Karnataka CM swearing-in ceremony Live updates: ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ; ಮೇ 20 ಮಧ್ಯಾಹ್ನ 12.30ಕ್ಕೆ ಪ್ರಮಾಣ
May 18, 2023 10:08 PM IST
ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಚಾರ ಬಗೆಹರಿದಿದೆ. ಅಧಿಕಾರ ಹಂಚಿಕೆ ಮಾಡಲಾಗಿದ್ದು, 5 ವರ್ಷಗಳ ಅವಧಿಯಲ್ಲಿ ತಲಾ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಅನುಭವಿಸಲಿದ್ದಾರೆ. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಲಿದ್ದಾರೆ. ಶನಿವಾರ (ಮೇ 20) ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜಭವನದಿಂದ ಹಿಂದಿರುಗಿದ ಕಾಂಗ್ರೆಸ್ ನಿಯೋಗ
ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ಪಡೆದುಕೊಂಡು ಅಲ್ಲಿಂದ ಹಿಂದಿರುಗಿದೆ ಕಾಂಗ್ರೆಸ್ ನಿಯೋಗ.
ಮೇ 20 ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ
ರಾಜಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ, ಸರ್ಕಾರ ರಚನೆಗೆ ಅವಕಾಶ ಮಂಡಿಸಿತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಅವರಿಗೆ ಸಿಹಿ ನೀಡಿ, ಶನಿವಾರ ಮಧ್ಯಾಹ್ನ 12.30ಕ್ಕೆ ಪ್ರಮಾಣವಚನಕ್ಕೆ ಆಗಮನಿಸುವಂತೆ ಆಹ್ವಾನಿಸಿದರು.
ರಾಜಭವನದ ಕಡೆಗೆ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು
ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಮುಗಿಸಿದ ಬಳಿಕ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜಭವನಕ್ಕೆ ತೆರಳಿದೆ.
ಸಿಎಲ್‌ಪಿ ಸಭೆ ಮುಕ್ತಾಯ
ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಸಭಾ ಭವನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾಗಿದೆ. ಈ ಸಭೆಯು 25 ನಿಮಿಷ ನಡೆದಿದ್ದು, ಔಪಚಾರಿಕವಾಗಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಇನ್ನು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ಮಂಡಿಸಲಿದ್ದಾರೆ.
ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರೂ ಆಗಿರುವ ಡಿಕೆ ಶಿವಕುಮಾರ್ ಅವರು ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದರು. ಇದನ್ನು ಡಾ.ಪರಮೇಶ್ವರ್, ಎಚ್‌ಕೆ ಪಾಟೀಲ್, ಎಂ.ಬಿ.ಪಾಟೀಲ್, ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್, ತನ್ವೀರ್ ಸೇಠ್, ಕೆ ಎಚ್ ಮುನಿಯಪ್ಪ ಮತ್ತು ಇತರರು ಅನುಮೋದಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಒಂದು ದೃಶ್ಯ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದೆ. ಅದರ ಒಂದು ದೃಶ್ಯ ಹೀಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎರಡನೇ ಸಭೆ ಶುರು
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಎರಡನೇ ಸಭೆ ಶುರುವಾಗಿದೆ. ಈ ಸಭೆ ಮುಗಿದ ಬಳಿಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜತೆಗೆ ರಾಜ್ಯಪಾಲರ ಬಳಿಗೆ ಹೋಗಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ.
ಕೆಪಿಸಿಸಿ ಕಚೇರಿಗೆ ಆಗಮಿಸಿದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಪಿಸಿಸಿ ಕಚೇರಿಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು, ಶೀಘ್ರವೇ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಾಗಿತ್ತು. ಒಂದು ಗಂಟೆ ವಿಳಂಬವಾಗಿ ಈಗ ಅದು ನಡೆಯಲಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ; ಪಕ್ಷದ ಕಚೇರಿ ತಲುಪಿದ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ 7 ಗಂಟೆಗೆ ನಿಗದಿಯಾಗಿತ್ತು. ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದ್ಯ ಕೆಪಿಸಿಸಿ ಕಚೇರಿಗೆ ತಲುಪಿದ್ದಾರೆ. ಶಾಸಕರು ಈಗಾ ಗಲೇ ಸ್ಥಳದಲ್ಲಿದ್ದಾರೆ.
ದೆಹಲಿಯಿಂದ ಹೊರಟು ಬೆಂಗಳೂರಿನ ತಮ್ಮ ನಿವಾಸಕ್ಕೆ ಬಂದ ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್
ದೆಹಲಿಯಿಂದ ಹೊರಟು ಬೆಂಗಳೂರಿಗೆ ಆಗಮಿಸಿದ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸಕ್ಕೆ ತಲುಪಿದರು.
