logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಪಾದಕೀಯ: ಮಹಿಳೆಯರ ಖಾತೆಗೆ ಹಣ ಜಮೆ ಆಗುವ ಗೃಹಲಕ್ಷ್ಮೀ ಯೋಜನೆ ಜಾರಿ ಮುನ್ನ ಚಿಟ್‌ಫಂಡ್‌ ನಿಯಮ ಕಠಿಣವಾಗಲಿ

ಸಂಪಾದಕೀಯ: ಮಹಿಳೆಯರ ಖಾತೆಗೆ ಹಣ ಜಮೆ ಆಗುವ ಗೃಹಲಕ್ಷ್ಮೀ ಯೋಜನೆ ಜಾರಿ ಮುನ್ನ ಚಿಟ್‌ಫಂಡ್‌ ನಿಯಮ ಕಠಿಣವಾಗಲಿ

HT Kannada Desk HT Kannada

Jul 15, 2023 07:38 AM IST

google News

ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ (ಪ್ರಾತಿನಿಧಿಕ ಚಿತ್ರ)

    • ಒಮ್ಮೆ ಮನೆಯೊಡತಿಯ ಖಾತೆಗೆ ಹಣ ಜಮೆ ಮಾಡಿದ ಮೇಲೆ ಸರ್ಕಾರದ ಜವಾಬ್ದಾರಿ ಔಪಚಾರಿಕವಾಗಿ ಮುಗಿಯುತ್ತದೆ. ಆ ಹಣವನ್ನು ಹೇಗೆ ವಿನಿಯೋಗಿಸಬೇಕು ಎನ್ನುವುದನ್ನು ನಿರ್ದೇಶಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ ಎನ್ನುವುದು ನಿಜ. ಆದರೆ ಈ ಹಣವನ್ನು ಚೀಟಿಗಳಲ್ಲಿ ತೊಡಗಿಸಿದರೆ ವಂಚನೆ ಆಗದಂತೆ ಕಾನೂನು ಬಿಗಿಗೊಳಿಸಬೇಕಾದ ಜವಾಬ್ದಾರಿಯಂತೂ ಖಂಡಿತಾ ಸರ್ಕಾರಕ್ಕೆ ಇದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ (ಪ್ರಾತಿನಿಧಿಕ ಚಿತ್ರ)
ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ (ಪ್ರಾತಿನಿಧಿಕ ಚಿತ್ರ)

ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ‘ಗೃಹಲಕ್ಷ್ಮೀ’ ಕೂಡ ಒಂದು. ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಾಕುವ ಈ ಯೋಜನೆಗೆ ಆಗಸ್ಟ್ ಹದಿನೈದಕ್ಕೆ ಚಾಲನೆ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಸ್ವತಃ ಮುಖ್ಯಮಂತ್ರಿಗಳು ಸುಳಿವು ನೀಡಿದ್ದಾರೆ. ಈ ಒಂದು ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಮೊತ್ತ 30,000 ಕೋಟಿ ರೂಪಾಯಿ. ಇಡೀ ಕರ್ನಾಟಕದಲ್ಲಿ ಈ ವರ್ಷ ಇಷ್ಟು ದೊಡ್ಡ ಮೊತ್ತ ಓಡಾಡುವಾಗ ಸರ್ಕಾರ ಸಹ ಮುಂದಿನ ಆಗುಹೋಗುಗಳನ್ನು ಗಮನದಲ್ಲಿರಿಸಿಕೊಂಡು ಒಂದು ಮುಖ್ಯವಾದ ಕಾನೂನು ತಿದ್ದುಪಡಿ ತರುವ ಅಗತ್ಯ ಎದ್ದು ಕಾಣುತ್ತಿದೆ.

