ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara: ಮಳೆಯೊಂದಿಗೆ ಬೆಳಕಿನ ವೈಭವ: ಮೈಸೂರು ದಸರಾ ದೀಪಾಲಂಕಾರದ ಸೊಬಗಿಗೆ ಇಂದು ತೆರೆ

Mysore Dasara: ಮಳೆಯೊಂದಿಗೆ ಬೆಳಕಿನ ವೈಭವ: ಮೈಸೂರು ದಸರಾ ದೀಪಾಲಂಕಾರದ ಸೊಬಗಿಗೆ ಇಂದು ತೆರೆ

Umesha Bhatta P H HT Kannada

Nov 05, 2023 10:35 AM IST

ಮೈಸೂರು, ಮಳೆ ಮತ್ತು ವಿದ್ಯುತ್‌ ದೀಪಾಲಂಕಾರ. ಚಿತ್ರ: ರವಿಕೀರ್ತಿಗೌಡ

    • Mysuru Dasara Illuminations  ಮೈಸೂರು ದಸರಾದ ನೆನಪುಗಳಿಗೆ ಹನಿಗಳ ಲೀಲೆಯೊಂದಿಗೆ ಭಾನುವಾರ ತೆರೆ. 22 ದಿನಗಳಿಂದ ಮೈಸೂರನ್ನು ಜಗಮಗಿಸಿದ ಈ ಬಾರಿಯ ಬೆಳಕಿನ ವೈಭವ ಕೊನೆಗೊಳ್ಳಲಿದೆ.
ಮೈಸೂರು, ಮಳೆ ಮತ್ತು ವಿದ್ಯುತ್‌ ದೀಪಾಲಂಕಾರ. ಚಿತ್ರ: ರವಿಕೀರ್ತಿಗೌಡ
ಮೈಸೂರು, ಮಳೆ ಮತ್ತು ವಿದ್ಯುತ್‌ ದೀಪಾಲಂಕಾರ. ಚಿತ್ರ: ರವಿಕೀರ್ತಿಗೌಡ (Ravikeerthi Gowda)

ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರಾ ಚೆಲ್ಲಿದೆ ನಗೆಯ ಪನ್ನೀರಾ ಎನ್ನುವ ಹಾಡನ್ನು ಯಾರು ಕೇಳಿಲ್ಲ. ದಸರಾ ಬಂದಾಗ ಮಾತ್ರವಲ್ಲದೇ ಮೈಸೂರಿನ ಸೊಬಗು ನೊಡಲು ವರ್ಷವಿಡೀ ಅವಕಾಶವಿದೆ. ಈ ಸಾಲಿನ ದಸರಾ ಬೆಳಕಿನ ವೈಭವ ವೀಕ್ಷಣೆಗೆ ಭಾನುವಾರವೇ ಕೊನೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ಉದ್ಯಮಿ ಪುತ್ರಿ ಪ್ರೇಮಕಥನ; ಮನೆಯಲ್ಲಿದ್ದ1 ಕೋಟಿ ರೂ. ಜತೆ ಪರಾರಿ

Bangalore rains: ಬೆಂಗಳೂರಿನಲ್ಲಿ ನಿಲ್ಲದ ಮಳೆ, ಇನ್ನೂ ಎರಡು ದಿನ ಮಳೆ ಮುನ್ಸೂಚನೆ

Hassan Scandal: ಹಾಸನ ಸಂತ್ರಸ್ತೆ ಅಪಹರಣ ಪ್ರಕರಣ, ಮಾಜಿ ಸಚಿವ ರೇವಣ್ಣಗೆ ಜಾಮೀನು ಮಂಜೂರು, ಬಿಡುಗಡೆ ಯಾವಾಗ?

Vande Bharath Train: ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಆದರೆ ದಸರಾ ವೇಳೆ ಮೈಸೂರಿನ ಸೊಬಗು ಭಿನ್ನವಾಗಿರುತ್ತದೆ. ನಾಲ್ಕುನೂರು ವರ್ಷಕ್ಕೂ ಮಿಗಿಲಾಗಿ ದಸರಾ ಇತಿಹಾಸವಿದ್ದರೂ ಬೆಳಕಿನ ಸೊಬಗು ಸವಿಯುವ ಅವಕಾಶ ದೊರೆತಿದ್ದು ದಶಕದಿಂದ ಈಚೆಗೆ. ಈಗಂತೂ ಬೆಳಗಿನ ವೈಭವವಂತೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದು ಇತರೆ ನಗರಗಳ ಉತ್ಸವಗಳಿಗೂ ವಿಸ್ತರಣೆಗೊಳ್ಳುತ್ತಿದೆ.