ಬೆಂಗಳೂರು ನಿವಾಸ ತಲುಪಿದ ಸಿದ್ದರಾಮಯ್ಯ
ದೆಹಲಿಯಿಂದ ಹೊರಟು ಬೆಂಗಳೂರಿನಲ್ಲಿರುವ ತಮ್ಮ ನಿವಾಸ ತಲುಪಿದ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕರ್ನಾಟಕ ಮುಖ್ಯಮಂತ್ರಿ ಪ್ರಮಾಣವಚನ; ಭಾಗವಹಿಸುವ ಅತಿಥಿಗಳ ವಿವರ
ಕರ್ನಾಟಕ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ಕಳುಹಿಸಿದೆ. ಇದಲ್ಲದೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನೂ ಪಕ್ಷ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.
ಎಚ್‌ಎಎಲ್ ಏರ್‌ಪೋರ್ಟ್ ಸಮೀಪ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ಸಮೀಪ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆಗಳಲ್ಲಿ ತೊಡಗಿದ್ದಾರೆ. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಈ ಸಿದ್ಧತೆ.
ಮುಖ್ಯಮಂತ್ರಿ ಯಾರೆಂದು ಘೋಷಿಸಲು ಬಿಜೆಪಿ ತೆಗೆದುಕೊಂಡ ದಿನಗಳೆಷ್ಟು- ಪಟ್ಟಿಕೊಟ್ಟ ಜೈರಾಮ್ ರಮೇಶ್
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮುಖ್ಯಮಂತ್ರಿ ಯಾರು ಎಂದು ಘೋಷಿಸಲು ತೆಗೆದುಕೊಂಡ ದಿನಗಳೆಷ್ಟು- ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಈ ಕುರಿತ ಪಟ್ಟಿಯನ್ನೇ ಕೊಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ 2017ರಲ್ಲಿ ಮುಖ್ಯಮಂತ್ರಿ ಯಾರು ಎಂದು ಘೋಷಿಸಲು 8 ದಿನ ತೆಗೆದುಕೊಳ್ಳಲಾಗಿತ್ತು. 2021ರಲ್ಲಿ ಅಸ್ಸಾಂನಲ್ಲಿ ಮುಖ್ಯಮಂತ್ರಿ ಯಾರು ಎಂದು ಘೋಷಿಸಲು 7 ದಿನ, ಉತ್ತರಾಖಂಡದಲ್ಲಿ 2022ರಲ್ಲಿ 11 ದಿನ ತೆಗೆದುಕೊಳ್ಳಲಾಗಿತ್ತು.
ಇದಕ್ಕೆ ಹೋಲಿಸಿದರೆ 2023ರಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಯಾರು ಎಂಬುದನ್ನು ಮೊದಲ ಶಾಸಕಾಂಗ ಪಕ್ಷದ ಸಭೆ ನಡೆದು ಮೂರನೇ ದಿನಕ್ಕೆ ಘೋಷಣೆ ಮಾಡಲಾಗಿದೆ. ಬಿಜೆಪಿಗೆ ಹೋಲಿಸಿದರೆ ಆಯ್ಕೆ ಪ್ರಕ್ರಿಯೆ ಕೂಡ ಸಂಪೂರ್ಣವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಪ್ರಕ್ರಿಯೆ ಆಗಿತ್ತು ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಗೆ ಬಿಗಿಬಂದೋಬಸ್ತ್
ಬೆಂಗಳೂರಿನ ಕ್ವೀನ್ಸ್ ರೋಡ್‌ನಲ್ಲಿರುವ ಕೆಪಿಸಿಸಿ ಕಚೇರಿಗೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಮುಸ್ಸಂಜೆ 7 ಗಂಟೆಗೆ ಇಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹೀಗಾಗಿ, ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ 11ಎಸಿಪಿ, 25 ಇನ್‌ಸ್ಪೆಕ್ಟರ್‌ಗಳು, 350 ಸಿಬ್ಬಂದಿಯನ್ನು ಭದ್ರತೆಗಾಗಿ ಪೊಲೀಸ್ ಇಲಾಖೆ ನಿಯೋಜಿಸಿದೆ.
ಎಚ್‌ಎಎಲ್ ಏರ್‌ಪೋರ್ಟ್ ಬಳಿ ಸಿದ್ದರಾಮಯ್ಯ ಸ್ವಾಗತಕ್ಕೆ ತಯಾರಿ
ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಕಾರಣ ಎಚ್‌ಎಎಲ್ ಏರ್‌ಪೋರ್ಟ್ ಬಳಿ ಗೊಂಬೆ ಕುಣಿತ, ಕಂಸಾಳೆ, ಕಂಬಳಿ ಕುರುಬ ತಂಡ ಡೊಳ್ಳು ಕುಣಿತ ಪ್ರದರ್ಶನ ನಡೆಸಲಿದೆ. ಈಗಾಗಲೇ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಕಾರ್ಯಕರ್ತರು ವಿಮಾನ ನಿಲ್ದಾಣದ ಬಳಿ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಮಾಣ ವಚನಕ್ಕೆ ಬಿಹಾರ ಸಿಎಂ, ಡಿಸಿಎಂ, ತಮಿಳುನಾಡು ಸಿಎಂಗಳಿಗೆ ಆಹ್ವಾನ
ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿಯಾದವ್, ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಆಹ್ವಾನಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಫೋನ್ ಕರೆ ಮಾಡಿ ಈ ಆಹ್ವಾನ ನೀಡಿರುವುದಾಗಿ ವಾರ್ತಾ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯಪಾಲರಿಗೆ ಸರ್ಕಾರ ರಚನೆ ಕುರಿತು ಅಧಿಕೃತ ಮಾಹಿತಿ ನೀಡಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗೆದ್ದುಕೊಂಡಿದೆ. ಸರ್ಕಾರ ರಚನೆಗೆ ಬೇಕಾದ ಸ್ಪಷ್ಟ ಬಹುಮತ ಹೊಂದಿರುವ ಬಗ್ಗೆ ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ಮಾಹಿತಿ ನೀಡಿದರು. ಅಲ್ಲದೆ ಸರ್ಕಾರ ರಚನೆಗೆ ಅವಕಾಶ ಕೋರುವ ಪತ್ರವನ್ನೂ ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ ಹಸ್ತಾಂತರಿಸಿದರು.