ಪೊಲೀಸ್ ಠಾಣೆಗಳ ಮೆಟ್ಟಿಲೇರುವ ಪ್ರಕರಣಗಳನ್ನು ಪಕ್ಕಕ್ಕಿಟ್ಟು ಹೇಳುವುದಾದರೂ ರಾಜ್ಯದಲ್ಲಿ ಚೀಟಿ ವ್ಯವಹಾರದಲ್ಲಿ ಹಣ ಕಳೆದುಕೊಳ್ಳುವ ಪ್ರಮಾಣ ಸಾವಿರ ಕೋಟಿಗಳ ಲೆಕ್ಕ ದಾಟುತ್ತದೆ. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಇಡುವ ಹಣಕ್ಕೆ ಕಡಿಮೆ ಬಡ್ಡಿ ಅನ್ನುವ ಕಾರಣಕ್ಕೋ, ಅಂಥ ಹಣದಿಂದ ಬರುವ ಅಲ್ಪ- ಸ್ವಲ್ಪ ಮೊತ್ತಕ್ಕೂ ತೆರಿಗೆ ಹಾಕಿಬಿಡಬಹುದು ಎಂಬ ಅಳುಕಿಗೋ ಅಥವಾ ಚೀಟಿ ಹಾಕುವುದರಿಂದ ಒಟ್ಟಿಗೆ ದೊಡ್ಡ ಮೊತ್ತ ಕೈ ಸೇರುತ್ತದೆ ಹಾಗೂ ಅದರಿಂದ ಒಂದು ದೊಡ್ಡ ಖರ್ಚು ನಿಭಾಯಿಸಬಹುದು ಅಂತಲೋ ಹೆಚ್ಚಾಗಿ ಮಹಿಳೆಯರು ಚೀಟಿ ಹಾಕುತ್ತಾರೆ.

ಚೀಟಿ ವ್ಯವಹಾರಗಳು ಹಲವು ಸ್ವರೂಪಗಳಲ್ಲಿ ನಡೆಯುತ್ತವೆ. ಚಿನ್ನದ ಚೀಟಿ, ಪಟಾಕಿ ಚೀಟಿ, ಮಾಂಸದ ಚೀಟಿ ಅಂತ ನಾನಾ ರೀತಿಯಲ್ಲಿ ಈ ವ್ಯವಹಾರ ವ್ಯಾಪಿಸಿದೆ. ಬೆಂಗಳೂರಿನಂಥ ನಗರಗಳಲ್ಲಿ ಕೋಟ್ಯಂತರ ರೂಪಾಯಿಯ ಚೀಟಿ ವಂಚನೆಗಳನ್ನು ಆಗಾಗ ಮಾಧ್ಯಮಗಳು ವರದಿ ಮಾಡುತ್ತಿರುತ್ತವೆ. ಇನ್ನು ರಾಜ್ಯವ್ಯಾಪಿ ಎಂದು ಗಮನಿಸಿದರೆ ಈ ಪ್ರಮಾಣ ಲೆಕ್ಕ ಹಾಕುವುದು ಸುಲಭವಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಮನೆಯೊಡತಿ ಖಾತೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಜಮೆ ಮಾಡುವುದಕ್ಕೆ ಮುಂದಾಗಿದೆ. ಈ ಹಣವು ಕುಟುಂಬಗಳ ಅಗತ್ಯಕ್ಕೆ ಬಳಕೆಯಾಗಬೇಕೇ ವಿನಾ ಮೋಸ ಮಾಡುವವರಿಗೆ ಸಿಗಬಾರದು.