ಮೈಸೂರು ದಸರಾ ಅಂಗವಾಗಿ ರೂಪಿಸಿದ್ದ ದೀಪಾಲಂಕಾರ ಮಲ್ಲಿಗೆ ನಗರಿಯ ಸೊಬಗನ್ನು ಹೆಚ್ಚಿಸಿತ್ತು. ಈ ಬಾರಿ 22 ದಿನಗಳ ದೀಪಾಲಂಕಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದರೆಡು ದಿನದಿಂದ ಮೈಸೂರಿನಲ್ಲಿ ಮಳೆಯ ವಾತಾವರಣ. ಅದರ ನಡುವೆಯೇ ಬೆಳಕಿನ ಸೌಂದರ್ಯವನ್ನು ಸವಿದರು ಪ್ರವಾಸಿಗರು ಹಾಗೂ ಮೈಸೂರಿಗರು.

ವಿಶೇಷ ದೀಪಾಲಂಕಾರ

ಮೈಸೂರು ಅರಮನೆಗೆ ವಾರಾಂತ್ಯ ಹಾಗೂ ರಜಾ ದಿನ ದೀಪಾಲಂಕಾರವನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತದೆ. ವಿಶೇಷ ಸನ್ನಿವೇಶ ಇದ್ದಾಗ ವೃತ್ತ, ಕಟ್ಟಡಗಳು ಮೈಸೂರಲ್ಲಿ ದೀಪಾಲಂಕಾರ ಕಾಣುತ್ತವೆ. ಆದರೆ ದಸರಾ ಬಂದಾಗ ಇಡೀ ಮೈಸೂರನ್ನೇ ಬೆಳಕಿನಿಂದ ಕಂಗೊಳಿಸುವಂತೆ ಮಾಡಿದ್ದು ದಶಕದ ಹಿಂದೆ. ಮೊದಲೆಲ್ಲಾ ಅರಮನೆ, ಚಾಮುಂಡಿಬೆಟ್ಟದ ಸುಸ್ವಾಗತ ಸಹಿತ ಕೆಲವೇ ಕಡೆ ದೀಪಾಲಂಕಾರ ಇತ್ತು. ಆನಂತರ ಅದು ವಿಸ್ತರಣೆಯಾಯಿತು. ಅಂದರೆ ಪ್ರಮುಖ ವೃತ್ತ, ರಸ್ತೆ, ಕಟ್ಟಡಗಳು, ಮರಗಳು, ಪಾರಂಪರಿಕ ಮಹತ್ವದ ತಾಣಗಳು, ಉದ್ಯಾನ ಸಹಿತ ಎಲ್ಲೆಡೆ ದೀಪಾಲಂಕಾರವನ್ನು ವಿಸ್ತರಿಸಲಾಯಿತು. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ ಇಂತಹ ಪ್ರಯೋಗಕ್ಕೆ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಬಂದಿತು. ಅಲ್ಲಿಂದ ಪ್ರತಿ ವರ್ಷ ದಸರಾ ವೇಳೆ ದೀಪಾಲಂಕಾರ ವಿಶೇಷ ಆಕರ್ಷಣೆಯಾಗಿಯೇ ಸೇರಿಕೊಂಡಿತು. ಹಸಿರು ಚಪ್ಪರದಡಿ ನಡೆದು ಹೋಗುತ್ತಿದ್ದರೆ ಆ ಪುಳಕವೇ ಬೇರೆ. ನಾಲ್ಕೈದು ವರ್ಷದಿಂದೀಚೆಗೆ ಬಗೆಬಗೆಯ ಅಲಂಕಾರದ ಮೂಲಕ ಮೈಸೂರನ್ನು ದೀಪಧಾರಿಣಿ ರೂಪದಲ್ಲಿ ಕಂಗೊಳಿಸುವಂತೆ ಮಾಡುತ್ತಿರುವುದು ವಿಶೇಷ. ಅರಮನೆ ಸುತ್ತಮತ್ತಲಿನ ರಸ್ತೆಯಂತೂ ಈ ಅವಧಿಯಲ್ಲಿ ಕಂಗೊಳಿಸುವ ಪರಿಯೇ ಬೇರೆ. ಅದನ್ನು ಕಣ್ತುಂಬಿಕೊಂಡು ಸೆರೆ ಹಿಡಿದುಕೊಳ್ಳಲು ಬಂದು ಹೋಗುವವರ ಸಂಖ್ಯೆ ಅದೆಷ್ಟೇ. ಮೈಸೂರು ಮಾತ್ರವಲ್ಲದೇ ಕರ್ನಾಟಕದ ವಿವಿಧ ಜಿಲ್ಲೆ, ದಕ್ಷಿಣ, ಉತ್ತರ ಭಾರತದಿಂದಲೂ ಪ್ರವಾಸಿಗರು ಇದನ್ನು ಸವಿದಿದ್ದಾರೆ.