ನಾನೇಕೆ ಅಪ್‌ಸೆಟ್ ಆಗಲಿ; ಡಿಕೆ ಶಿವಕುಮಾರ್ ಪ್ರಶ್ನೆ
ದೆಹಲಿ ಬಿಡುವ ಮುನ್ನ ಮಾಧ್ಯಮದ ಜತೆಗೆ ಮಾತನಾಡಿದ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಾನೇಕೆ ಅಪ್‌ಸೆಟ್ ಆಗಲಿ? ಎಂದು ಪ್ರಶ್ನಿಸಿದ್ದು, ಬಹುದೂರ ಸಾಗಬೇಕಾಗಿದೆ. ಇಷ್ಟುದೊಡ್ಡ ಜನಾದೇಶ ಸಿಕ್ಕಿದೆ. ಖಚಿತವಾಗಿ ನಾವು ಖುಷಿಯಾಗಿದ್ದೇವೆ. ನಾವು ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುತ್ತೇವೆ. ಅದುವೇ ನಮ್ಮ ಮುಖ್ಯ ಕಾರ್ಯಸೂಚಿ ಮತ್ತು ಉದ್ದೇಶ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸದ ಎದುರು ಸಂಭ್ರಮ ಸಡಗರ
ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸದ ಎದುರು ಸಂಭ್ರಮ ಸಡಗರ ನೆಲೆಸಿದೆ. ನಾದಸ್ವರ ಕಲಾವಿದರ ತಂಡ ಗೇಟಿನ ಬಳಿ ನಿಂತು ನಾದಸ್ವರ ನುಡಿಸತೊಡಗಿದ್ದಾರೆ.
ಬೆಂಗಳೂರಿಗೆ ಹೊರಟ ಸಿದ್ದರಾಮಯ್ಯ
ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡ ಎಂ.ಬಿ.ಪಾಟೀಲ್ ಮತ್ತುಇತರ ನಾಯಕರು ದೆಹಲಿಯಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದದ್ದು ಹೀಗೆ..
ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಇಂದು (ಮೇ18) ಸಂಜೆ 7 ಗಂಟೆಗೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಇಂದಿರಾಗಾಂಧಿ ಭವನದಲ್ಲಿ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಕುರಿತ ಸೂಚನೆ ರವಾನಿಸಿದ್ದಾರೆ.
Karnataka CM: ಪ್ರಮಾಣ ವಚನಕ್ಕೆ ಸಿದ್ಧತೆ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
Karnataka Next CM Live Updates: ರಾಜ್ಯಪಾಲರಿಗೆ ಡಿಕೆ ಶಿವಕುಮಾರ್ ಪತ್ರ
ಬೆಂಗಳೂರಿನಲ್ಲಿ ಶನಿವಾರ (ಮೇ 20) ಕರ್ನಾಟಕದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಸಮಯ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು. ಪ್ರಸ್ತುತ ದೆಹಲಿಯಲ್ಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯಾಹ್ನ 3 ಗಂಟೆಗೆ ಅಲ್ಲಿಂದ ಹೊರಡಲಿದ್ದು, ಸಂಜೆ 7 ಗಂಟೆಗೆ ನೂತನ ಶಾಸಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಅಧಿಕೃತಗೊಳಿಸಲಾಗುವುದು.