ಈಗಾಗಲೇ ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಜಾರಿಯಾಗಿದೆ. ‘ಶಕ್ತಿ’ ಯೋಜನೆಗೆ ಮೊದಲು ಬಸ್‌ ಟಿಕೆಟ್‌ಗಾಗಿ ಹಣ ಖರ್ಚು ಮಾಡುತ್ತಿದ್ದ ಮಹಿಳೆಯರು ಈಗ ಆ ಹಣವನ್ನು ಭವಿಷ್ಯಕ್ಕಾಗಿ ಉಳಿಸಲು ಯೋಚಿಸುತ್ತಿದ್ದಾರೆ. ದುಡಿಯುವ ಮಹಿಳೆಯರಿಗೆ ಈಗ ತಿಂಗಳಿಗೆ 1ರಿಂದ 3 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ಇದೀಗ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಎರಡು ಸಾವಿರ ರೂಪಾಯಿ ಖಾತ್ರಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎಂದಾಗ ಅದನ್ನು ಹೆಚ್ಚುವರಿ ಆದಾಯ ಎಂದು ಪರಿಗಣಿಸಿ, ಚೀಟಿ ಹಾಕಬಹುದಾದ ಮಹಿಳೆಯರ ಸಂಖ್ಯೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಮನೆಗಳಲ್ಲಿ ಕಸಮುಸರೆ ಮಾಡುವವರು, ಶಾಲೆಗಳಲ್ಲಿ ಆಯಾ ಕೆಲಸ ಮಾಡುವವರು, ಕೃಷಿ ಕಾರ್ಮಿಕ ಮಹಿಳೆಯರೂ ಸೇರಿದಂತೆ ಹಲವು ಶ್ರಮಜೀವಿಗಳು ಭವಿಷ್ಯದ ಸುಂದರ ಕನಸು ಸುಭದ್ರಗೊಳಿಸಿಕೊಳ್ಳಲು ಗೃಹಲಕ್ಷ್ಮೀ ಹಣವನ್ನು ಚೀಟಿಗೆಂದು ಹಾಕುವ ಅಪಾಯ ಇರುತ್ತದೆ.

ಗೃಹಲಕ್ಷ್ಮೀ ಯೋಜನೆಯಡಿ ಹಣವನ್ನು ಒಮ್ಮೆ ಮನೆಯೊಡತಿಯ ಖಾತೆಗೆ ಜಮೆ ಮಾಡಿದ ಮೇಲೆ ಸರ್ಕಾರದ ಜವಾಬ್ದಾರಿ ಔಪಚಾರಿಕವಾಗಿ ಮುಗಿಯುತ್ತದೆ. ಆ ಹಣವನ್ನು ವಿನಿಯೋಗಿಸುವ ರೀತಿಯನ್ನು ನಿರ್ದೇಶಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ ಎನ್ನುವುದೂ ನಿಜ. ಆದರೆ ಈ ಹಣವನ್ನು ಚೀಟಿಗಳಲ್ಲಿ ತೊಡಗಿಸಿದರೆ ಹೂಡಿಕೆ ಮಾಡಿದವರಿಗೆ ವಂಚನೆ ಆಗದಂತೆ ಕಾನೂನು ಬಿಗಿಗೊಳಿಸಬೇಕಾದ ಜವಾಬ್ದಾರಿಯಂತೂ ಖಂಡಿತಾ ಸರ್ಕಾರಕ್ಕೆ ಇದೆ. ಎಲ್ಲ ಬಗೆಯ ಚೀಟಿ ವ್ಯವಹಾರಗಳು, ಲೇವಾದೇವಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ರಚಿಸುವುದು ಹಾಗೂ ಅದರ ಪಾಲನೆ ಈಗಿನ ತುರ್ತು ಅಗತ್ಯ ಎನಿಸಿದೆ.

