ಕನ್ನಡ ಸುದ್ದಿ  /  ಕರ್ನಾಟಕ  /  Jamboo Savari Elephants: ದಸರಾ ಅಂಬಾರಿಗೆ ಆನೆ ಅಣಿಗೊಳಿಸುವ ಕಾಯಕ, ಜಂಬೂಸವಾರಿ ಕಂಡಾಗ ಉಘೇ ಚಾಮುಂಡಿ ಉದ್ಘಾರದ ಭಕ್ತಿ ಭಾವ

Jamboo savari Elephants: ದಸರಾ ಅಂಬಾರಿಗೆ ಆನೆ ಅಣಿಗೊಳಿಸುವ ಕಾಯಕ, ಜಂಬೂಸವಾರಿ ಕಂಡಾಗ ಉಘೇ ಚಾಮುಂಡಿ ಉದ್ಘಾರದ ಭಕ್ತಿ ಭಾವ

Umesha Bhatta P H HT Kannada

Oct 24, 2023 09:58 AM IST

ಮೈಸೂರು ದಸರಾ ಎಂದರೆ ಆನೆಗಳ ನಡೆ ಹಾಗೂ ಚಾಮುಂಡಿಗೆ ಉಘೇ ಎನ್ನುವ ಭಕ್ತರ ಪಡೆ.

    • Mysore Dasara Elephants ಮೈಸೂರು ದಸರಾ(Mysuru Dasara) ಎಂದರೆ ಅದು ಆನೆಗಳ ತಯಾರಿ( Elephants), ಜಂಬೂಸವಾರಿ( Jamboo savari) ಯಶಸ್ವಿ ನಿಭಾವಣೆ ಹಾಗೂ ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯಲ್ಲಿ ಚಾಮುಂಡೇಶ್ವರಿ ದೇವಿ(Chamundeshwari) ಕಂಡು ಉಘೇ ಎನ್ನುವ ಭಕ್ತಿಯ ಭಾವ… 
ಮೈಸೂರು ದಸರಾ ಎಂದರೆ ಆನೆಗಳ ನಡೆ ಹಾಗೂ ಚಾಮುಂಡಿಗೆ ಉಘೇ ಎನ್ನುವ ಭಕ್ತರ ಪಡೆ.
ಮೈಸೂರು ದಸರಾ ಎಂದರೆ ಆನೆಗಳ ನಡೆ ಹಾಗೂ ಚಾಮುಂಡಿಗೆ ಉಘೇ ಎನ್ನುವ ಭಕ್ತರ ಪಡೆ.

ಮೈಸೂರು ದಸರಾ ಎಂದರೆ ಜಂಬೂಸವಾರಿ. ಅಂದರೆ ಆನೆಗಳೊಂದಿಗೆ ಸವಾರಿ. ಇಡೀ ದಸರಾದಲ್ಲಿ ಪ್ರಮುಖ ಆಕರ್ಷಣೆಯೇ ಗಜ ಪಡೆ ಮತ್ತು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದರ್ಶನ.