Karnataka Next CM Live Updates: ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಸಿದ್ದು, ಡಿಕೆಶಿ
ದೆಹಲಿ: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ನಿನ್ನೆಯಿಂದಲೂ ವಿಶೇಷ ವಿಮಾನ ಇವರನ್ನು ಕರೆತರಲು ದೆಹಲಿಯಲ್ಲಿಯೇ ಇದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
Karnataka Next CM Live Updates: ಹಿರಿಯರು ಮುಂದಿಟ್ಟ ಸೂತ್ರ ಒಪ್ಪಿದ್ದೇವೆ: ಡಿಕೆ ಶಿವಕುಮಾರ್
ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯಲ್ಲಿ ಹೂಗುಚ್ಛ ನೀಡಿ, ಸಿಹಿ ತಿನ್ನಿಸಿ ಅಭಿನಂದಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅವರ ಮಾತಿಗೆ ನಾನು ಬೆಲೆ ಕೊಟ್ಟಿದ್ದೇನೆ. ನೀವು ಒಂದಾಗಿ ಕೆಲಸ ಮಾಡಬೇಕು ಎಂದು ಹಿರಿಯರು ಸಲಹೆ ಮಾಡಿದರು. ಅವರು ರೂಪಿಸಿದ ಸೂತ್ರವನ್ನು ನಾವೆಲ್ಲರೂ ಒಪ್ಪಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕನ್ನಡಿಗರ ಹಿತ ರಕ್ಷಣೆಗೆ ನಾವು ಸದಾ ಒಂದು: ಸಿದ್ದರಾಮಯ್ಯ ಮೊದಲ ಹೇಳಿಕೆ
ಅಧಿಕಾರ ಹಂಚಿಕೆ?
ಸುದ್ದಿಗೋಷ್ಠಿಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಸಿ ವೇಣುಗೋಪಾಲ್, ಅಧಿಕಾರ ಹಂಚಿಕೆ ಸೂತ್ರವು ಕರ್ನಾಟಕದ ಜನತೆಗೆ ಅಧಿಕಾರವನ್ನು ಹಂಚುವುದಾಗಿದೆ ಎಂದು ಹೇಳಿದರು. ಆದರೆ, 30-30 ಅಧಿಕಾರ ಹಂಚಿಕೆ ಬಗ್ಗೆ ಅಧಿಕೃತವಾಗಿ ಹೇಳಿಲ್ಲ.
ಎಐಸಿಸಿ ಏನು ಹೇಳಿದೆಯೋ ಅದೇ ನನ್ನ ತೀರ್ಮಾನ: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷ ಏನು ಹೇಳಿದೆಯೋ ಅದೇ ನನ್ನ ನಿರ್ಧಾರ ಎಂದು ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಿಸಿದರು. ಮತ್ತೋರ್ವ ನಾಯಕ ರಣದೀಪ್ ಸುರ್ಜೇವಾಲಾ ಸಹ ಇದೇ ವಿಚಾರವನ್ನು ಎತ್ತಿಹಿಡಿದಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರೂ ಅರ್ಹರು
ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಮುಖ್ಯಮಂತ್ರಿಯಾಗಲು ಅರ್ಹರು. ಆದರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರ ನೇತೃತ್ವದಲ್ಲಿ ಕಾಂಗ್ರೆಸ್ ಬ್ರ್ಯಾಂಡ್ ಕರ್ನಾಟಕ ನಿರ್ಮಾಣ ಮಾಡಲಿದೆ ಎಂದು ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ದೆಹಲಿ ಎಐಸಿಸಿ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ; ಲೈವ್ ಇಲ್ಲಿ ನೋಡಿ
Mallikarjun Kharge: ಮಲ್ಲಿಕಾರ್ಜುನ ಖರ್ಗೆಗೆ ಗೆಲುವಿನ ಶ್ರೇಯದಲ್ಲಿ ಪಾಲು
ಎಐಸಿಸಿ ಕರ್ನಾಟಕ ಉಸ್ತುವಾಗಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಕಾಂಗ್ರೆಸ್‌ನ ಎಲ್ಲ ನಾಯಕರು ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ತಿಂಗಳು ಹಗಲಿರುಳು ಸಭೆಗಳನ್ನು ನಡೆಸಿ ಸಂಘಟನೆ ಮಾಡಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಹ ಪಕ್ಷದ ಕಾರ್ಯಕರ್ತರಿಗೆ ಬಲ ತುಂಬಿದರು ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಒಬ್ಬರೇ ಡಿಸಿಎಂ: ವೇಣುಗೋಪಾಲ್
ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಒಬ್ಬರೇ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಿರ್ಧಾರವನ್ನು ಎಐಸಿಸಿ ತೆಗೆದುಕೊಂಡಿದೆ ಎಂದು ವೇಣುಗೋಪಾಲ್ ಹೇಳಿದರು.
