯಲು ನಿರ್ಧರಿಸಿದೆ. ಫ್ಲೈಟ್‌ನಲ್ಲಿ ಕೂರಿಸಿಕೊಂಡು 2 ಸಾವಿರ ಅಡಿ ಮೇಲೆ ಕರೆದೊಯ್ದು 1 ಸಾವಿರ ಅಡಿವರೆಗೆ ಫ್ಲೈಟನ್ನು ಡ್ರಾಪ್ ಮಾಡಿದೆ. ಆಗ ಅಂಬರೀಶ್ ಭಯದಿಂದ ಕಿರುಚಿದ್ದರು'' ಎಂದು ಜೈ ಜಗದೀಶ್ ಅಂದಿನ ಘಟನೆಯನ್ನು ನೆನೆದಿದ್ದಾರೆ.