ಟ್ರೆಂಡಿಂಗ್​ ಸುದ್ದಿ

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

ಆನೆಗಳನ್ನು ನೋಡಿಕೊಳ್ಳುವುದು ಸುಲಭದ ಮಾತಲ್ಲ. ಕಾಡಿನಿಂದ ನಾಡಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಡುವ ಆನೆಗಳಿಗೆ ದಿನದ ಎರಡು ಹೊತ್ತು ತಾಲೀಮು. ನಾಲ್ಕೂವರೆ ಕಿ.ಮಿ ಉದ್ದವನ್ನು ಕ್ರಮಿಸಬೇಕು. ಭಾರ ಹೊತ್ತು ಸಾಗುವ ತರಬೇತಿ. ಕುಶಾಲು ತೋಪು ವೇಳೆ ಗುಂಡಿನ ಸದ್ದು ಸಿಡಿಸುವ ತಯಾರಿ.. ಹೀಗೆ ಪ್ರತಿದಿನ ಒಂದಿಲ್ಲೊಂದು ಚಟುವಟಿಕೆ ಇದ್ದೇ ಇರುತ್ತದೆ. ಇವೆಲ್ಲದರ ಜತೆ ಆನೆಗಳು ಮಸ್ತ್‌ಗೆ ಬಂದಿವೆಯೋ ಇಲ್ಲವೋ ಎಂದು ನೋಡಿಕೊಳ್ಳುವುದು. ಅವುಗಳು ಒಂದಕ್ಕೊಂದು ಕಾದಾಡದಂತೆ ನೋಡಿಕೊಳ್ಳುವುದು ಎಲ್ಲ ಸವಾಲಿನ ಕೆಲಸವೇ. ಇದನ್ನು ಇಡೀ ತಂಡ ಅಚ್ಚುಕಟ್ಟಾಗಿಯೇ ನೋಡಿಕೊಳ್ಳುತ್ತಾ ಬಂದಿದೆ. ಅದರಲ್ಲಿ ಸಿಎಫ್‌ ಮಾಲತಿಪ್ರಿಯ, ಡಿಸಿಎಫ್‌ ಸೌರಭ್‌ ಕುಮಾರ್‌, ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್‌, ಸಿಬ್ಬಂದಿ ಅಕ್ರಂ, ರಂಗರಾಜು ಸಹಿತ ಹಲವರ ನಿರಂತರ ನಿಗಾ ಕೂಡ ಆನೆಗಳ ನಿಭಾವಣೆಗೆ ಕಾರಣವಾಗಿವೆ. ಇದರಿಂದ ಆನೆಗಳು ನಿರುಮ್ಮಳವಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಸಹಕಾರಿಯಾಗಲಿದೆ. ಆನೆಗಳ ಯಶಸ್ವಿ ಹೆಜ್ಜೆಯೇ ದಸರಾ ಯಶಸ್ಸಿನ ಮಂತ್ರವೂ ಹೌದು.

ಅಕ್ರಂ ಪ್ರೀತಿ ಮತ್ತು ಧಾರ್ಮಿಕ ಸಹಿಷ್ಣುತೆ

ದಸರಾದ ಆನೆಗಳನ್ನು ನೋಡಿಕೊಳ್ಳುವಲ್ಲಿ ಹಲವರು ಕೆಲಸ ಮಾಡುತ್ತಾರೆ. ಅದರಲ್ಲಿ ಅಕ್ರಂ ಅವರ ಪಾತ್ರವೂ ಪ್ರಮುಖವಾದದ್ದೇ. ಆನೆಗಳ ನಿತ್ಯದ ಬೇಕು ಬೇಡಗಳನ್ನು ಗಮನಿಸುತ್ತಲೇ ನೋಡಿಕೊಳ್ಳುವುದು. ಮಾವುತ, ಕವಾಡಿರೊಂದಿಗೆ ಎಲ್ಲಾ ಅಭಿಮನ್ಯು ಸೇರಿ 14 ಆನೆಗಳ ನಿರಂತರ ಸಂಪರ್ಕದಲ್ಲಿದ್ದುಕೊಂಡು ಏನೇ ಸಣ್ಣ ಬದಲಾವಣೆಯಾದರೂ ಅದನ್ನು ಹಿರಿಯರ ಗಮನಕ್ಕೆ ತಂದು ಸ್ಪಂದಿಸುವುದು. ನಿತ್ಯದ ತಾಲೀಮಿಗೆ ತಯಾರಿ, ಗೊಂದಲವಾಗದ ರೀತಿ ನಾಲ್ಕೂವರೆ ಕಿ.ಮಿ ಹೋಗಿ ಬರುವುದು ಸುಲಭವಲ್ಲ. ಅದಲ್ಲೆದರ ಜತೆಗೆ ಜಂಬೂಸವಾರಿ ದಿನ ಆನೆಗಳಿಗೆ ನಮ್ದಾ, ಗಾದಿ ಸೇರಿದಂತೆ ಎಲ್ಲವನ್ನು ಕಟ್ಟುವುದು,. ಮುಖ್ಯವಾಗಿ ಅಂಬಾರಿ ಸಿದ್ದಪಡಿಸುವುದು ಜವಾಬ್ದಾರಿಯ ಕೆಲಸವೇ. ಇದನ್ನು ಅಕ್ರಂ ಅಚ್ಚುಕಟ್ಟಾಗಿ ಮಾಡುತ್ತಾರೆ. ಎಲ್ಲವನ್ನೂ ಪ್ರೀತಿಯಿಂದಲೇ ರೂಪಿಸಿ ತಂಡದೊಂದಿಗೆ ಸಮನ್ವಯ ಸಾಧಿಸುತ್ತಾರೆ. ಇದು ಏಕಾಏಕಿ ಬಂದುದಲ್ಲ. ಸತತ 30 ವರ್ಷದಿಂದ ಅಕ್ರಂ ಈ ಕಾಯಕ ನಿರತ. ಇದರಿಂದಲೇ ಅಕ್ರಂ ಇದ್ದರೆ ಎಲ್ಲವೂ ಸುಸೂತ್ರ ಎನ್ನುವ ಭಾವನೆ ಹಿರಿಯ ಅಧಿಕಾರಿಗಳಲ್ಲೂ ಇದೆ.