ನಮ್ಮದು ಪ್ರಜಾಪ್ರಭುತ್ವದ ಪಕ್ಷ: ವೇಣುಗೋಪಾಲ್
ನಮ್ಮದು ಪ್ರಜಾಪ್ರಭುತ್ವ ಪದ್ಧತಿ ಅನುಸರಿಸುವ ಪಕ್ಷ. ಕರ್ನಾಟಕದಲ್ಲಿ ನಮ್ಮಲ್ಲಿ ಅತ್ಯುತ್ತಮ ನಾಯಕರಿದ್ದಾರೆ. ಒಮ್ಮತಕ್ಕೆ ಬರಲು ನಾವು ಎರಡು-ಮೂರು ದಿನ ಮಾತುಕತೆ ನಡೆಸಬೇಕಾಯಿತು. ಸಿದ್ದರಾಮಯ್ಯ ಅತ್ಯುತ್ತಮ ಆಡಳಿತಗಾರ. ಈ ಬಾರಿಯ ಚುನಾವಣೆಯಲ್ಲಿ ಅವರು ಸಾಕಷ್ಟು ಶ್ರಮಪಟ್ಟರು. ನಮ್ಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಅತ್ಯುತ್ತಮ ಸಂಘಟಕರು ಎಂದು ವೇಣುಗೋಪಾಲ್ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ ರಾಹುಲ್, ಪ್ರಿಯಾಂಕ: ವೇಣುಗೋಪಾಲ್
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ಆರಂಭವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕರ್ನಾಟಕದಲ್ಲಿ ನಾವು ಜಯಗಳಿಸಿದ್ದೇವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಪರಿಶ್ರಮ ಈ ಜಯದಲ್ಲಿದೆ. ಸೋನಿಯಾ ಗಾಂಧಿ ಅವರ ಮಾರ್ಗದರ್ಶನವು ನಮ್ಮ ಕಾರ್ಯಕರ್ತರಿಗೆ ಬಲತುಂಬಿತು ಎಂದು ಸ್ಮರಿಸಿದರು.
ಸುದ್ದಿಗೋಷ್ಠಿ ಆರಂಭ
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ಆರಂಭವಾಗಿದೆ.
ಸಿದ್ದು-ಡಿಕೆಶಿ ನಡುವೆ ಉಪಹಾರ ಸಂಧಾನ
ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಮನೆಯಲ್ಲಿ ತಿಂಡಿ ತಿನ್ನುತ್ತಾ ಕೆಲಹೊತ್ತು ಮಾತನಾಡಿದರು.
ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ
ಕೆಲವೇ ಕ್ಷಣಗಳಲ್ಲಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ರಣದೀಪ್ ಸುರ್ಜೇವಾಲಾ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.
ಹೊಸ ಫೋಟೊ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸುವ ಹೊಸದೊಂದು ಫೋಟೊವನ್ನು ಸಿದ್ದರಾಮಯ್ಯ ಅವರ ಮಾಧ್ಯಮ ವಿಭಾಗ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದೆತ್ತಿರುವ ಈ ಫೋಟೊ ಹಲವು ಕಾರಣಗಳಿಗೆ ಮಹತ್ವ ಪಡೆದಿದೆ.
ಸಿದ್ದರಾಮಯ್ಯ ಬೆಂಬಲಿಗರ ಸಂಭ್ರಮ
ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಕರ್ನಾಟಕದ ಸಿಎಂ ಆಗಿ ಬೆಂಗಳೂರಿಗೆ ಬರಲಿರುವ ಕಾರಣ ಅವರ ಬೆಂಬಲಿಗರು ರಾಜ್ಯ ರಾಜಧಾನಿಯಲ್ಲಿ ಸಿಹಿ ಹಂಚಿ-ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.
ಒಂದೇ ಕಾರಿನಲ್ಲಿ ಡಿಕೆಶಿ-ಸಿದ್ದು
ದೆಹಲಿಯ ವೇಣುಗೋಪಾಲ್ ಮನೆಯಲ್ಲಿ ಮೀಟ್ ಮಾಡಿದ ಬಳಿಕ ಒಂದೇ ಕಾರಿನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದ್ದಾರೆ.
ರಾಜಸ್ಥಾನದಲ್ಲಿ ನಡೆದದ್ದೇ ಕರ್ನಾಟಕದಲ್ಲಿ ನಡೆಯಲಿದೆ: ಸದಾನಂದ ಗೌಡ
ರಾಜಸ್ಥಾನದಲ್ಲಿ ಏನಾಯಿತು? ಅದೇ ಕರ್ನಾಟಕದಲ್ಲಿಯೂ ಸಂಭವಿಸುತ್ತದೆ. ಇಲ್ಲಿ ವ್ಯಕ್ತಿಗಳಿಬ್ಬರ ನಡುವೆ (ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್) ಪಟಭದ್ರ ಹಿತಾಸಕ್ತಿಗಳು ಸ್ಪಷ್ಟವಾಗಿ ಕಾಣಿಸುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಅನಪೇಕ್ಷಿತ ಪರಿಣಾಮ ಬೀರುತ್ತದೆ ಎಂದು ಎಂದು ಬಿಜೆಪಿ ನಾಯಕ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುವುದ್ಯಾಕೆ?
ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರಾಗಬೇಕೆಂದು ಕೇಂದ್ರ ಮುಖಂಡರು ನಿರ್ಧರಿಸುವುದು ಏಕೆ? ಈ ಪ್ರಶ್ನೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಡೇಟಾ ಅನಾಲಿಟಿಕ್ಸ್ ವಿಭಾಗದ ಚೇರ್ಮನ್ ಪ್ರವೀಣ್ ಚಕ್ರವರ್ತಿ ಉತ್ತರ ನೀಡಿದ್ದಾರೆ. ಅವರು ಬಹಿರಂಗಪಡಿಸಿದ ಅಂಕಿಅಂಶಗಳ ಪ್ರಕಾರ, ಶೇಕಡ 66 ಕಾಂಗ್ರೆಸ್ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಶೇಕಡ 30ರಷ್ಟು ಜನರು ಅಭ್ಯರ್ಥಿ ಮುಖ ನೋಡಿ ಮತ ಹಾಕಿದ್ದಾರೆ. ಕೇವಲ ಶೇಕಡ 3 ಜನರು ಮಾತ್ರ ರಾಜ್ಯ ನಾಯಕರ ಮುಖ ನೋಡಿ ಮತ ಹಾಕಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕದ ಮುಖ್ಯಮಂತ್ರಿಯನ್ನು ಕೇಂದ್ರದ ಮುಖಂಡರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮೇ 20ರಂದೇ ಸಚಿವ ಸಂಪುಟ ರಚನೆ ಸಾಧ್ಯತೆ
ಇದೇ ಶನಿವಾರ ಸಚಿವ ಸಂಪುಟ ರಚನೆ ಸಾಧ್ಯತೆಯಿದೆ. ಮೇ 20ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆಗೆ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶನಿವಾರವೇ ಮೊದಲ ಹಂತದ ಮಂತ್ರಿಮಂಡಲ ಅಸ್ತಿತ್ವಕ್ಕೆ ಬರುವ ನಿರೀಕ್ಷೆಯಿದೆ. ಹತ್ತಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಪ್ರಮುಖ ಹುದ್ದೆಗಳಿಗಾಗಿ ತೆರೆಮರೆಯಲಿ ಲಾಬಿಯೂ ಆರಂಭವಾಗಿದ್ದು, ಪ್ರಮುಖ ಸ್ಥಾನಗಳ ಮೇಲೆ ಕಾಂಗ್ರೆಸ್ ಮುಖಂಡರು ಕಣ್ಣಿಟ್ಟಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.
ಪರಮೇಶ್ವರ್ ಪ್ರತಿಕ್ರಿಯೆ
ಯಾರಿಗೆ ಯಾವ ಸ್ಥಾನ ನೀಡಬೇಕೆಂಬುದರ ಬಗ್ಗೆ ಎಐಸಿಸಿ ಅಧಿಕೃತವಾಗಿ ಘೋಷಣೆ ಮಾಡಲಿ, ಉಳಿದ ವಿಷಯಗಳು ಮುಂದಿನದು ಎಂದು ಕರ್ನಾಟಕ ಸರ್ಕಾರ ರಚನೆಯ ಕುರಿತು ಕಾಂಗ್ರೆಸ್ ನಾಯಕ ಮತ್ತು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಎರಡನೇ ಸ್ಥಾನ ಒಪ್ಪಲು ಸೋನಿಯಾ ಗಾಂಧಿ ಕಾರಣ
ಡಿಕೆ ಶಿವಕುಮಾರ್ ಅವರು ಒಲ್ಲದ ಮನಸ್ಸಿನಿಂದ ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿಯವರ ಮಧ್ಯಸ್ಥಿಕೆ ಬಳಿಕ ಡಿಕೆ ಶಿವಕುಮಾರ್ ಅವರು ಒಲ್ಲದ ಮನಸ್ಸಿನಿಂದಲೇ ಎರಡನೇ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಮುಖ್ಯಮಂತ್ರಿ ಸ್ಥಾನ ಬೇಕೇಬೇಕು ಎಂದು ದೃಢವಾಗಿ ನಿಂತಿದ್ದ ಡಿಕೆ ಶಿವಕುಮಾರ್ ಜತೆ ನಿನ್ನೆ ತಡರಾತ್ರಿ ಸೋನಿಯಾ ಗಾಂಧಿ ಚರ್ಚಿಸಿದ್ದಾರೆ. ಬಳಿಕ ಸೋನಿಯಾ ಗಾಂಧಿಯವರ ಮಾತಿಗೆ ಒಪ್ಪಿ ಡಿಕೆಶಿ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ: ಡಿಕೆಶಿ
ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧ, ಇಂದು ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ ಎಂದು ವೇಣುಗೋಪಾಲ್ ನಿವಾಸದ ಬಳಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನನಗೆ ಪೂರ್ತಿಯಾಗಿ ಸಂತೋಷವಾಗಿಲ್ಲ: ಡಿ.ಕೆ.ಸುರೇಶ್
ನನಗೆ ಪೂರ್ತಿಯಾಗಿ ಸಂತೋಷವಾಗಿಲ್ಲ, ಆದರೆ ಕರ್ನಾಟಕದ ಹಿತದೃಷ್ಟಿಯಿಂದ ನಾವು ನಮ್ಮ ಬದ್ಧತೆಯನ್ನು ಪೂರೈಸಲು ಬಯಸಿದ್ದೇವೆ. ಅದಕ್ಕಾಗಿಯೇ ಡಿಕೆ ಶಿವಕುಮಾರ್ ಒಪ್ಪಿಕೊಳ್ಳಬೇಕಾಯಿತು. ಭವಿಷ್ಯದಲ್ಲಿ ನಾವು ನೋಡುತ್ತೇವೆ, ಸಾಗಲು ಬಹಳ ದೂರವಿದೆ. ನನ್ನ ಹಾರೈಕೆ (ಡಿ.ಕೆ.ಶಿವಕುಮಾರ್ ಗೆ ಸಿಎಂ ಹುದ್ದೆ) ಆಗಲಿಲ್ಲ, ಕಾದು ನೋಡೋಣ ಎಂದು ಕಾಂಗ್ರೆಸ್ ಸಂಸದ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ವೇಣುಗೋಪಾಲ್ ನಿವಾಸಕ್ಕೆ ಸಿದ್ದು ಆಗಮನ
ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಕೆಸಿ ವೇಣುಗೋಪಾಲ್ ಮನೆಗೆ ಬಂದ ಸಿದ್ದರಾಮಯ್ಯ ಆಗಮಿಸಿದ್ದಾರೆ. ಇನ್ನು ಕೆಲವು ಕ್ಷಣಗಳಲ್ಲಿ ನಡೆಯಲಿರುವ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಖಾಮುಖಿ ಸಾಧ್ಯತೆಯಿದೆ.