ಈ ರೀತಿ ವಿಭಿನ್ನವಾಗಿ ದೀಪಾಲಂಕಾರ ಮಾಡುವದನ್ನು ನಾನು ನೋಡಿಲ್ಲ. ಹಿಂದಿನ ವರ್ಷಗಳ ವಿಡಿಯೋ ನೋಡಿ ಖುಷಿಪಟ್ಟಿದ್ದೆ. ಈ ಬಾರಿ ದಸರಾ ಪ್ರವಾಸ ಹಾಕಿಕೊಂಡಿದ್ದೆವು. ಇಡೀ ಕುಟುಂಬ ದೀಪಾಲಂಕಾರವನ್ನು ಸವಿದೆವು. ಆಹಾ ಎಂತಹ ಸೊಬಗು. ಇಡೀ ದೀಪಾಲಂಕಾರದ ಪರಿಕಲ್ಪನೆಯೇ ಇಷ್ಟವಾಯಿತು ಎಂದು ಮಹಾರಾಷ್ಟ್ರದಿಂದ ಬಂದಿದ್ದ ಪ್ರವಾಸಿಗ ರಾಹುಲ್‌ ಕದಂ ಖುಷಿಯಿಂದಲೇ ಹೇಳಿಕೊಂಡರು.

ಅಂಬಾರಿ ಮೇಲೆ ಸವಾರಿ

ವಿದ್ಯುತ್‌ ದೀಪಾಲಂಕಾರ ನೋಡಲು ಹಲವು ಮಾರ್ಗಗಳಿವೆ. ಅದರಲ್ಲಿ ನಡೆದುಕೊಂಡು ವೀಕ್ಷಿಸುವುದು. ಸ್ನೇಹಿತರು ಇಲ್ಲವೇ ಕುಟುಂಬದವರ ಜತೆ ಬೈಕ್‌ನಲ್ಲಿ ಏರಿ ಹೊರಟರೆ ಆ ಖುಷಿಯೇ ಬೇರೆ. ಕಾರಿನಲ್ಲಿಯೂ ಕುಳಿತು ಇಡೀ ದೀಪಾಲಂಕಾರ ವೀಕ್ಷಿಸಲೂ ಅವಕಾಶವಿದೆ. ಹೆಚ್ಚಿನ ಜನ ಬೈಕ್‌ ಇಲ್ಲವೇ ಕಾರ್‌ನಲ್ಲಿಯೂ ಹೊರಟರು. ಇನ್ನು ಆಟೋದಲ್ಲೂ ಕೆಲವರು ಸುತ್ತು ಹಾಕಿ ಬಂದರೆ, ಹಲವರಿಗೆ ಪಾರಂಪರಿಕ ಟಾಂಗಾ ಸವಾರಿಯೂ ಸಾಥ್‌ ನೀಡಿತು. ಇದರ ಜತೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ( KSTDC) ಕೂಡ ಇದಕ್ಕೆ ಕೈಜೋಡಿಸಿದೆ. ಮೇಲೆ ನಿಂತು ನೋಡುವಂತಹ ಅಂಬಾರಿ ಬಸ್‌ ಸೇವೆಯನ್ನು ಒದಗಿಸಿದ ಕೆಎಸ್‌ಟಿಡಿಸಿ ಪ್ರಯತ್ನಕ್ಕೆ ನಿರೀಕ್ಷೆ ಮೀರಿ ಬೆಂಬಲ ದೊರೆಯಿತು. ಸಂಜೆ ನಂತರ ಐದಾರು ಟ್ರಿಪ್‌ಗಳಲ್ಲಿ ಕುಟುಂಬ ಸಮೇತವಾಗಿ ಜನ ಸುತ್ತು ಹಾಕಿ ಮೇಲಿಂದಲೇ ಬೆಳಕಿನ ಅಂದದರಮನೆಯನ್ನು ಕಣ್ತುಂಬಿಕೊಂಡು ಖುಷಿ ಅನುಭವಿಸಿದ್ದು ಕಂಡು ಬಂದಿತು.