ಅವರ ತಾತ, ತಂದೆ, ದೊಡ್ಡಪ್ಪ ಎಲ್ಲರೂ ಆನೆ ಸೇವಕರೇ. ಇದಕ್ಕಾಗಿಯೇ ಇಡೀ ಕುಟುಂಬ ಬದುಕು ಸವೆಸಿದೆ. ಅಪ್ಪ ತೀರಿಕೊಂಡ ನಂತರ ಅಕ್ರಂಗೆ ಆನೆ ನೋಡಿಕೊಳ್ಳುವ ಕೆಲಸ. ದೊಡ್ಡಪ್ಪ ಜಮೇದಾರ್‌ ಆಗಿದ್ದರೆ, ತಾತ ಹಾಗೂ ಅಪ್ಪ ಮಾವುತರಾಗಿದ್ದವರು. ಕವಿತಾ ಆನೆಯೊಂದಿಗೆ ಅವರ ತಂದೆ ದಸರಾಗೆ ಬಂದಿದ್ದಾರೆ. ಆದರೆ ಮಗನಿಗೆ ಒಂದು ಆನೆ ಎನ್ನುವುದಕ್ಕಿಂತ ದಸರಾದ ಆನೆಗಳೊಂದಿಗೆ ಸಮನ್ವಯದ ಕಾಯಕ.

ದಸರಾ ಬಂದರೆ ಅಕ್ರಂಗೆ ಬಹುತೇಕ 16 ರಿಂದ 18 ಕೆಲಸ. ಅವರು ಎಷ್ಟು ಧಾರ್ಮಿಕ ಸಹಿಷ್ಣು ಎಂದರೆ ಜಂಬೂಸವಾರಿ ಎನ್ನುವುದು ಕೋಟ್ಯಂತರ ಜನರ ಹಬ್ಬ. ಚಾಮುಂಡೇಶ್ವರಿ ತಾಯಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುವ ಕ್ಷಣ. ಇಂತಹ ಭಾವನೆಗಳಿಗೆ ನಾನು ವೈಯಕ್ತಿಕವಾಗಿ ಧಕ್ಕೆ ಮಾಡಬಾರದು ಎನ್ನುವುದು ಅಕ್ರಂ ನಂಬಿಕೆ. ಇದಕ್ಕಾಗಿ ಎಲ್ಲಾ ಹತ್ತು ದಿನವೂ ಅಕ್ರಂ ಮಾಂಸಾಹಾರ ತ್ಯಜಿಸುತ್ತಾರೆ. ಸರಳ ಆಹಾರದೊಂದಿಗೆ ಆನೆಗಳ ಸೇವೆ ಮಾಡುತ್ತಾರೆ. ತಾಲೀಮು ಹಾಗೂ ಜಂಬೂ ಸವಾರಿಗೆ ಆನೆಗಳನ್ನು ಸಜ್ಜುಗೊಳಿಸುವಾಗ, ಅದರಲ್ಲೂ ಅಂಬಾರಿ ಹೊರುವ ಆನೆ ಸಿದ್ದಪಡಿಸುವ ಸನ್ನಿವೇಶದಲ್ಲಿ ಚಪ್ಪಲಿಯನ್ನೂ ಹಾಕದೇ ಭಕ್ತಿ ಹಾಗೂ ಶ್ರದ್ದೆಯಿಂದಲೇ ಇದನ್ನು ಮಾಡುತ್ತಾರೆ. ಇದರಿಂದಲೇ ಅರಣ್ಯ ಇಲಾಖೆಯಲ್ಲಿ ಅಕ್ರಂ ಎಂದರೆ ಅಚ್ಚುಕಟ್ಟು ಹಾಗೂ ಎಲ್ಲರಿಗೂ ಅಚ್ಚುಮೆಚ್ಚು.