ವೇಣುಗೋಪಾಲ್ ನಿವಾಸಕ್ಕೆ ಡಿಕೆಶಿ
ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ನಿವಾಸಕ್ಕೆ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ.
Siddaramaiah Profile: ಚಾಣಾಕ್ಷ ರಾಜಕಾರಿಣಿ ಸಿದ್ದರಾಮಯ್ಯ
ಪ್ರಮಾಣ ವಚನ ಸಮಾರಂಭಕ್ಕೆ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಹುಲ್,ಸೋನಿಯಾ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಸಿಎಂಗಳು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.
ಕೆಸಿ ವೇಣುಗೋಪಾಲ್ ಮನೆಯಲ್ಲಿ ಚುರುಕಿನ ರಾಜಕೀಯ ಬೆಳವಣಿಗೆ
ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಮನೆಯಲ್ಲಿ ಇಂದು (ಮೇ 18) ಬೆಳಿಗ್ಗೆಯಿಂದಲೂ ಚುರುಕಿನ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ವೇಣುಗೋಪಾಲ್ ಮನೆ ಪ್ರವೇಶಿಸಿದರು. ಇದಕ್ಕೂ ಕೆಲ ನಿಮಿಷ ಮೊದಲಷ್ಟೇ ಕೆಪಿಸಿಸಿಯ ಹಿಂದಿನ ಅಧ್ಯಕ್ಷ ದಿನೇಶ್ ಗುಂಡಾರಾವ್ ಮನೆ ಪ್ರವೇಶಿಸಿದ್ದರು. ಇನ್ನು ಸ್ವಲ್ಪ ಹೊತ್ತಿನಲ್ಲೇ ಸಿದ್ದರಾಮಯ್ಯ ಸಹ ಇಲ್ಲಿಗೆ ಬರುವ ಸಾಧ್ಯತೆಯಿದೆ.
DK Shivakumar: ಪಕ್ಷ, ಕರ್ನಾಟಕದ ಹಿತದೃಷ್ಟಿಯಿಂದ ರಾಜಿಗೆ ಒಪ್ಪಿದೆ; ಡಿಕೆ ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿ ಗಾದಿಯ ಸ್ಪರ್ಧೆಯಲ್ಲಿದ್ದ ಡಿ.ಕೆ.ಶಿವಕುಮಾರ್ ತಾವು ಎಐಸಿಸಿ ವರಿಷ್ಠರು ರೂಪಿಸಿರುವ ರಾಜಿ ಸೂತ್ರಕ್ಕೆ ಒಪ್ಪಿಕೊಂಡಿರುವ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರಿಗೆ ಭರವಸೆ ಕೊಟ್ಟಿದೆ. ಅದನ್ನು ಈಡೇರಿಸಬೇಕಾದುದು ನಮ್ಮ ಆದ್ಯತೆಯಾಗಿದೆ. ಕೆಲವೊಮ್ಮೆ ನಾನು ಮುಂದಿಟ್ಟ ಹೆಜ್ಜೆ ಹಿಂದಿಡಬೇಕಾಗುತ್ತದೆ (Sometimes I should break) ಎಂದು ಹೇಳಿದ್ದಾರೆ. ಏನು ಮಾಡುವುದು, ಎಐಸಿಸಿ ಅಧ್ಯಕ್ಷರು ಮತ್ತು ನಾಯಕರ ಮಾತಿಗೆ ಕಿವಿಗೊಡಬೇಕಾಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ನಾನು ರಾಜಿಸೂತ್ರಕ್ಕೆ ಒಪ್ಪಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯನ್ನು ಇಂಡಿಯಾ ಟುಡೆ ಸುದ್ದಿವಾಹಿನಿ ಪ್ರಸಾರ ಮಾಡಿದೆ.