ಮೈಸೂರಿನ ರವಿಕೀರ್ತಿಗೌಡ ಅವರು ಸೊಬಗಿನ ಕ್ಷಣಗಳನ್ನು ಸ್ವರ್ಗ ನಮ್ಮ ಮೈಸೂರು ಎನ್ನುವ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಸಹಸ್ರಾರು ಮಂದಿ ಫೋಟೋಗಳನ್ನೂ ದಸರಾ ವೇಳೆ ಹಂಚಿಕೊಂಡಿದ್ದಾರೆ.

ಇಂದು ಕೊನೆ

ಏಳು ಕೋಟಿ ರೂ. ಗೂ ಹೆಚ್ಚು ವೆಚ್ಚ ಮಾಡಿ ದೀಪಾಲಂಕಾರ ಅಣಿಗೊಳಿಸುತ್ತದೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ. ಇದಕ್ಕಾಗಿ ಹೆಚ್ಚುವರಿ ವಿದ್ಯುತ್‌ ಕೂಡ ವ್ಯಯ ಮಾಡುತ್ತದೆ. ಒಂದು ಕ್ಷಣವೂ ವಿದ್ಯುತ್‌ ಕಡಿತವಾಗದ ರೀತಿ ಫೀಡರ್‌ ಮಾರ್ಗಗಳನ್ನು ಬಲಗೊಳಿಸುತ್ತದೆ. ಈ ಬಾರಿ ಬರದ ವಾತಾವರಣವಿತ್ತು. ಜನರಿಗೆ ಸರಿಯಾಗಿ ವಿದ್ಯುತ್‌ ನೀಡುತ್ತಿಲ್ಲ. ರೈತರ ಪಂಪ್‌ಸೆಟ್‌ಗೂ ವಿದ್ಯುತ್‌ ಇಲ್ಲ. ಲೋಡ್‌ ಶೆಡ್ಡಿಂಗ್‌ ಬೇರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದವು. ಇಂತಹ ಆರೋಪಗಳ ನಡುವೆ ದಸರಾದ ವೈಭವ ಕುಂದದಂತೆ ಚೆಸ್ಕಾಂ ಅಧಿಕಾರಿಗಳು ನೋಡಿಕೊಂಡರು. ದೀಪಾಲಂಕಾರ ಅವಧಿಯನ್ನು ವಿಸ್ತರಿಸುವಂತೆ ಪ್ರವಾಸೋದ್ಯಮ, ಹೊಟೇಲ್‌ ವಲಯದವರೂ ಕೋರಿಕೊಂಡಿದ್ದರು. ಇದರಿಂದ ಈ ಬಾರಿ 22 ದಿನಗಳಿಗೆ ಇದು ವಿಸ್ತರಣೆಗೊಂಡಿತು.

ಇದರ ನಡುವೆಯೂ ಈ ಬಾರಿಯ ದೀಪಾಲಂಕಾರ ಭಾನುವಾರ ರಾತ್ರಿಗೆ ಮುಕ್ತಾಯವಾಗುತ್ತಿದೆ. "ಎಂಥ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು" ಹಾಡು ಗುನುಗುತ್ತಲೇ ಮೈಸೂರು ದಸರಾ ಬೆಳಕಿನ ವೈಭವ ವೀಕ್ಷಿಸಲು ಅವಕಾಶ. ಒಂದು ಸುತ್ತು ಹಾಕಿ. ಈ ವರ್ಷದ ದಸರಾ ನೆನಪು ಹಸಿರಾಗಿಸಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