ಆನೆಯೇ ನಮ್ಮ ಬದುಕು. ತಲೆಮಾರುಗಳ ನಂಟು ಆನೆಗಳೊಂದಿಗೆ ನಮ್ಮ ಕುಟುಂಬಕ್ಕೆ ಇದೆ. ನಮ್ಮ ಅಜ್ಜ, ಅಪ್ಪ, ದೊಡ್ಡಪ್ಪ,. ಸಹೋದರರು, ನಾನೂ ಆನೆಯೊಂದಿಗೆ ಬದುಕು ನಡೆಸುತ್ತಿದ್ದೇವೆ. ಅವುಗಳ ಕೆಲಸವನ್ನು ನಾವು ಪ್ರೀತಿಯಿಂದಲೇ ಮಾಡಬೇಕು ಎಂದು ಅಕ್ರಂ ಹೇಳುತ್ತಾರೆ.

ಆಹಾರ ಕೊಡುವ ರಂಗರಾಜು

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಗಾದೆ ಮಾತು ನೀವು ಕೇಳಿರಬಹುದು. ಆನೆಗಳಿಗೆ ಆಹಾರವೆಂದರೆ ಪ್ರೀತಿ. ದಿನದ 18 ಗಂಟೆ ಕಾಲ ಅವು ತಿನ್ನುತ್ತಲೇ ಇರುತ್ತವೆ. ಆನೆಗಳಿಗೆ ಆಹಾರ ಕೊಡುತ್ತಲೇ ಇರಬೇಕು. ಹೀಗೆ ಆನೆಗಳಿಗೆ ದಿನದ ಮೆನು ತಯಾರಿಸಿ ಅದನ್ನು ನೀಡುವ ಕಾಯಕದಲ್ಲಿ ಮೂರು ದಶಕದಿಂದ ನಿರತರಾದವರು ರಂಗರಾಜು. ಅರಣ್ಯ ಇಲಾಖೆಯಲ್ಲೇ ಸೇವೆ ಸಲ್ಲಿಸುತ್ತಾ ಬಂದಿರುವ ರಂಗರಾಜು ಆನೆಗಳು ಮೈಸೂರಿಗೆ ಬಂದ ತಕ್ಷಣ ಅರಮನೆ ಅಂಗಳದಲ್ಲಿ ಅರಣ್ಯ ಇಲಾಖೆ ತಂಡದಲ್ಲಿ ಕಾಣಿಸಿಕೊಳ್ಳುತ್ತಾರೆ. ಆನೆಗಳಿಗೆ ಸೊಪ್ಪು, ಬಗೆಬಗೆಯ ಆಹಾರಗಳನ್ನು ಸಿದ್ದಪಡಿಸುತ್ತಾರೆ. ಯಾವ ಆನೆಗೆ ಏನು ಇಷ್ಟ, ಏನು ಕೊಟ್ಟರೆ ಅವು ಚೆನ್ನಾಗಿ ಮೆಲ್ಲುತ್ತವೆ ಎನ್ನುವುದು ರಂಗರಾಜುಗೆ ಗೊತ್ತು. ಆನೆಗಳು ಬಿಡಾರದಲ್ಲಿದ್ದಾಗ. ಅಲ್ಲಿಂದ ತಾಲೀಮಿಗೆ ಹೊರಟಾಗ ಅವುಗಳಿಗೆ ಆಹಾರ ಅಣಿಗೊಳಿಸುತ್ತಾರೆ. ಸೊಪ್ಪು. ಕಬ್ಬು ಸದಾ ಸಿದ್ದವಿರುತ್ತದೆ.