ಕರ್ನಾಟಕ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಕಳೆದ ಐದು ದಿನಗಳಿಂದ ರಾಜ್ಯದ ಜನರಲ್ಲಿ ಇತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಈ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದರು. ಹಲವು ಹಂತಗಳ ಮಾತುಕತೆ ಮತ್ತು ರಾಜಿ ಸಂಧಾನಗಳ ನಂತರ ಡಿಕೆ ಶಿವಕುಮಾರ್ ಹಿಂದೆ ಸರಿದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ.
ಡಿಕೆಶಿ ಮನೆ ಎದುರು ಬ್ಯಾನರ್ಗಳು
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನ ಖಚಿತವಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಬೆಂಗಳೂರಿನ ಅವರ ನಿವಾಸದ ಎದುರು ಡಿಕೆಶಿ ಭಾವಚಿತ್ರವುಳ್ಳ ಬ್ಯಾನರ್ಗಳನ್ನು ಅಳವಡಿಸಿದ್ದಾರೆ.
ರಾರಾಜಿಸುತ್ತಿರುವ ಸಿದ್ದರಾಮಯ್ಯ ಬ್ಯಾನರ್, ನಿವಾಸಕ್ಕೆ ಬಿಗಿ ಭದ್ರತೆ
ಸಿದ್ದರಾಮಯ್ಯ ಸಿಎಂ ಆಗುವುದು ಖಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ಅವರ ನಿವಾಸದ ಮುಂದೆ ಬೆಂಬಲಿಗರು ಸಿದ್ದರಾಮಯ್ಯ ಬ್ಯಾನರ್ಗಳನ್ನು ಹಾಕಿದ್ದಾರೆ. ಸಿದ್ದರಾಮಯ್ಯ ನಿವಾಸದ ಸುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಢಿದ್ದಾರೆ.
Karnataka Next CM Live Updates: ಮುಖ್ಯಮಂತ್ರಿ ಆಯ್ಕೆ ಕಸರತ್ತು: ಈವರೆಗಿನ 5 ಮುಖ್ಯ ಬೆಳವಣಿಗೆಗಳು
ಬೆಳಗ್ಗೆ 10 ಗಂಟೆಗೆ ಎಐಸಿಸಿ ಸುದ್ದಿಗೋಷ್ಠಿ
ಇಂದು ಬೆಳಗ್ಗೆ ಎಐಸಿಸಿ ಸುದ್ದಿಗೋಷ್ಠಿ ಕರೆದಿದ್ದು, ಸಿಎಂ ಯಾರೆಂಬುದನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ
ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದಿದ್ದು, ಇಂದು ಸಂಜೆ 7 ಗಂಟೆಗೆ ಬೆಂಗಳೂರು ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ನೂತನವಾಗಿ ಆಯ್ಕೆಯಾಗಿರುವ ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರನ್ನೊಳಗೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಆಯೋಜಿಸಲಾಗಿದೆ.
ಸಂಭವನೀಯ ಸಚಿವ ಸಂಪುಟ, ಎಂಬಿ ಪಾಟೀಲ್‌ಗೆ ಸ್ಥಾನ
ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕ ನಂತರ ಎಲ್ಲರ ಕುತೂಹಲ ಸಂಭಾವ್ಯ ಸಚಿವ ಸಂಪುಟದ ಕಡೆಗೆ ಹರಿದಿದೆ. ಮೊದಲ ಹಂತದಲ್ಲಿ ರಚನೆಯಾಗಲಿರುವ ಸಚಿವ ಸಂಪುಟದಲ್ಲಿ ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್, ಯು.ಟಿ.ಖಾದರ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹಮದ್, ಡಾ ಜಿ ಪರಮೇಶ್ವರ, ಆರ್.ವಿ.ದೇಶಪಾಂಡೆ ಇರಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಈ ಪೈಕಿ ಡಾ ಜಿ.ಪರಮೇಶ್ವರ ಹಾಗೂ ಎಂ.ಬಿ.ಪಾಟೀಲ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೂ ಕೇಳಿ ಬರುತ್ತಿದ್ದವು ಎನ್ನುವುದು ಗಮನಾರ್ಹ ಸಂಗತಿ.
ಸಿದ್ದರಾಮಯ್ಯ ಬದುಕು ಸಾಗಿಬಂದ ಹಾದಿ
ಶನಿವಾರ ಮಧ್ಯಾಹ್ನಪ್ರಮಾಣವಚನ
ಶನಿವಾರ (ಮೇ 20) ಮಧ್ಯಾಹ್ನ 12:30ಕ್ಕೆ ಕಂಠೀರಣ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಅಧಿಕಾರ ಹಂಚಿಕೆ; ಮೊದಲ ಅವಧಿಗೆ ಸಿದ್ದು ಸಿಎಂ
ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಚಾರ ಬಗೆಹರಿದಿದೆ. ಅಧಿಕಾರ ಹಂಚಿಕೆ ಮಾಡಲಾಗಿದ್ದು, 5 ವರ್ಷಗಳ ಅಧಿಕಾರ ಅವಧಿಯಲ್ಲಿ ತಲಾ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಅನುಭವಿಸಲಿದ್ದಾರೆ. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಲಿದ್ದಾರೆ. ಶನಿವಾರ (ಮೇ 20) ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.