ಚೀಟಿ ವ್ಯವಹಾರ ನಡೆಸುವುದಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಕಾನೂನು, ನಿಯಮಾವಳಿಗಳು ಇವೆಯಾದರೂ ಅದು ಬಲಿಷ್ಠವಾಗಿಲ್ಲ ಅಥವಾ ಅದನ್ನು ಪಾಲಿಸುವವರ ಪ್ರಮಾಣ ಬಹಳ ಕಡಿಮೆ. ಎಷ್ಟೋ ಸಲ ವಂಚನೆಗೆ ಒಳಗಾದವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ನ್ಯಾಯ ಮರೀಚಿಕೆಯೇ ಆಗಿ ಉಳಿಯುತ್ತದೆ. ಮುಖ್ಯವಾಗಿ ಬ್ಯಾಂಕ್‌ ವ್ಯವಹಾರಗಳ ಬಗ್ಗೆ ಹಿಂಜರಿಕೆ ಇರುವ ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಶ್ರಮಿಕರ ಪಾಲಿಗೆ ಇದು ಆಕರ್ಷಕ ಉಳಿತಾಯ ಮಾರ್ಗವಾಗಿ ಗೋಚರಿಸುತ್ತದೆ. ತಮ್ಮ ದುಡಿಮೆಯ ಒಂದು ಪಾಲನ್ನೋ ಅಥವಾ ತಮ್ಮ ಸಂಸಾರದ ಖರ್ಚಿನ ಒಂದು ಭಾಗವನ್ನೋ ಉಳಿತಾಯ ಮಾಡಿ, ಅದನ್ನು ಚೀಟಿ ಹಾಕುತ್ತಾರೆ. ಅಂಥವರ ಹಣಕ್ಕೆ ಕಾನೂನಿನ ರಕ್ಷಣೆ ದೊರಕುವಂತಾಗಬೇಕು. ಇದನ್ನು ಖಾತ್ರಿಪಡಿಸುವುದು ಸಹ ಸರ್ಕಾರದ ಜವಾಬ್ದಾರಿಯೇ ಆಗಿರುತ್ತದೆ.

ಈ ಎರಡು ಸಾವಿರ ರೂಪಾಯಿ ಮೊತ್ತವನ್ನು ಮಹಿಳೆಯರ ಖಾತೆಗೆ ಜಮೆ ಮಾಡುವ ಉದ್ದೇಶವು ಹಣದುಬ್ಬರದಿಂದ ಬಡವರು ಎದುರಿಸುತ್ತಿರುವ ಸಂಕಷ್ಟಕ್ಕೆ ತುಸುವಾದರೂ ಪರಿಹಾರ ಸಿಗಲಿ ಎನ್ನುವುದೇ ಇರಬಹುದು. ಆದರೆ ಉಳಿತಾಯದ ಮನಸ್ಥಿತಿ ಇರುವ ಹೆಣ್ಣುಮಕ್ಕಳಿಗೆ ಚಿಟ್‌ಫಂಡ್‌ಗಳು ಆಕರ್ಷಕ ಎನಿಸುವುದರಲ್ಲಿ ಅಚ್ಚರಿಯಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರವು ಚಿಟ್ ಫಂಡ್ ನಡೆಸುವಂಥ ವ್ಯಕ್ತಿಗಳು, ಸಂಸ್ಥೆಗಳಿಗೆ ಬಿಗಿಯಾದ ಕಾನೂನು ರೂಪಿಸಬೇಕಿದೆ.

ಗೃಹಲಕ್ಷ್ಮೀ ಯೋಜನೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳೂ ಆರ್‌ಡಿ ಥರದ ವ್ಯವಸ್ಥಿತ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಆಂದೋಲನಗಳನ್ನು ನಡೆಸಬೇಕಿದೆ. ಜನರು ಹಣವನ್ನು ತಮ್ಮ ಅಗತ್ಯಕ್ಕೆಂದು ಬಳಸಿದರೆ ಅದು ಖಂಡಿತ ತಪ್ಪಲ್ಲ. ಹಾಗೆಂದು ಸರ್ಕಾರ ಕೊಡುವ ಹಣವನ್ನು ಮಕ್ಕಳ ಓದಿಗೆಂದೋ, ಮದುವೆಯಂಥ ಖರ್ಚಿಗೆಂದೂ ಅವರು ಉಳಿಸುತ್ತಾರೆ ಎಂದಾದರೆ ಅದನ್ನು ಸುಯೋಗ್ಯ ಮಾರ್ಗದಲ್ಲಿ, ತಮ್ಮ ಕಷ್ಟಕ್ಕೆ ಒದಗುವ ರೀತಿಯಲ್ಲಿ ಉಳಿತಾಯ ಮಾಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು, ಸೌಲಭ್ಯಗಳನ್ನು ಸರ್ಕಾರ ಮತ್ತು ಬ್ಯಾಂಕ್‌ಗಳು ಕಲ್ಪಿಸಿಕೊಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