ಕಾಡಿನಲ್ಲಿದ್ದಾಗ ಅವುಗಳಿಗೆ ಮುದ್ದೆ, ಸಣ್ಣಪುಟ್ಟ ಆಹಾರ ಬಿಟ್ಟರೆ ಕಾಡಿನ ಸುತ್ತಾಟದೊಂದಿಗೆ ಅಲ್ಲಿನ ನೈಸರ್ಗಿಕ ಆಹಾರವನ್ನೇ ಹೆಚ್ಚು ಸೇವಿಸುತ್ತವೆ ಆನೆಗಳು. ಇಲ್ಲಿ ಜಂಬೂಸವಾರಿ ಹೊರುವ ಜವಾಬ್ದಾರಿ ಕಾರಣಕ್ಕೆ ಆಹಾರದಲ್ಲಿ ಬದಲಾಗುತ್ತದೆ. ಭತ್ತ, ಬೆಲ್ಲ, ಅವಲಕ್ಕಿ, ಗ್ಲುಕೋಸ್ ಸಹಿತ ಆಹಾರ ನೀಡಲಾಗುತ್ತದೆ. ಸ್ಪೆಷಲ್‌ ರೇಷನ್‌ ಅನ್ನು ಎಲ್ಲಾ ದಿನಕ್ಕೂ ಅಣಿಗೊಳಿಸಲಾಗುತ್ತದೆ. ಇದನ್ನು ಸೇವಿಸಿದ ಆನೆಗಳು ಮೈಸೂರಿನಿಂದ ಹೋಗುವ ಹೊತ್ತಿಗೆ ಕನಿಷ್ಠ 300 ಕೆ.ಜಿ ಹೆಚ್ಚಾಗಿರುತ್ತವೆ. ಇದರ ಹಿಂದೆ ರಂಗರಾಜು ಹಾಗೂ ಅವರ ತಂಡದ ಪ್ರೀತಿಯ ಕೈತುತ್ತೇ ಕಾರಣ. ಅರಣ್ಯ ಇಲಾಖೆ ಮೇಲಾಧಿಕಾರಿಗಳ ನಿರ್ದೇಶನದಂತೆ ರಂಗರಾಜು ಪ್ರೀತಿಯಿಂದಲೇ ಆನೆಗಳಿಗೆ ಉಣಬಡಿಸುತ್ತಾರೆ. ಮಾವುತರು- ಕವಾಡಿಗರೊಂದಿಗೆ ಮಾತನಾಡುತ್ತಲೇ ಆಹಾರ ಅಣಿಗೊಳಿಸುತ್ತಾರೆ. ಆಹಾರದಲ್ಲಿ ವ್ಯತ್ಯಾಸ ಆಗಿ ಆನೆಗಳಿಗೆ ಬೇಧಿಯಾಗುವ ಸನ್ನಿವೇಶವೂ ಇರುತ್ತದೆ. ಇದರೊಟ್ಟಿಗೆ ಜಂಬೂಸವಾರಿ ದಿನವೂ ಆನೆಗಳಿಗೆ ಆಹಾರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಲಕ್ಷಾಂತರ ಜನರ ಎದುರು ಗಲಿಬಿಲಿ ಬೀಳದಂತೆ ಆನೆಗಳು ನೋಡಿಕೊಳ್ಳಲು ಸ್ಪೆಷಲ್‌ ಆಹಾರದ ಪೊಟ್ಟಣಗಳನ್ನು ಗರಿಕೆಯಲ್ಲಿ ಕಟ್ಟಿಕೊಂಡು ಆನೆಗಳಿಗೆ ನೀಡುತ್ತಲೇ ಹೋಗಬೇಕಾಗುತ್ತದೆ. ಇದೆಲ್ಲವನ್ನೂ ರಂಗರಾಜು ಮತ್ತವರ ತಂಡ ಅಣಿಗೊಳಿಸುತ್ತದೆ. ಆನೆಗಳು ದಸರಾ ಮುಗಿದಾಗ ಮೈ ಕೈ ತುಂಬಿಕೊಂಡು ತಮ್ಮೂರಿಗೆ ಹೊರಟು ನಿಂತಾದ ರಂಗರಾಜುಗೂ ಎರಡು ತಿಂಗಳು ಅವುಗಳನ್ನು ಬಾಣಂತಿ ರೀತಿ ನೋಡಿಕೊಂಡ ಖುಷಿ ಒಂದು ಕಡೆಯಾದರೂ ಊಟೋಪಚಾರ ಮಾಡಿಸಿಕೊಂಡ ಆನೆಗಳು ಹೊರಟವಲ್ಲ ಎನ್ನುವ ಬೇಸರ. ಆದರೂ ಕಾಯಕ ನಿರಂತರ ಎಂದು ನಿಟ್ಟುಸಿರು ಬಿಡುತ್ತಲೇ ಮುಂದೆ ಸಾಗುತ್ತಾರೆ ರಂಗರಾಜು.

ತಾಯಿ ಚಾಮುಂಡೇಶ್ವರಿ ತಾಯಿಯ ವಿಗ್ರಹದೊಂದಿಗೆ ಚಿನ್ನದ ಅಂಬಾರಿ ಹೊತ್ತ ಆನೆ ಗಾಂಭಿರ್ಯದೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ಎದುರಿಗೆ ನಿಂತ ಲಕ್ಷಾಂತರ ಮಂದಿಗೆ ಉಘೇ ಉಘೇ ಎನ್ನುವ ಭಕ್ತಿ ಭಾವ. ಈ ಭಕ್ತಿ ಭಾವದ ಹಿಂದೆ ಎಷ್ಟೆಲ್ಲಾ ಶ್ರಮ. ಅದುವೇ ಮೈಸೂರು ದಸರಾ ಹಾಗೂ ಆನೆಗಳ ಪ್ರೀತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